ಬೆಂಗಳೂರು: ಇಲ್ಲಿನ ಕೆ.ಆರ್. ಮಾರ್ಕೆಟ್ ಫ್ಲೈಓವರ್ (KR Market Flyover) ಕೆಳಗೆ ನಿಂತಿದ್ದ ಜನರಿಗೆ ಖುಷಿಯೋ ಖುಷಿ. ಬಸ್ಸಿಗಾಗಿ ಕಾದು ನಿಂತಿದ್ದ ಜನರ ತಲೆ ಮೇಲೆ ಗರಿ ಗರಿ ನೋಟುಗಳ ಸುರಿಮಳೆಯೇ ಬಿದ್ದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಫ್ಲೈಓವರ್ ಮೇಲಿಂದ ದುಡ್ಡು ಬಿಸಾಡಿದ್ದು, ಪಕ್ಕಾ ಸಿನಿಮೀಯ ಮಾದರಿಯಲ್ಲಿ ಎಲ್ಲ ಪ್ರಸಂಗವೂ ನಡೆದಿತ್ತು.
ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲಿಂದ ದುಡ್ಡಿನ್ನು ಎಸೆಯುತ್ತಿದ್ದಂತೆ ಜನರಿಗೆ ಒಮ್ಮೆ ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ನೋಡಿದರೆ ದುಡ್ಡು ತಮ್ಮ ತಲೆ ಮೇಲೆ ಬೀಳುತ್ತಿತ್ತು. ಫ್ಲೈಓವರ್‌ನ ಅಕ್ಕಪಕ್ಕ ಇದ್ದವರೆಲ್ಲರೂ ಆ ದುಡ್ಡನ್ನು ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು.
ಫ್ಲೈ ಓವರ್‌ನ ಎರಡು ಬದಿಯಲ್ಲಿ ನೋಟುಗಳು ಎಸೆಯುತ್ತಿದ್ದರೆ, ಕೆಲಸ ಕಾರ್ಯಗಳಲ್ಲಿ ತೊಡಗಿದ್ದವರು, ಬಸ್ಸಿಗಾಗಿ ಕಾದು ನಿಂತಿದ್ದವರು ಎಲ್ಲರೂ ಆ ದುಡ್ಡನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದರು. ನಾನೇ ಮೊದಲು ಸಾಧ್ಯವಾದಷ್ಟು ದುಡ್ಡನ್ನು ಬಾಚಿಕೊಳ್ಳಬೇಕು ಎಂದು ನೆಲಕ್ಕೆ ಬೀಳುವುದರೊಳಗೇ ಹಿಡಿದುಕೊಳ್ಳಲು ಯತ್ನಿಸಿದರು. ಕೆಲವರು ಮೇಲಕ್ಕೆ ಎಗರಿ ಎಗರಿ ಹಿಡಿದುಕೊಳ್ಳುತ್ತಿದ್ದರು.
ಇದು ಒಂದೆಡೆಯಾದರೆ ಇನ್ನು ಉಳಿದಂತೆ ಅಲ್ಲಿಯೇ ಇದ್ದ ಮತ್ತೆ ಕೆಲವರು ಕುತೂಹಲದಿಂದ ಕಣ್ಣುಗಳನ್ನು ಮಿಟುಕಿಸದೇ ಬಾಯಿ ತೆರೆದು ಆಕಾಶದತ್ತ ಮುಖ ಮಾಡಿ ನಿಂತಿದ್ದರು. ಜತೆಗೆ ಮತ್ತೆ ಕೆಲವರು ವಿಡಿಯೊ ಮಾಡಿಕೊಂಡಿದ್ದಾರೆ. ಯಾರಪ್ಪಾ ಆ ಮಹಾನುಭಾವ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Road accident : ಬೆಂಗಳೂರಿನಲ್ಲಿ ಖಾಸಗಿ ಬಸ್ ಅಟ್ಟಹಾಸ: ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ದಾರುಣ ಮೃತ್ಯು
ಮಂಗಳವಾರ ಬೆಳಗ್ಗೆ ಸುಮಾರು 11.30ರ ಸುಮಾರಿಗೆ ಈ ಪ್ರಸಂಗ ನಡೆದಿದೆ. ಆದರೆ, ಈ ಝಣ ಝಣ ಕಾಂಚಾಣವನ್ನು ಆತ ಎಸೆದಿದ್ದು, ಯಾಕೆ ಎಂಬ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ದುಡ್ಡನ್ನು ಎಸೆದ ವ್ಯಕ್ತಿಯನ್ನು ಫ್ಲೈಓವರ್ ಮೇಲೆ ಸಾರ್ವಜನಿಕರು ಮಾತನಾಡಿಸಿದ್ದಾರೆ. ಆತನ ವಿಡಿಯೊವನ್ನೂ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.