ಬೆಂಗಳೂರು: ಕರ್ನಾಟಕ ವಿಧಾನಮಂಡಲ ಅಧಿವೇಶನಕ್ಕೆ (ಮುಂಗಾರು ಅಧಿವೇಶನ) ಮುಹೂರ್ತ ಫಿಕ್ಸ್ ಆಗಿದೆ. ಜುಲೈ 15ರಿಂದ 26ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ಅವರು ಶಿಫಾರಸು ಮಾಡಿದ್ದಾರೆ.
ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಅಧಿವೇಶನದ ದಿನಾಂಕ ಅಂತಿಮಗೊಳಿಸಲು ಸಿಎಂ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಅಧಿವೇಶನದ ದಿನಾಂಕವನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.
ಇದನ್ನೂ ಓದಿ | Parliament Sessions: ಹಿಂದೂ ಹಿಂಸಾವಾದಿ ಹೇಳಿಕೆ; ಸಂಸತ್‌ನಲ್ಲಿ ರಾಹುಲ್-ಮೋದಿ ಜಟಾಪಟಿ
ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ: ಸಿಎಂ
ರಾಜ್ಯದಲ್ಲಿ ಕಳೆದ ವರ್ಷ 2022-23ನೇ ಸಾಲಿನಲ್ಲಿ 1,22,821 ಕೋಟಿ, 2021- 22ರಲ್ಲಿ 1,45,266 ಕೋಟಿ ಜಿಎಸ್‌ಟಿ ಸಂಗ್ರಹಣೆ ಆಗಿತ್ತು. ವಾಣಿಜ್ಯ ತೆರಿಗೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. 65 ಸಿಬ್ಬಂದಿಗೆ ಉತ್ತಮವಾಗಿ ತೆರಿಗೆ ಸಂಗ್ರಹ ಮಾಡಿದ್ದಕ್ಕೆ ಪ್ರಶಸ್ತಿ ಕೊಟ್ಟಿದ್ದೀವಿ. ನಮ್ಮಲ್ಲಿ 6 ಸಾವಿರ ವಾಣಿಜ್ಯ ಇಲಾಖೆ ಸಿಬ್ಬಂದಿ ಇದ್ದಾರೆ, ಅವರೆಲ್ಲರೂ ಪ್ರಶಸ್ತಿ ತಗೋಳೋಕೆ ಪ್ರಯತ್ನ ಮಾಡಬೇಕು. ನಮ್ಮ ರಾಜ್ಯದ ಅಧಿಕಾರಿಗಳು ಬೇರೆಯವರಿಗೆ ಪ್ರೇರಣೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಎಸ್‌ಟಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಜಿಎಸ್‌ಟಿ ದಿನದ ವೇಳೆಗೆ ಹೆಚ್ಚು ತೆರಿಗೆ ವಸೂಲಿ ಮಾಡಿ, ಇನ್ನು ಹೆಚ್ಚು ನೌಕರರು ಪ್ರಶಸ್ತಿ ತೆಗೆದುಕೊಳ್ಳಬೇಕು ಎಂದರು.
ನಂತರ ಕರವೇ ನಾರಾಯಣಗೌಡ ನಿಯೋಗ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡಿಗರಿಗೆ ವಿಶೇಷ ಉದ್ಯೋಗ ಮೀಸಲಾತಿ ನೀಡಲು ಹೊಸ ಕಾನೂನು ಜಾರಿಗೆ ತರಬೇಕು ಅಂತ ಹೇಳಿದ್ದಾರೆ. ನಾನು ಅದನ್ನು ಸಂವಿಧಾನ ಹಿನ್ನೆಲೆಯಲ್ಲಿ ಎಜಿ ಜತೆಗೆ ಚರ್ಚೆ ಮಾಡುತ್ತೇನೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡುವುದು ಹಾಗೂ ಕಾನೂನು ಮಾಡುವುದು ಅವರ ಬೇಡಿಕೆಯಾಗಿದೆ. ಅದಕ್ಕೆ ಕಾನೂನು, ಸಂವಿಧಾನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.