ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದಿದ್ದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡುವಾಗ, ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರ ಕುರಿತು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಗುರುವಾರ ರಾತ್ರಿ ಫೇಸ್‌ಬುಕ್ ಲೈವ್ ಮೂಲಕ ಸುಮಾರು ಎಂಟು ನಿಮಿಷ ನಲಪಾಡ್ ಮಾತನಾಡಿದ್ದಾರೆ. ಮೊಟ್ಟೆ ಖರೀದಿಯಲ್ಲಿ ಅಕ್ರಮ ಮಾಡಿಕೊಂಡು ಅದೇ ಹಣದಲ್ಲಿ ಬಿಜೆಪಿಯವರು ಮೊಟ್ಟೆಯನ್ನು ಖರೀದಿಸಿ ಇವತ್ತು ಕಾಂಗ್ರೆಸ್ ಮೇಲೆ ಬಿಸಾಡುತ್ತಿದ್ದಾರೆ. ಆದರೆ ನಾವು ಅಂತಹ ಕೆಲಸ ಮಾಡುವುದಿಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಎಲ್ಲ ಕಡೆಗಳಲ್ಲೂ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ನಮ್ಮ ಹೋರಾಟ ಗಾಂಧೀಜಿಯ, ಕಾಂಗ್ರೆಸ್ ತತ್ವದಲ್ಲಿ ಹೋರಾಟದಲ್ಲಿ ಮಾಡುತ್ತೇವೆ. ನಮ್ಮ ಹೋರಾಟ ಹೇಗಿರಬೇಕು ಎಂದರೆ ಈ ಬಿಜೆಪಿಯವರು ಊರು ಬಿಟ್ಟು ಓಡಿಹೋಗಬೇಕು. ನಮ್ಮ ನಾಯಕರ ಮೇಲೆ ಮೊಟ್ಟೆ ಎಸೆದರೆ ನಾವು ಭಯ ಪಡುತ್ತೇವೆಯೇ? ಎಂದಿದ್ದಾರೆ. ಮುಂದುವರಿದು, “ನಾವು ಶಶಿಕಲಾ ಜೊಲ್ಲೆಗೆ ಹುಟ್ಟಿದವರಲ್ಲ. ನಾವು ಕಾಂಗ್ರೆಸ್ ಪಕ್ಷದವರು. ಗಾಂಧೀಜಿಯ ತತ್ವಗಳನ್ನು ಪಾಲನೆ ಮಾಡುತ್ತಿದ್ದೇವೆ” ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳನ್ನು ಮಾಡಬಾರದು. ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದರೆ ಪೊಲೀಸರು ಸುಮ್ಮನೆ ಇರುತ್ತಾರೆ. ಆದರೆ ಕಾಂಗ್ರೆಸ್‌ನವರು ಪ್ರತಿಭಟನೆಗಳಿಗೆ ಇಳಿದರೆ ನಾಯಿ, ಕುರಿಗಳ ರೀತಿ ಎತ್ತಿಕೊಂಡು ಹೋಗುತ್ತಾರೆ. ಸಿದ್ದರಾಮಯ್ಯ ಅವರ ಮೇಲೆ ದಾಳಿ ಆಗುತ್ತಿದ್ದರೂ ಪೊಲೀಸರು ನಿಷ್ಕ್ರಿಯವಾಗಿರುವುದನ್ನು ಕಂಡು ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಯುವ ಕಾಂಗ್ರೆಸ್ ನಾಯಕ ನಲಪಾಡ್ ಸ್ನೇಹಿತರಿಂದ ಲೇಡಿಸ್ ಬಾರ್‌ನಲ್ಲಿ ದಾಂಧಲೆ