ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ (PSI Scam) ಪ್ರಮುಖ ಬಂಧಿತ ಆರೋಪಿಗಳಾದ ಎಡಿಜಿಪಿ ಅಮೃತ್ ಪಾಲ್ ಮತ್ತು ಡಿವೈಎಸ್‌ಪಿ ಶಾಂತಕುಮಾರ್ ಮನೆಗಳ ಮೇಲೆ ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಆರೋಪಿಗಳ ವಿರುದ್ಧ ಆಗಸ್ಟ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಸಂಬಂಧಪಟ್ಟ 11 ಸ್ಥಳಗಳಲ್ಲಿ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಸಹಕಾರನಗರದ ಅಮೃತ್ ಪಾಲ್ ನಿವಾಸದ ಮೇಲೆ ಬೆಳಗ್ಗೆ 11 ಗಂಟೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಹಾಗೆಯೇ ಶಾಂತಕುಮಾರ್ ಅವರ ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿರುವ ಮನೆ, ಪೊಲೀಸ್ ಕ್ವಾರ್ಟರ್ಸ್ ಹಾಗೂ ಲಕ್ಕಸಂದ್ರದ ಮನೆ ಮೇಲೂ ದಾಳಿ ನಡೆಸಿ ಸುಮಾರು 5 ಗಂಟೆಗಳ ಕಾಲ ನಿರಂತರವಾಗಿ ಪರಿಶೀಲನೆ ನಡೆಸಿದರು.
ಈವರೆಗೆ ೪ ಕೋಟಿ ರೂ. ವಶ
ಈ ಹಿಂದೆ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಶ್ರೀಧರ್ ಮನೆಯಲ್ಲಿ 1.5 ಕೋಟಿ ರೂಪಾಯಿ ಪತ್ತೆಯಾಗಿತ್ತು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣದಲ್ಲಿ ವಿವಿಧ ಕಡೆ ದಾಳಿ ನಡೆಸಿ ಈವರೆಗೆ ಸುಮಾರು 4 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ನಗದು ರೂಪದಲ್ಲೇ ಹಣ ನೀಡಿರುವುದಾಗಿ ವಿಚಾರಣೆ ವೇಳೆ ಅಭ್ಯರ್ಥಿಗಳು ತಿಳಿಸಿದ್ದರು. ಅದರಂತೆ ಅತಿ ಹೆಚ್ಚು ನಗದು ರೂಪದಲ್ಲೇ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು.
ಅಕ್ರಮದ ನಂತರದ ವ್ಯವಹಾರ ಪರಿಶೀಲನೆ
ನೇಮಕಾತಿಗಾಗಿ ಅಭ್ಯರ್ಥಿಗಳು ಯಾವ ರೂಪದಲ್ಲಿ ಹಣ ನೀಡಿದ್ದರು. ಅದನ್ನು ಬಂಧಿತ ಪೊಲೀಸ್ ಅಧಿಕಾರಿಗಳು ಯಾರಿಗಾದರೂ ವರ್ಗಾವಣೆ ಮಾಡಿದ್ದಾರಾ? ನೇಮಕಾತಿ ನೋಟಿಫಿಕೇಶನ್ ದಿನಾಂಕದಿಂದ ಮುಂದೆ ಯಾವುದಾದರು ಆಸ್ತಿ ಖರೀದಿ ಮಾಡಿದ್ದಾರಾ? ಎಂಬ ಕುರಿತು ಹಾಗೂ ಮನೆಯಲ್ಲಿರುವ ಚಿನ್ನ ಮತ್ತು ಅದರ ಬಿಲ್‌ಗಳು, ಬ್ಯಾಂಕ್ ಲಾಕರ್‌ನಲ್ಲಿರುವ ಚಿನ್ನ, ಇತ್ತೀಚೆಗೆ ಚಿನ್ನ ಖರೀದಿಸಿದ್ದಾರಾ ಹಾಗೂ ಬೇನಾಮಿ ಹೆಸರಲ್ಲಿ ಬ್ಯಾಂಕ್ ಖಾತೆ ಅಥವಾ ಆಸ್ತಿ ಪತ್ರ ಹೊಂದಿದ್ದಾರಾ ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ | ವಿದ್ಯಾರ್ಥಿ ವೀಸಾದಲ್ಲಿ ಬಂದು ಡ್ರಗ್ ಪೆಡ್ಲಿಂಗ್, ಇಬ್ಬರು ನೈಜೀರಿಯ ಪ್ರಜೆಗಳ ಸೆರೆ