ಮಂಡ್ಯ: ಮೂಕಜೀವಿಗಳ ನಡೆಯು ಒಮ್ಮೊಮ್ಮೆ ಜನರಲ್ಲಿ ಅಚ್ಚರಿಯನ್ನು (Miracle)ಮೂಡಿಸುತ್ತದೆ. ಮನುಷ್ಯನೊಟ್ಟಿಗೆ ಪ್ರಾಣಿಗಳ ಬಾಂಧವ್ಯ (Human- Animal Relationship) ಕೆಲವೊಮ್ಮೆ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡುತ್ತದೆ. ನಾಯಿಗಳನ್ನು ಅತಿಯಾಗಿ ಪ್ರೀತಿಸುವವರು (Dog lovers), ಗೋವುಗಳನ್ನು ಜೀವದಂತೆ ಕಾಪಾಡುವವರು (devotees of cow) ಇದ್ದಾರೆ. ಅಂತೆಯೇ ಕೆಲವರಿಗೆ ಕೋತಿಗಳ ಮೇಲೂ ಅತಿಯಾದ ಮಮತೆ. ಅದರಲ್ಲೂ ಕೆಲವೊಂದು ಪ್ರಾಣಿಗಳು ಒಬ್ಬ ವ್ಯಕ್ತಿ, ಒಂದು ಕುಟುಂಬವನ್ನು ಮೀರಿ ಇಡೀ ಊರಿನ ಜನರ ಪ್ರೀತಿಯನ್ನು ಗಳಿಸಿರುತ್ತವೆ. ಹಾಗೆ ಪ್ರೀತಿಯಿಂದ ಬೆಳೆದ ಪ್ರಾಣಿಗಳ ಸಾವು ಕೂಡಾ ಕುಟುಂಬದವರ ಸಾವನ್ನೂ ಮೀರಿಸಿ ಅನುಕಂಪವನ್ನು ಪಡೆಯುತ್ತದೆ, ಕಣ್ಣೀರಿಗೆ ಕಾರಣವಾಗುತ್ತದೆ.
ಕೋತಿಗಳನ್ನು ಆಂಜನೇಯನ ಸ್ವರೂಪವೆಂದೇ ನಂಬಲಾಗುತ್ತೆ. ಅವುಗಳು ಸತ್ತರೆ ತಿಥಿ ಮಾಡಿ ಊಟ ಹಾಕಿಸುವ ಸಂಪ್ರದಾಯ ಈಗಲೂ ಇದೆ. ಅದರಲ್ಲೂ ಮಂಡ್ಯ ಭಾಗದ ಜನರಿಗೆ ಮಂಗಗಳನ್ನು ಕಂಡರೆ ಅದೇನೊ ವಿಶೇಷ ಪ್ರೀತಿ ಇದೆ. ಹಿಂದೊಮ್ಮೆ ಮಂಡ್ಯದ ಮೊತ್ತಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಮಂಗನ ತಿಥಿ ಕಾರ್ಯವನ್ನು ಗ್ರಾಮಸ್ಥರು ಮಾಡಿದ್ದರು. ಈಗ ಅದೇ ರೀತಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ದೊಡ್ಡಭೋಗನಹಳ್ಳಿ ಗ್ರಾಮದಲ್ಲೂ ಕರೆಂಟ್ ಶಾಕ್‌ನಿಂದ ಮರಣ ಹೊಂದಿದ್ದ ಕೋತಿಯ 11ನೇ ದಿನದ ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ.
ಇಡೀ ಊರಿನ ಬಹುತೇಕರ ಪ್ರೀತಿಗೆ ಪಾತ್ರವಾಗಿದ್ದ ಕೋತಿ ಆಗಸ್ಟ್ 25ರಂದು ವಿದ್ಯುತ್ ಶಾಕ್‌ನಿಂದ (Electric Shock) ಪ್ರಾಣ (Monkey death) ಕಳೆದುಕೊಂಡಿತ್ತು. ಎಲ್ಲರ ಜತೆಗೆ ಆಟವಾಡುತ್ತಾ, ಮಕ್ಕಳನ್ನೂ ಮುದ್ದು ಮಾಡುತ್ತಾ, ಹಿರಿಯರ ಜತೆಗೂ ಒಡನಾಡುತ್ತಾ ಇಡೀ ಊರಿನ ಜನರ ಕೈಯಲ್ಲಿ ಮಗುವಿನಂತೆ ಆಟವಾಡಿಕೊಂಡಿದ್ದ ಆ ಕೋತಿ ಸಾವನ್ನಪ್ಪಿದ ದಿನ ಊರಿಗೆ ಊರೇ ಸೂತಕದ ಛಾಯೆಯಲ್ಲಿತ್ತು.
ಊರಿನ ಸ್ನೇಹಿತನಂತಿದ್ದ ಕೋತಿಯು ಎಲ್ಲರಿಗೂ ಚಿರಪರಿಚಿತವಾಗಿತ್ತು. ಅದರ ಸವಿನೆನಪಿನೊಟ್ಟಿಗೆ ದಿನಕಳೆಯುತ್ತಿರುವ ದೊಡ್ಡಭೋಗನಹಳ್ಳಿ ಗ್ರಾಮಸ್ಥರು ಶಾಸ್ತ್ರೋಕ್ತ ರೀತಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಇದೀಗ 11 ನೇ ದಿನದ ತಿಥಿ ಕಾರ್ಯದ ವೇಳೆ ಹಾಲು ತುಪ್ಪ ಬಿಟ್ಟು ಪೂಜೆಯನ್ನು ಸಲ್ಲಿಸಿದ್ದಾರೆ. ಇಡೀ ಊರಿನವರು ಸೇರಿ ಸಂಪ್ರದಾಯಗಳ ಮೂಲಕವೇ ನೆರವೇರಿಸಿದ್ದಾರೆ.
ಕೋತಿ ಮೃತಪಟ್ಟ ದಿನ ಅಂತ್ಯಸಂಸ್ಕಾರ ನಡೆದ ಜಾಗದಲ್ಲೇ ಒಂದು ಸಮಾಧಿಯನ್ನು ಕಟ್ಟಲಾಗಿತ್ತು. ಆ ಸಮಾಧಿಯ ಮೇಲೆ ಫೋಟೊ ಇಟ್ಟು ಹೂವಿನ ಹಾರ ಹಾಕಿ ಅಲಂಕರಿಸಲಾಗಿತ್ತು. ವಿವಿಧ ಬಗೆಯ ತಿಂಡಿ ತಿನಿಸುಗಳು, ಖಾದ್ಯಗಳ ಅಡುಗೆ ಮಾಡಿಸಿ ಮಂಗನ ಮುಂದೆ ಬಡಿಸಲಾಯಿತು. ಅತ್ಯಂತ ಶ್ರದ್ಧಾ ಭಕ್ತಯಿಂದ ಸಮಾಧಿ ಮುಂದೆ ಎಡೆ ಇಟ್ಟು ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಕೆಲವರು ಇದನ್ನು ಸಂಭ್ರಮದಂತೆ ಆಚರಿಸಿ ಖುಷಿಪಟ್ಟರೂ ಅದೆಷ್ಟೋ ಮಂದಿಗೆ 11 ದಿನಗಳ ಬಳಿಕವೂ ಕಣ್ಣೀರು ಇಂಗಿರಲಿಲ್ಲ. ಕೆಲವು ಮಹಿಳೆಯರು ಮಂಗನ ನೆನೆದು ಸಮಾಧಿ ಬಳಿ ಗೋಳಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ