ಬೆಂಗಳೂರು: ನೆರೆ ರಾಜ್ಯ ಕೇರಳದಲ್ಲಿ ಕೆಲವರಿಗೆ ಮಂಕಿಪಾಕ್ಸ್ (Monkeypox) ಕಾಣಿಸಿಕೊಂಡಿದ್ದು, ಇದೀಗ ಕರ್ನಾಟಕದಲ್ಲೂ ಆತಂಕ ಮೂಡಿಸಿದೆ. ಆರಂಭದಲ್ಲೇ ವೈರಸ್ ಹತ್ತಿಕ್ಕಲು ಎಲ್ಲ ಸಿದ್ಧತೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದ್ದು ಕೋವಿಡ್ ಮಾದರಿಯಲ್ಲೇ ನಿರ್ವಹಣೆ ಮಾಡಲು ಹೊರಟಿದೆ. ಇದಕ್ಕಾಗಿ ಮೊದಲ ಹಂತವಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಮತ್ತೊಂದು ಕಡೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ.
ಕೋವಿಡ್ ರೀತಿ ವೇಗವಾಗಿ ಮಂಕಿಪಾಕ್ಸ್ (Monkeypox) ವೈರಸ್ ಹರಡದೇ ಇದ್ದರೂ ನಿರ್ಲಕ್ಷ್ಯ ವಹಿಸದಂತೆ ಆರೋಗ್ಯ ಇಲಾಖೆ ಜನರಲ್ಲಿ ಮನವಿ ಮಾಡಿದೆ. ಜತೆಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಆರೋಗ್ಯ ಇಲಾಖೆ ಕಾನ್ಫಿಡೆನ್ಷಿಯಲ್ ಸಭೆ ನಡೆಸಿದೆ ಎನ್ನಲಾಗಿದೆ.
ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಂಕಿಪಾಕ್ಸ್‌ಗೆ (Monkeypox) ಪ್ರತ್ಯೇಕ ವಾರ್ಡ್ ಸ್ಥಾಪನೆ ಮಾಡಲಾಗಿದೆ. ಈ ಹಿಂದೆ ಕೋವಿಡ್ ಸೋಂಕಿಗಾಗಿ ಇದ್ದ ವಾರ್ಡ್‌ನಲ್ಲೇ ಕೆಲವು ಕೊಠಡಿಗಳನ್ನು ಮಂಕಿಪಾಕ್ಸ್ ಬೆಡ್‌ಗಳಾಗಿ ಬದಲಾಯಿಸಲಾಗಿದೆ. ಈಗ ಮಂಕಿಪಾಕ್ಸ್‌ಗಾಗಿ ಎರಡು ಬೆಡ್‌ಗಳನ್ನು ಮೀಸಲಿಟ್ಟಿದ್ದು, ಸೋಂಕು ವ್ಯಾಪಕವಾಗಿ ಹರಡಿದರೆ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ವೆಂಕಟೇಶಯ್ಯ ಹೇಳಿದ್ದಾರೆ.
ಇದನ್ನೂ ಓದಿ | Monkeypox | ಕರ್ನಾಟಕಕ್ಕೆ ಮಂಕಿಪಾಕ್ಸ್ ಆತಂಕ: ರಾಜ್ಯದ 21 ಪ್ರಯಾಣಿಕರ ಮೇಲೆ ನಿಗಾ
ಇತ್ತ ಮಂಕಿಪಾಕ್ಸ್ (Monkeypox) ಯುವಕರಲ್ಲಿ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದ್ದು, ಸರ್ಕಾರದ ಗೈಡ್ ಲೈನ್ಸ್‌ನಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
TAC ತೆಗೆದುಕೊಂಡ ನಿರ್ಣಯಗಳೇನು?
ತಾಂತ್ರಿಕ ಸಲಹಾ ಸಮಿತಿಯು (TAC) ಆರೋಗ್ಯ ಇಲಾಖೆಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು, ಅವುಗಳು ಹೀಗಿವೆ.
-ಮಂಕಿಪಾಕ್ಸ್‌ಗೆ (Monkeypox) ಪ್ರತ್ಯೇಕ ಗೈಡ್‌ಲೈನ್ಸ್ ಜಾರಿ ಮಾಡುವುದು. -ಜ್ವರ ಹಾಗೂ ರಾಷಸ್ ಇದ್ದವರ ಜತೆಗೆ ಸಂಪರ್ಕ ಬೆಳೆಸದಂತೆ ನೋಡಿಕೊಳ್ಳುವುದು. -ಯೂರೋಪ್, ಆಫ್ರಿಕಾ ಸೇರಿ ಮಂಕಿಪಾಕ್ಸ್ ಕಂಡು ಬಂದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು -ಬೆಂಗಳೂರು ಹಾಗೂ ಮಂಗಳೂರು ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರಿಗೆ ತಪಾಸಣೆ ನಡೆಸುವುದು.(ಜ್ವರ, ಬೆವರುವಿಕೆ, ಸ್ವೆಲ್ಲಿಂಗ್, ತಲೆನೋವು, ಕೀಲುನೋವು, ಕಫ, ಗಂಟಲುನೋವು, ಸ್ಕಿನ್ ರಾಷಸ್) -ಲಕ್ಷಣಗಳು ಕಂಡುಬಂದವರನ್ನು ಕೂಡಲೇ PHC ಸೆಂಟರ್‌ಗೆ ಶಿಫ್ಟ್ ಮಾಡಬೇಕು -ಲಕ್ಷಣ ಇರುವವರ ಬಳಿ ಇದ್ದವರು N95 ಮಾಸ್ಕ್ ಧರಿಸಬೇಕು – ಶಂಕಿತರ ಸ್ಯಾಂಪಲ್ಸ್‌ನ್ನು ಪರೀಕ್ಷೆಗೆ ಒಳಪಡಿಸಬೇಕು -ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು -ಹೊರ ರಾಜ್ಯದ ಪ್ರಯಾಣಿಕರ ಮೇಲೆ ಗಮನ ಹರಿಸಲು ಡಿಹೆಚ್‌ಓಗಳಿಗೆ ಸೂಚನೆ |
ಇದನ್ನೂ ಓದಿ | Monkeypox: ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್ ಪ್ರಕರಣ; ದೇಶದಲ್ಲಿದು 2ನೇ ಕೇಸ್