ಮೈಸೂರು: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗಾಗಿ ಮಾರ್ಚ್ 12ರ ಭಾನುವಾರ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ (Modi visit to Mandya) ಅವರು ಮಂಡ್ಯದಲ್ಲಿ ಸುಮಾರು ಎರಡು ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಮೋದಿ ಅವರು ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದುವರೆ ಲಕ್ಷ ಜನ ಭಾಗವಹಿಸಲಿದ್ದಾರೆ. ಈ ಮಾಹಿತಿಯನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಶುಕ್ರವಾರ ಮೈಸೂರಿನಲ್ಲಿ ನೀಡಿದರು.
ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ತೆರಳಲಿದ್ದಾರೆ. ಮಂಡ್ಯದ ಐಬಿ ಸರ್ಕಲ್‌ನಿಂದ ನಂದ ಸರ್ಕಲ್‌ವರೆಗೆ ಸುಮಾರು 2 ಕಿ.ಮೀ. ದೂರದವರೆಗೆ ಅವರು ರೋಡ್ ಶೋ ಮಾಡಲಿದ್ದಾರೆ. ಈ ಎರಡು ಕಿ.ಮೀ. ಅಂತರದಲ್ಲಿ ಸುಮಾರು 30ರಿಂದ 40 ಸಾವಿರ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೋದಿ ಅವರಿಗೆ ಕೈಬೀಸಲಿದ್ದಾರೆ ಎಂದು ತಿಳಿಸಿದರು.
ಮಂಡ್ಯದ ಬೂದನೂರು ಬಳಿ ಸುಮಾರು ಬೂದನೂರು ಬಳಿ 500 ಕಲಾ ತಂಡಗಳು ಪ್ರದರ್ಶನ ನೀಡಲಿದ್ದು, ಮೋದಿ ಅವರು ಅಲ್ಲಿ ಕಾರಿನಿಂದ ಇಳಿದು ಕಲಾ ಪ್ರದರ್ಶನ ವೀಕ್ಷಿಸುತ್ತಲೇ ಸುಮಾರು 50 ಮೀಟರ್ ಹೆದ್ದಾದಿಯಲ್ಲಿ ನಡೆಯಲಿದ್ದಾರೆ ಎಂದು ಪ್ರತಾಪ್‌ಸಿಂಹ ತಿಳಿಸಿದರು.
ಬೂದನೂರಿನಿಂದ ನಡೆಯುತ್ತಲೇ ಪ್ರಧಾನಿ ಮೋದಿ ಅವರು ಸುಮಾರು 12 ಗಂಟೆಯ ಹೊತ್ತಿಗೆ ಗೆಜ್ಜಲಗೆರೆ ಬಳಿ ನಿರ್ಮಿಸಿರುವ ಬೃಹತ್ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳು, ಅಮೃತ್, ಜಲ ಜೀವನ್, ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳ ಫಲಾನುಭವಿಗಳು ಸೇರಿ ಸುಮಾರು ಒಂದೂವರೆ ಲಕ್ಷ ಜನರು ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದೆ.
ಈ ಕಾರ್ಯಕ್ರಮದಲ್ಲಿ ಬಹು ನಿರೀಕ್ಷೆಯ ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದರ ಜತೆಗೆ ಶ್ರೀರಂಗ ಪಟ್ಟಣದಿಂದ ಮಂಡ್ಯಕ್ಕೆ 135 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ, 1500 ಕೋಟಿ ರೂ. ವೆಚ್ಚದ ಜಲ ಜೀವನ್ ಮಿಷನ್, ಮೈಸೂರು- ಕುಶಾಲನಗರ ಚತುಷ್ಪಥ ಯೋಜನೆಗೂ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಇದನ್ನೂ ಓದಿ : Bangalore- Mysore Express way : ಕಾವೇರಿ ಹೆಸರೇ ಬೆಟರ್, ಏರ್‌ಪೋರ್ಟ್‌ಗೆ ನಾಲ್ವಡಿ ಹೆಸರಿಡ್ತೀವಿ ಎಂದ ಪ್ರತಾಪ್