Site icon Vistara News

Monkey death : ಕರೆಂಟ್‌ ಶಾಕ್‌ಗೆ ಬಲಿಯಾದ ಕೋತಿ; 11ನೇ ದಿನ ತಿಥಿ ಕಾರ್ಯ ನಡೆಸಿ ಕಣ್ಣೀರಿಟ್ಟ ಗ್ರಾಮಸ್ಥರು

Monkey death

ಮಂಡ್ಯ: ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ (Human- Animal Relationship) ಕೆಲವೊಮ್ಮೆ ಎಲ್ಲ ಲೆಕ್ಕಾಚಾರಗಳನ್ನು ಮೀರಿರುತ್ತದೆ. ನಾಯಿಗಳನ್ನು ಅತಿಯಾಗಿ ಪ್ರೀತಿಸುವವರು (Dog lovers), ಗೋವುಗಳನ್ನು ಜೀವದಂತೆ ಕಾಪಾಡುವವರು (devotees of cow) ಇದ್ದಾರೆ. ಅಂತೆಯೇ ಕೆಲವರಿಗೆ ಕೋತಿಗಳ ಮೇಲೂ ಅತಿಯಾದ ಮಮತೆ. ಅದರಲ್ಲೂ ಕೆಲವೊಂದು ಪ್ರಾಣಿಗಳು ಒಬ್ಬ ವ್ಯಕ್ತಿ, ಒಂದು ಕುಟುಂಬವನ್ನು ಮೀರಿ ಇಡೀ ಊರಿನ ಜನರ ಪ್ರೀತಿಯನ್ನು ಗಳಿಸಿರುತ್ತವೆ. ಹಾಗೆ ಪ್ರೀತಿಯಿಂದ ಬೆಳೆದ ಪ್ರಾಣಿಗಳ ಸಾವು ಕೂಡಾ ಕುಟುಂಬದವರ ಸಾವನ್ನೂ ಮೀರಿಸಿ ಅನುಕಂಪವನ್ನು ಪಡೆಯುತ್ತದೆ, ಕಣ್ಣೀರಿಗೆ ಕಾರಣವಾಗುತ್ತದೆ.

ಮಂಡ್ಯ ಜಿಲ್ಲೆಯ ಮೊತ್ತಹಳ್ಳಿ ಗ್ರಾಮದಲ್ಲಿ ನಡೆದಿರುವುದು ಅಂತಹುದೇ ಒಂದು ಘಟನೆ. ಇಡೀ ಊರಿನ ಬಹುತೇಕರ ಪ್ರೀತಿಗೆ ಪಾತ್ರವಾಗಿದ್ದ ಕೋತಿಯೊಂದು ಇತ್ತೀಚೆಗೆ ವಿದ್ಯುತ್‌ ಆಘಾತಕ್ಕೆ (Electric Shock) ಒಳಗಾಗಿ ಪ್ರಾಣ ಕಳೆದುಕೊಂಡಿತ್ತು (Monkey death). ಎಲ್ಲರ ಜತೆಗೆ ಆಟವಾಡುತ್ತಾ, ಮಕ್ಕಳನ್ನೂ ಮುದ್ದು ಮಾಡುತ್ತಾ, ಹಿರಿಯರ ಜತೆಗೂ ಒಡನಾಡುತ್ತಾ ಇಡೀ ಊರಿನ ಜನರ ಕೈಯಲ್ಲಿ ಮಗುವಿನಂತೆ ಆಟವಾಡಿಕೊಂಡಿದ್ದ ಆ ಕೋತಿ ಸಾವನ್ನಪ್ಪಿದ ದಿನ ಇಡೀ ಊರಿಗೆ ಊರೇ ಸೂತಕದ ಛಾಯೆಯಲ್ಲಿತ್ತು.

ಮಂಡ್ಯದ ಮೊತ್ತಹಳ್ಳಿಯಲ್ಲಿ ನಡೆದ ಮಂಗನ ತಿಥಿ ಕಾರ್ಯದ ವೇಳೆ ಮಹಿಳೆಯರು ಪೂಜೆ ಸಲ್ಲಿಸಿದರು.

ಆವತ್ತು ಸೇರಿದ ನೂರಾರು ಜನರು ಮಂಗನನ್ನು ಒಂದು ಪ್ರಾಣಿ ಎಂದು ನೋಡದೆ ತಮ್ಮದೇ ಮನೆಯ ಒಬ್ಬ ಸದಸ್ಯ ಸಾವನ್ನಪ್ಪಿದ್ದಾನೆ ಎಂಬ ಕಾಳಜಿಯಿಂದ ನೋಡಿದರು. ಅಷ್ಟೂ ಜನ ಸೇರಿ ಮಂಗನ ಅಂತ್ಯಕ್ರಿಯೆಯನ್ನು ಮನುಷ್ಯರಿಗೆ ಹೇಗೆ ಮಾಡುತ್ತೇವೋ ಹಾಗೇ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದರು. ಅಂದು ಜನರೆಲ್ಲ ಸೇರಿ ಮನುಷ್ಯರಿಗೆ ಹೇಗೆ ಮಾಡುವಂತೆಯೇ ಮಂಗನನ್ನು ಸ್ನಾನ ಮಾಡಿಸಿದರು. ಹೂವಿನ ಹಾರ ಹಾಕಿದರು. ಪ್ರತಿಯೊಬ್ಬರೂ ಅಂತಿಮ ದರ್ಶನ ಪಡೆದು ನಮಿಸಿದರು. ಬಳಿಕ ಬಿದಿರಿನ ಚಟ್ಟಕಟ್ಟಿದರು. ಬಿದಿರಿನ ಚಟ್ಟದಲ್ಲಿಟ್ಟು ಕೋತಿಯನ್ನು ತಮಟೆ ಸದ್ದಿನ ಮೂಲಕ ಸಾಂಪ್ರದಾಯಿಕವಾಗಿ ಮೆರವಣಿಗೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅಂದೇ ಈ ಕೋತಿಯ ತಿಥಿಯನ್ನೂ ಆಚರಿಸಬೇಕು ಎಂಬ ತೀರ್ಮಾನ ಮಾಡಲಾಗಿತ್ತು.

ಅದರಂತೆ ಮಂಗಳವಾರ ನಡೆಯಿತು ತಿಥಿ ಕಾರ್ಯ

ಮಂಗಳವಾರಕ್ಕೆ (ಜುಲೈ 4) ಕೋತಿಯ ಮರಣ ಸಂಭವಿಸಿ 11ನೇ ದಿನ. 11ನೇ ದಿನದ ಕಾರ್ಯವನ್ನು ಕೂಡಾ ಇಡೀ ಊರಿನವರು ಸೇರಿ ಸಕಲ ಸಂಪ್ರದಾಯಗಳ ಮೂಲಕವೇ ನೆರವೇರಿಸಿದರು.

11ನೇ ದಿನದ ಕಾರ್ಯದ ವೇಳೆ ಅಡುಗೆಗೆ ತಯಾರಿ

11 ದಿನಗಳ ಕೆಳಗೆ ಮೃತಪಟ್ಟ ದಿನ ಅಂತ್ಯಸಂಸ್ಕಾರ ನಡೆದ ಜಾಗದಲ್ಲಿ ಒಂದು ಸಮಾಧಿಯನ್ನು ಕಟ್ಟಲಾಗಿತ್ತು. ಆ ಸಮಾಧಿಯ ಮೇಲೆ ಫೋಟೊ ಇಟ್ಟು ಹೂವಿನ ಹಾರ ಹಾಕಿ ಅಲಂಕರಿಸಲಾಗಿತ್ತು. ವಿವಿಧ ಬಗೆಯ ತಿಂಡಿ ತಿನಿಸುಗಳು, ಖಾದ್ಯಗಳ ಅಡುಗೆ ಮಾಡಿಸಿ ಮಂಗನ ಮುಂದೆ ಬಡಿಸಲಾಯಿತು. ಅತ್ಯಂತ ಶ್ರದ್ಧಾ ಭಕ್ತಯಿಂದ ಸಮಾಧಿ ಮುಂದೆ ಎಡೆ ಇಟ್ಟು ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ತಿಥಿ ಕಾರ್ಯದ ದಿನವಾದ ಮಂಗಳವಾರ ನೂರಾರು ಮಂದಿಗೆ ಅನ್ನ ಸಂತರ್ಪಣೆ ನಡೆಯಿತು.

ಕೆಲವರು ಇದನ್ನು ಸಂಭ್ರಮದಂತೆ ಆಚರಿಸಿ ಖುಷಿಪಟ್ಟರೂ ಅದೆಷ್ಟೋ ಮಂದಿಗೆ 11 ದಿನಗಳ ಬಳಿಕವೂ ಕಣ್ಣೀರು ಇಂಗಿರಲಿಲ್ಲ. ಕೆಲವು ಮಹಿಳೆಯರು ಮಂಗನ ನೆನೆದು ಸಮಾಧಿ ಬಳಿ ಗೋಳಾಡಿದರು.

ಮಹಿಳೆಯಿಂದ ಅಂತಿಮ ನಮನ

ಎಲ್ಲ ಸಂಪ್ರದಾಯಗಳ ಬಳಿಕ ಗ್ರಾಮದಲ್ಲಿ ಮಂಗನ ತಿಥಿ ಕಾರ್ಯದ ಅನ್ನಸಂತರ್ಪಣೆ ಜರುಗಿತು. ಮಂಗನ ಸಮಾಧಿ ಬಳಿಯೇ ಕುಳಿತು ಗ್ರಾಮಸ್ಥರು ಭೋಜನ ಸ್ವೀಕರಿಸಿದರು. ಕೆಲವು ಯುವಕರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹಲವಾರು ಮಂದಿ ದೇಣಿಗೆಯ ಮೂಲಕ ಸಹಕಾರ ನೀಡಿದ್ದರು.

ಇದನ್ನೂ ಓದಿ: Monkey death : ನೀರಿನ ಟ್ಯಾಂಕ್‌ಗೆ ಬಿದ್ದು ಮಂಗಗಳ ಸಾವು, ಸುದ್ದಿ ಕೇಳಿಯೇ ಹಲವರು ಅಸ್ವಸ್ಥ!

Exit mobile version