Site icon Vistara News

Money secrets : ಉಳಿತಾಯದ ಅಭ್ಯಾಸ ಭಾರತೀಯರನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಿದೆ: ಹರಿಪ್ರಕಾಶ್‌ ಕೋಣೆಮನೆ

Money secrets

Money secrets

ಬೆಂಗಳೂರು: ಭಾರತೀಯರಲ್ಲಿ ಹಿಂದಿನಿಂದಲೂ ಉಳಿತಾಯದ ಪ್ರವೃತ್ತಿ ಸಹಜವಾಗಿದೆ. ಇದು ಪಾಶ್ಚಿಮಾತ್ಯ ಆರ್ಥಿಕ ಚಿಂತನೆಗೆ ಹೋಲಿಸಿದರೆ ಭಿನ್ನವಾಗಿದೆ. ( Money secrets and Stock Market Secrets ) ಆದರೆ ಭಾರತಕ್ಕೆ ಜಾಗತಿಕ ಆರ್ಥಿಕ ಹಿಂಜರಿತಗಳನ್ನು ಯಶಸ್ವಿಯಾಗಿ ಎದುರಿಸಲು ಇದರಿಂದ ಸಾಧ್ಯವಾಗಿದೆ ಎಂದು ವಿಸ್ತಾರನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ವಿಸ್ತಾರ ನ್ಯೂಸ್‌ನ ಕಾರ್ಯನಿರ್ವಾಹಕ ಸಂಪಾದಕ ಶರತ್‌ ಎಂ.ಎಸ್‌ (Sharath M.S) ಅವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ ಕೃತಿಯನ್ನು ಲೋಕಾರ್ಪಣೆಗೊಳಿಸಿ (Book Releases) ಅವರು ಮಾತನಾಡಿದರು.

2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸಿದಾಗ ಅಮೆರಿಕದಲ್ಲಿ ಬ್ಯಾಂಕಿಂಗ್‌ ದಿಗ್ಗಜ ಲೀಮನ್‌ ಬ್ರದರ್ಸ್‌ ದಿವಾಳಿಯಾಯಿತು. ಬಳಿಕ ಅಮೆರಿಕದ ಅನೇಕ ಬ್ಯಾಂಕ್‌ಗಳು ನೆಲಕಚ್ಚಿತು. ಈಗ ಮತ್ತೊಮ್ಮೆ ಅಮೆರಿಕದಲ್ಲಿ ಬ್ಯಾಂಕಿಂಗ್‌ ವಲಯದಲ್ಲಿ ಅಸ್ಥಿರತೆ ಉಂಟಾಗಿದೆ. ಮೂರು ಬ್ಯಾಂಕ್‌ಗಳು ದಿವಾಳಿಯಾಗಿವೆ. ಆದರೆ 2008ರಲ್ಲಿ ಭಾರತದ ಒಂದು ಕೋಪರೇಟಿವ್‌ ಬ್ಯಾಂಕ್‌ ಕೂಡ ರಿಸೆಶನ್‌ಗೆ ಸಿಲುಕಿರಲಿಲ್ಲ. ಹೆಚ್ಚಿನವರಿಗೆ ಜಾಗತಿಕ ಆರ್ಥಿಕ ಹಿಂಜರಿತ ಎಂಬ ಬಿಕ್ಕಟ್ಟು ಉಂಟಾಗಿದೆ ಎಂಬುದು ಅರಿವಿಗೇ ಬಂದಿರಲಿಲ್ಲ ಎಂದು ಹೇಳಿದರು.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತೀಯರಿಗೆ ಉಳಿತಾಯ ಮಾಡುವ ಪ್ರವೃತ್ತಿಯೇ ವಿಪತ್ತನ್ನು ಎದುರಿಸುವ ಸಾಮರ್ಥ್ಯವನ್ನು ತಂದುಕೊಟ್ಟಿತ್ತು. ಎರಡು ವರ್ಷಗಳ ಕಾಲ ಆರ್ಥಿಕ ಚಟುವಟಿಕೆಗಳು ಎಂದಿನಂತೆ ನಡೆಯದಿದ್ದರೂ, ಜನತೆ ದೃತಿಗೆಡದೆ ಸಂಪಾದಿಸಿದ್ದರಲ್ಲಿ ಸಾಧ್ಯವಾದಷ್ಟು ಉಳಿತಾಯ ಮಾಡಿ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿರ್ವಹಿಸಿದ್ದರು. ಆದ್ದರಿಂದ ಭಾರತೀಯರು ಹಣಕಾಸು ಸಾಕ್ಷರತೆಯಲ್ಲಿ ಹಿಂದೆ ಇದ್ದಾರೆ ಎಂದು ಸಾರಾಸಗಟಾಗಿ ಹೇಳುವುದಕ್ಕಿಂತ, ಆಧುನಿಕ ಹಣಕಾಸು ವ್ಯವಸ್ಥೆಯ ಅರಿವಿನ ಕೊರತೆ ಇದೆ ಎನ್ನಬಹುದು ಎಂದರು.

ವ್ಯಕ್ತಿ ಕೇಂದ್ರಿತ ಸಮಾಜ ಮಾತ್ರವೇ ಔದ್ಯಮೀಕರಣವನ್ನು ಹೊಂದಬಹುದು. ಸಮಾಜಕೇಂದ್ರಿತ ಆರ್ಥಿಕತೆ ಅಲ್ಲ ಎಂದು 80ರ ದಶಕದಲ್ಲಿ ಪಾಠ ಮಾಡಲಾಗುತ್ತಿತ್ತು. ಪ್ರತಿ ವ್ಯಕ್ತಿಯನ್ನು ಒಬ್ಬ ಬಳಕೆದಾರನನ್ನಾಗಿ ಮಾಡಬೇಕು. ಮನೆಯವರೆಲ್ಲರೂ ಸೇರಿ ಬಳಸುವ ವಸ್ತುಗಳನ್ನು ಉತ್ತೇಜಿಸಕೂಡದು ಎಂಬ ತಂತ್ರಗಾರಿಕೆ ಅದರಲ್ಲಿತ್ತು. ಮನೆಯವರೆಲ್ಲ ಒಂದೇ ಸೋಪ್‌ ಬಳಸುತ್ತಿದ್ದರು. ಅದು ತಪ್ಪೆಂದು ಹೇಳಲಾಯಿತು. ಎಲ್ಲರಿಗಿಂತಲೂ ಎಲ್ಲದರಲ್ಲೂ ನಾನು ಮುಂದೆ ಇರಬೇಕು ಎಂದು ವ್ಯಕ್ತಿ ಬಯಸಬೇಕು. ಆವಾಗಲೇ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳನ್ನೂ ಖರೀದಿಸುತ್ತಾನೆ. ಇದರಿಂದ ಆರ್ಥಿಕ ಚಟುವಟಿಕೆಗಳು ವೃದ್ಧಿಸುತ್ತವೆ ಎಂದು ತಿಳಿಸಲಾಯಿತು. ಆಗೆಲ್ಲ ಇದು ಅಸಾಧ್ಯ ಎನ್ನುವ ಮಾತುಗಳಿದ್ದವು. ಹೀಗಾಗಿ ಕ್ರಮೇಣ ನಮ್ಮೆಲ್ಲರ ತಲೆಗೆ ಬಿತ್ತಲಾಯಿತು. ಅನೇಕ ವಿಚಾರಗಳಲ್ಲಿ ಇಂದು ಭಾರತೀಯರು ಪಾಶ್ಚಿಮಾತ್ಯ ಆರ್ಥಿಕ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ವಿವರಿಸಿದರು.

ಬ್ಯಾಂಕಿಂಗ್‌ನಲ್ಲಿ ಭಾರತೀಯ ಆರ್ಥಿಕ ಚಿಂತನೆ:

ಹಲವಾರು ವ್ಯವಹಾರಗಳಲ್ಲಿ ಭಾರತೀಯರು ಸಾಂಪ್ರದಾಯಿಕ ಹಣಕಾಸು ಚಿಂತನೆಗಳಿಂದ ಹೊರ ಬಂದಿಲ್ಲ. ಸಾಲ ನೀಡುವಾಗ ಭಾರತೀಯ ಬ್ಯಾಂಕ್‌ಗಳು ಸುಲಭವಾಗಿ ನೀಡುವುದಿಲ್ಲ. ಸಾಂಪ್ರದಾಯಿಕ ಮಾನದಂಡಗಳನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಆರ್ಥಿಕ ಹಿಂಜರಿತದ ವೇಳೆ ಭಾರತೀಯ ಬ್ಯಾಂಕ್‌ಗಳು ನೆಲ ಕಚ್ಚಿಲ್ಲ ಎಂದು ಹರಿಪ್ರಕಾಶ್‌ ಕೋಣೆಮನೆ ಅವರು ವಿವರಿಸಿದರು.

ಖ್ಯಾತ ಹಣಕಾಸು ತಜ್ಞ ಡಾ. ಎಸ್.ಗುರುಮೂರ್ತಿ ಅವರು, 2008ರ ಆರ್ಥಿಕ ಮುಗ್ಗಟ್ಟಿನಿಂದ ಭಾರತವನ್ನು ರಕ್ಷಿಸಿದ್ದು ನಮ್ಮ ಅಡುಗೆ ಮನೆಯ ಡಬ್ಬಿಗಳು ಎನ್ನುತ್ತಾರೆ. ಅಂದರೆ ಗೃಹಿಣಿಯರು ಯಾವುದೇ ಖರ್ಚಿಗೆ ಹಣವನ್ನು ಪಡೆದುಕೊಂಡರೂ, ಅದರಲ್ಲಿ ಒಂದಷ್ಟು ಉಳಿಸಿ ಅಡುಗೆ ಮನೆಯ ಡಬ್ಬಿಗಳಲ್ಲಿ ಜೋಪಾನವಾಗಿ ಇಡುತ್ತಾರೆ. ತಿಂಗಳ ಕೊನೆಗೆ ಗಂಡನ ಸಂಬಳ ಖಾಲಿಯಾದಾಗ ಹೆಂಡತಿಯೇ ನೀಡುತ್ತಾಳೆ. ತನ್ನ ಹತ್ತಿರ ಇದೆ ಎನ್ನುವುದಿಲ್ಲ. ಪಕ್ಕದ ಮನೆಯಿಂದ ಸಾಲ ಪಡೆದೆ ಎಂದು ಹೇಳಿ ಗಂಡನ ಸಂಬಳ ಬಂದಾಗ ಮತ್ತೆ ಆ ಹಣವನ್ನು ಪಡೆದು ಇಡುತ್ತಾಳೆ. ಈ ರೀತಿಯ ಉಳಿತಾಯದ ಮಾನಸಿಕತೆ ಇಡೀ ಭಾರತದಲ್ಲಿದೆ. ಮಕ್ಕಳ ಭವಿಷ್ಯದ ಶಿಕ್ಷಣ, ಮಗಳ ಮದುವೆ, ಪ್ರವಾಸ, ಮನೆ ನಿರ್ಮಾಣ ಇತ್ಯಾದಿಗೆ ಹಣ ಉಳಿತಾಯ ಮಾಡುತ್ತಾರೆ. ಹಾಗಾದರೆ ಇವರನ್ನು ಹಣಕಾಸು ಸಾಕ್ಷರರು ಎಂದು ಕರೆಯಬೇಕೇ, ಬೇಡವೇ? ಆದ್ದರಿಂದ 80ರ ದಶಕದಲ್ಲಿ ವ್ಯಕ್ತಿ ಕೇಂದ್ರಿತ ಸಮಾಜ ಮಾತ್ರ ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸಬಲ್ಲುದು ಎಂದು ನಮ್ಮ ತಲೆಗೆ ಬಿತ್ತಿದಂತೆ, ಈಗ ಹಣಕಾಸು ಸಾಕ್ಷರತೆಯ ಕುರಿತು ನರೇಟಿವ್‌ ಸೆಟ್‌ ಮಾಡಲಾಗುತ್ತಿದೆ. ಹಣಕಾಸು ಸಾಕ್ಷರತೆಯನ್ನು ಆಧುನಿಕ ಹಣಕಾಸು ಹೂಡಿಕೆ, ಹಣಕಾಸು ತಂತ್ರಜ್ಞಾನದ ತಿಳುವಳಿಕೆಯ ಆಧಾರದಲ್ಲಿ ಅಳೆಯುವುದಿದ್ದರೆ, ಅದು ಭಾರತಕ್ಕೆ ಹೊಂದುವುದಿಲ್ಲ ಎಂದು ವಿವರಿಸಿದರು.

ಉಳಿತಾಯ ಮಾಡಿದ ಹಣದ ವೃದ್ಧಿಗೆ ಮನಿ ಸೀಕ್ರೇಟ್ಸ್ ಪುಸ್ತಕದ ಓದು ಅಗತ್ಯ:

ಭಾರತವು ಉಳಿತಾಯ ಆಧಾರಿತ ಆರ್ಥಿಕತೆಯಲ್ಲಿ ಅನುಭವವನ್ನು ತನ್ನದಾಗಿಸಿದೆ. ಆದರೆ ಹೀಗೆ ಉಳಿತಾಯ ಮಾಡಿರುವ ಹಣವನ್ನು ಬೆಳೆಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಲು ಶರತ್‌ ಅವರ ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಸೀಕ್ರೆಟ್ಸ್‌ ಪುಸ್ತಕದ ಓದು ಸಹಕಾರಿಯಾಗಿದೆ. ಎಲ್ಲ ಕಡೆಯಿಂದಲೂ ಹಣಕಾಸು ಕುರಿತ ಮಾಹಿತಿಗಳನ್ನು ಪಡೆಯಬೇಕು. ಆದರೆ ನಿರ್ಧಾರ ನಮ್ಮದೇ ಆಗಿರಬೇಕು. ಅಂಥ ನಿರ್ಧಾರ ಕೈಗೊಳ್ಳಲು ಪ್ರಾಥಮಿಕ ಜ್ಞಾನ ಅಗತ್ಯ. ಇಲ್ಲಿಯವರೆಗೆ ಕಾಮರ್ಸ್‌ ಹಿನ್ನೆಲೆ ಇರುವವರಿಗೆ ಮಾತ್ರ ಇದು ಲಭಿಸುತ್ತಿತ್ತು. ಆದರೆ ಇದೀಗ ಶರತ್‌ ಅವರು ಅಂಥ ಹಿನ್ನೆಲೆ ಇಲ್ಲದವರಿಗೂ ಅರ್ಥವಾಗುವಂತೆ ಪುಸ್ತಕ ಬರೆದಿದ್ದಾರೆ. ಈ ಕೃತಿಯ ದೊಡ್ಡ ಶಕ್ತಿ ಎಂದರೆ ಸರಳತೆ. ಅನ್ನವನ್ನು ಕಲಸಿ, ತುತ್ತು ಮಾಡಿ ಬಾಯಿಗಿಟ್ಟಾಗಿದೆ. ಇನ್ನು ಅಗಿದು ನುಂಗುವುದೊಂದೇ ಬಾಕಿ ಎನ್ನುವಷ್ಟು ಸರಳವಾಗಿದೆ ಎಂದು ಪ್ರಶಂಸಿಸಿದರು.

ಹಣಕಾಸು ಕುರಿತು ಚಾಣಕ್ಯನಿಂದ ಇತ್ತೀಚಿನ ಹಣಕಾಸು ತಜ್ಞರ ತನಕ ಎಲ್ಲರೂ ಅನೇಕ ಆಯಾಮಗಳನ್ನು ತಿಳಿಸಿಕೊಟ್ಟಿದ್ದಾರೆ. ಆದರೆ ಇಂದಿನ ಅವಶ್ಯಕತೆ ಯಾವುದೆಂದರೆ, ಉಳಿತಾಯ ಮಾಡಿರುವ ಹಣವನ್ನು ವೈಜ್ಞಾನಿಕ, ಕಾನೂನುಬದ್ಧ ರೀತಿಯಲ್ಲಿ ಬೆಳೆಸುವುದು ಹೇಗೆ ಎಂಬುದಾಗಿದೆ. ಇದಕ್ಕಾಗಿ ಹಣಕಾಸು ಶಿಸ್ತು, ಅಧ್ಯಯನ, ಸ್ವಂತ ನಿರ್ಧಾರ ಒಂದೆಡೆಯಾಗಿದ್ದರೆ, ಮತ್ತೊಂದು ಕಡೆ ಷೇರು, ಮ್ಯೂಚುವಲ್‌ ಫಂಡ್‌, ಟರ್ಮ್‌ ಇನ್ಷೂರೆನ್ಸ್‌ನಂಥ ಹೂಡಿಕೆ ಅಗತ್ಯ. ಇವೆಲ್ಲದರ ಕುರಿತು ಸಮಗ್ರವಾಗಿ ಅರಿಯಲು ಶರತ್‌ ಅವರ ಪುಸ್ತಕವನ್ನು ಓದಬೇಕು ಎಂದು ಹೇಳಿದರು.‌

ಹೂಡಿಕೆ ಕುರಿತ ತಿಳುವಳಿಕೆ ಹೆಚ್ಚಿಸಲು ಮನಿ ಸೀಕ್ರೆಟ್ಸ್‌ : ಕೆ.ಎನ್‌ ಚೆನ್ನೇಗೌಡ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯವಾಣಿ ಸಂಪಾದಕ ಕೆ.ಎನ್‌ ಚೆನ್ನೇಗೌಡ ಅವರು ಮಾತನಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಾಕಷ್ಟು ಅರಿವು ಅಗತ್ಯ, ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆಯೇ ಹೆಚ್ಚು. 2008ರ ಆರ್ಥಿಕ ಹಿಂಜರಿತದಿಂದ ಇತ್ತೀಚಿನ ನಿಶ್ಚಿತತೆಯ ಸಂದರ್ಭದ ತನಕ ಇದಕ್ಕೆ ಹಲವಾರು ನಿದರ್ಶನಗಳನ್ನು ನಾವು ನಮ್ಮ ಸುತ್ತಮುತ್ತವೇ ನೋಡಬಹುದು. ಆದ್ದರಿಂದ ಹೂಡಿಕೆ ಕುರಿತ ತಿಳುವಳಿಕೆಯನ್ನು ಹೆಚ್ಚಿಸಲು ಶರತ್‌ ಅವರ ಪುಸ್ತಕ ಸಹಕಾರಿ ಎಂದು ತಿಳಿಸಿದರು.

ಷೇರು ಮಾರುಕಟ್ಟೆಯಲ್ಲಿ ಕಳೆದುಕೊಂಡದ್ದನ್ನು ಅಲ್ಲೇ ತೆಗೆಯಬೇಕು ಎಂದು ಹೇಳುತ್ತಿದ್ದರು. ಅದೇ ರೀತಿ ದುಡ್ಡನ್ನು ಮಾಡುವುದು ಹೇಗೆ ಎಂದು ಶರತ್‌ ಹೇಳಿ ಕೊಟ್ಟಿದ್ದಾರೆ. ಆರ್ಥಿಕ ಸಾಕ್ಷರತೆ ಇಲ್ಲದಿದ್ದರೆ ಜೀವನ ಸಲೀಸಾಗಿರುವುದಿಲ್ಲ ಎಂದರು.

ಕಲಿಕೆ ಇಲ್ಲದೆ ಗಳಿಕೆ ಇಲ್ಲ: ಶರತ್‌ ಎಂ.ಎಸ್

ಪುಸ್ತಕದ ಲೇಖಕ ಹಾಗೂ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ಸಂಪಾದಕ ಶರತ್‌ ಎಂ.ಎಸ್‌ ಅವರು ಮಾತನಾಡಿ, ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಣಕಾಸು ವಿಚಾರಗಳ ಬಗ್ಗೆ ತಿಳುವಳಿಕೆ ಮೂಡಿಸಲು ಆದ್ಯತೆ ನೀಡದಿರುವುದರಿಂದ ಉಂಟಾಗಿರುವ ಕೊರತೆಯನ್ನು ನೀಗಿಸಬೇಕಾದ ಅವಶ್ಯಕತೆ ಇದೆ. ಇದೇ ಕಾರಣದಿಂದಾಗಿ 18-20 ವರ್ಷ ಶಿಕ್ಷಣ ಪಡೆದವರಿಗೂ ಆರ್ಥಿಕ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ನಾವು ಸಾಂಪ್ರದಾಯಿಕ ಹೂಡಿಕೆಯನ್ನು ಮಾಡುತ್ತೇವೆ. ಆದರೆ ಅಧಿಕ ಹಣದುಬ್ಬರದ ಕಾಲದಲ್ಲಿ ಉಳಿತಾಯದ ಮೌಲ್ಯವನ್ನು ಹೆಚ್ಚಿಸಬೇಕಿದ್ದರೆ, ಅದು ಬೆಲೆ ಏರಿಕೆಯನ್ನೂ ಮೀರಿ ನಮ್ಮ ಕೈ ಹಿಡಿಯಬೇಕು. ಆದ್ದರಿಂದ ಕಲಿಕೆಯಿಲ್ಲದೆ ಗಳಿಕೆ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮನುಷ್ಯ ಮಲಗಿದದಾಗಲೂ ಆತನ ದುಡ್ಡು ಬೆಳೆಯುವಂತಾಗಬೇಕು. ಈ ರೀತಿ ಹಣ ನಮಗೋಸ್ಕರ ದುಡಿಯುವಂತಾಗಲು ಏನು ಮಾಡಬೇಕು ಎಂಬುದನ್ನು ಈ ಕೃತಿಯಲ್ಲಿ ವಿವರಿಸಿದ್ದೇನೆ. ವೈಯಕ್ತಿಕ ಹಣಕಾಸು ವಿಚಾರಗಳು ಮತ್ತು ಸ್ಟಾಕ್‌ ಮಾರ್ಕೆಟ್‌ ಕುರಿತ ಬಹುತೇಕ ಅಂಶಗಳನ್ನು ಬರೆದಿದ್ದೇನೆ. ಗೊತ್ತಿರದ ವಿಚಾರಗಳನ್ನು ಕಲಿತು ಪ್ರಸ್ತಾಪಿಸಿದ್ದೇನೆ ಎಂದು ವಿವರಿಸಿದರು.

ಬಿಡುಗಡೆಗೂ ಮುನ್ನ 3ನೇ ಮುದ್ರಣ ಸಂತಸ ತಂದಿದೆ: ಜಿ.ಎನ್‌ ಮೋಹನ್

ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ ಕೃತಿ ಬಿಡುಗಡೆಗೆ ಮುನ್ನವೇ ಮೂರನೇ ಮುದ್ರಣವನ್ನು ಕಂಡಿರುವುದು ಅದರ ಜನಪ್ರಿಯತೆ ಮತ್ತು ಉಪಯುಕ್ತತೆಯನ್ನು ಬಿಂಬಿಸಿದೆ. ಹಣಕಾಸು ವಿಚಾರಗಳ ಬಗ್ಗೆ ಸರಳ ಹಾಗೂ ಪರಿಣಾಮಕಾರಿಯಾಗಿ ಕನ್ನಡದಲ್ಲಿ ಪ್ರಕಟವಾಗಿರುವ ಕೃತಿಗಳು ಅಪರೂಪ. ಅದರಲ್ಲೂ ಶರತ್‌ ಅವರ ಕೃತಿ ಮನೋಜ್ಞವಾಗಿ ಓದುಗರ ಮನಗೆದ್ದಿದೆ ಎಂದು ಬಹುರೂಪಿ ಪ್ರಕಾಶನದ ಜಿ.ಎನ್‌ ಮೋಹನ್‌ ಅವರು ಹೇಳಿದರು.

ಇಂಡಿಯನ್‌ ಮನಿ ಡಾಟ್‌ ಕಾಮ್‌ ಬೆಳವಣಿಗೆಯ ದಿನಗಳನ್ನು ಸ್ಮರಿಸಿದ ಸಿ.ಎಸ್‌ ಸುಧೀರ್

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಫ್ರೀಡಂ ಮನಿ ಆ್ಯಪ್‌ ಸಂಸ್ಥಾಪಕ ಸಿ.ಎಸ್‌ ಸುಧೀರ್‌ ಅವರು ಮಾತನಾಡಿ, ಶರತ್‌ ಹಾಗೂ ನಾನು ಕಳೆದ 6 ವರ್ಷಗಳಿಂದ ಚಿರಪರಿಚಿತರು. ಇಂಡಿಯನ್‌ ಮನಿ ಡಾಟ್‌ ಕಾಮ್‌ ಅನ್ನು ಕಟ್ಟಿ ಯಶಸ್ವಿಯಾಗಿ ಬೆಳೆಸುವುದರಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು. ಹಣಕಾಸು ವಿಚಾರಗಳಲ್ಲಿ ಅವರು ಗಳಿಸಿರುವ ಜ್ಞಾನ ಅತ್ಯಮೂಲ್ಯ ಮತ್ತು ಅಗಾಧ. ಅದು ಈ ಪುಸ್ತಕದ ಮೂಲಕ ಓದುಗರಿಗೆ ಪ್ರಯೋಜನವಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಮನಿ ಸೀಕ್ರೆಟ್ಸ್‌ & ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್‌ ಕೃತಿಯನ್ನು ಲೋಕಾರ್ಪಣೆ ಸಮಾರಂಭದಲ್ಲಿ ಸ್ನೇಹ ಬುಕ್‌ ಹೌಸ್‌ನ ಸ್ಥಾಪಕ ಪರಶಿವಪ್ಪ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಹೂಡಿಕೆ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಶರತ್‌ ಅವರು ಸಮಗ್ರ ಮತ್ತು ಸರಳವಾಗಿ ಮನಿ ಸೀಕ್ರೆಟ್ಸ್‌ ಕೃತಿಯನ್ನು ರಚಿಸಿದ್ದು, ಆರ್ಥಿಕ ಪ್ರಗತಿಗೆ ಇಂಥ ಕೃತಿಗಳ ಓದು ಸಹಕಾರಿ ಎಂದರು.

ಸಮಾರಂಭದಲ್ಲಿ ಖ್ಯಾತ ಹೋಮಿಯೊಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್‌, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್‌, ಖಜಾಂಚಿ ವಾಸುದೇವ ಹೊಳ್ಳ, ಸ್ನೇಹ ಪ್ರಕಾಶನದ ಪರಶಿವಪ್ಪ ಕೆ.ಬಿ ಮೊದಲಾದ ಗಣ್ಯರು ಭಾಗವಹಿಸಿದ್ದರು.


ಕೃತಿ: ಮನಿ ಸೀಕ್ರೆಟ್ಸ್&‌ ಸ್ಟಾಕ್‌ ಮಾರ್ಕೆಟ್‌

ಲೇಖಕರು: ಶರತ್‌ ಎಂ.ಎಸ್‌

ಪ್ರಕಾಶನ: ಬಹುರೂಪಿ

ಬೆಲೆ :300 ರೂ.

ಸಂಪರ್ಕ: 7019182729

Exit mobile version