Site icon Vistara News

Monsoon session: ಜು.15ರಿಂದ ಮುಂಗಾರು ಅಧಿವೇಶನ: ನಾಗೇಂದ್ರ ಬಂಧನಕ್ಕೆ ಇಡಿ ನನ್ನ ಅನುಮತಿ ಪಡೆಯಲೇಬೇಕು ಎಂದ ಸ್ಪೀಕರ್‌

Monsoon session

ಬೆಂಗಳೂರು: 16ನೇ ವಿಧಾನ ಸಭೆಯ ನಾಲ್ಕನೇ ಅಧಿವೇಶನ (Assembly Session) ಜುಲೈ 15ರಿಂದ 26ವರೆಗೂ ನಡೆಯಲಿದೆ. ಒಟ್ಟು ಒಂಬತ್ತು ದಿನಗಳ ಕಾಲ ಮುಂಗಾರು ಅಧಿವೇಶನ (Monsoon session) ನಡೆಯಲಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಸಭೆಯ ಹಿಂಬಾಗಿಲು ಬದಲಿಸುವ ಕೆಲಸ ‌ಮಾಡಿದ್ದೇವೆ. ವಿಧಾನ ಸೌಧದ ಸೌಂದರ್ಯ ಹೆಚ್ಚಿಸಲು ಪ್ಲ್ಯಾನ್ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಜುಲೈ 15ರಂದು ಮುಖ್ಯದ್ವಾರದ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಮೊದಲು ಬಂದವರನ್ನು ಮಾತ್ರ ಗುರುತಿಸುತ್ತೀರಿ ಎಂಬ ಅಪವಾದ ಇತ್ತು. ಈಗ ತಡವಾಗಿ ಹೋದವರನ್ನೂ ಗುರುತಿಸಲು ಸೂಚಿಸಿದ್ದೇನೆ. ದಿನಕ್ಕೆ ವಿಧಾನ ಸಭೆ ಒಳಗೆ ಎಷ್ಟು ಬಾರಿ ಒಳಗೆ ಬಂದರು, ಎಷ್ಟು ಬಾರಿ ಹೊರಗೆ ಹೋದರು ಎಂಬ ಮಾಹಿತಿ ಸಂಗ್ರಹ ಮಾಡುತ್ತೇವೆ. ಜನಪ್ರತಿನಿಧಿಗಳಿಗೆ ಈ ಬಾರಿ ಚೆಸ್ ಗೇಮ್ ಏರ್ಪಾಡು ಮಾಡಿದ್ದೇವೆ. ಇದರಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರು ಭಾಗವಹಿಸಬಹುದು. ಕಾರ್ಯ ದಕ್ಷತೆ ತೋರಿದವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಶೀಘ್ರದಲ್ಲೇ ಕೊಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ | ED Raid: ಇಡಿಯಿಂದ ಪಾರಾಗಲು ಎಸ್‌ಐಟಿ ವಿಚಾರಣೆಗೆ ಹಾಜರಾದ ಶಾಸಕ ದದ್ದಲ್‌!

ಇಡಿ ಅಧಿಕಾರಿಗಳು ಶಾಸಕ ನಾಗೇಂದ್ರ ವಶಕ್ಕೆ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಬಂಧನದ ಬಗ್ಗೆ ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ಅಧಿವೇಶನ ನಡೆಯದಿರುವಾಗ ಬಂಧಿಸಿದ ಬಳಿಕ ನಮಗೆ ಮಾಹಿತಿ ಕೊಡಬೇಕು. ಇಲ್ಲಿಯವರೆಗೂ ಮಾಹಿತಿ ಕೊಟ್ಟಿಲ್ಲ. ಮುಂದೆ ಮಾಹಿತಿ ಕೊಡಬಹುದು. ಸದ್ಯಕ್ಕೆ ನನಗೆ ಮಾಹಿತಿ ಕೊಟ್ಟಿಲ್ಲ. ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ಅಧಿವೇಶನ ನಡೆಯುವಾಗ ಮಾತ್ರ ಶಾಸಕರನ್ನು ಬಂಧಿಸಬೇಕಿದ್ದರೆ ನನ್ನ ಅನುಮತಿ ಬೇಕು. ಈ ಪ್ರಕರಣದಲ್ಲಿ ನನಗೆ ಇಡಿ ಅಧಿಕಾರಿಗಳು ಬಂಧನದ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

40 ಗಂಟೆಗಳ ತಪಾಸಣೆ ಬಳಿಕ ಕೊನೆಗೂ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ

ಬೆಂಗಳೂರು: ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ (Valmiki Corporation Scam) ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊನ್ನೆ ಮುಂಜಾನೆಯಿಂದ ನಾಗೇಂದ್ರ ಮನೆ ಹಾಗೂ ಕಚೇರಿ ಮುಂತಾದೆಡೆ ಇಡಿ ದಾಳಿ (ED Raid) ನಡೆದಿತ್ತು.

40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿದೆ.

ಇಂದು ಬೆಂಗಳೂರಿನ ಇಡಿ ಕಚೇರಿಯಲ್ಲಿ ಅಧಿಕಾರಿಗಳು ಅವರನ್ನು ಪ್ರಶ್ನಿಸಲಿದ್ದಾರೆ. ನಾಗೇಂದ್ರ ಸಿಎ ಹರೀಶ್‌ ಕೂಡ ನಿನ್ನೆಯಿಂದ ಇಡಿ ವಶದಲ್ಲಿದ್ದಾರೆ. ಯೂನಿಯನ್‌ ಬ್ಯಾಂಕ್‌ನಲ್ಲಿ ಸುಳ್ಳು ದಾಖಲೆ ನೀಡಿ ಅಕ್ರಮ ಖಾತೆ ತೆರೆದು ಕೋಟ್ಯಂತರ ರೂಪಾಯಿ ನಿಗಮದ ಹಣವನ್ನು ಅಲ್ಲಿಗೆ ವರ್ಗಾಯಿಸಿದ ಕುರಿತು ಹರೀಶ್‌ ಹೇಳಿಕೆಯಲ್ಲಿ ಕೆಲವು ಸಾಕ್ಷಿಗಳು ದೊರೆತಿವೆ. ಬ್ಯಾಂಕ್‌ ಸಿಸಿಟಿವಿ ರೆಕಾರ್ಡ್‌ಗಳನ್ನು ಚೆಕ್‌ ಮಾಡಿದಾಗಲೂ, ನಾಗೇಂದ್ರ ಸಿಎ ಹಾಗೂ ಶಾಸಕ ದದ್ದಲ್‌ ಸಿಎ ಅಲ್ಲಿಗೆ ಬಂದು ಹೋದ ಕುರಿತು ದಾಖಲೆ ಲಭ್ಯವಾಗಿದೆ. 50 ಲಕ್ಷ ಡೀಲ್‌ ನಡೆಸಲಾಗಿರುವ ಕುರಿತು ಬಂಧಿತರಾಗಿರುವ ಬ್ಯಾಂಕ್‌ ಅಧಿಕಾರಿಗಳು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಈಗ ಹೆಚ್ಚಿನ ತನಿಖೆಯ ಉರುಳು ನಾಗೇಂದ್ರ ಕೊರಳಿಗೆ ಸುತ್ತಿಕೊಂಡಿದೆ.

ಇದನ್ನೂ ಓದಿ | ED Raids: ಕೇರಳದ ಚಿನ್ನದ ವ್ಯಾಪಾರಿಯ 9 ಸ್ಥಳಗಳ ಮೇಲೆ ಇ.ಡಿ. ದಾಳಿ; ಕಾರಲ್ಲಿ ಶಾಸಕ ಹ್ಯಾರಿಸ್‌ ಪ್ರೋಟೋಕಾಲ್ ಸ್ಟಿಕ್ಕರ್‌ ಪತ್ತೆ!

ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ನಿವಾಸಗಳ ಜತೆಗೆ ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್‌ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

Exit mobile version