Site icon Vistara News

Monsoon Travel: ಉತ್ತರ ಕರ್ನಾಟಕದ ವಾಸ್ತುಶಿಲ್ಪದ ಬೆಡಗು, ಮಳೆಗಾಲದಲ್ಲಿ ಮತ್ತಷ್ಟೂ ಸೊಬಗು!

north karnataka tourist places in rain

ಉತ್ತರ ಕರ್ನಾಟಕ ಎಂದಾಕ್ಷಣ ಮನಸ್ಸು ಬಗೆಬಗೆಯ ವಾಸ್ತುಶಿಲ್ಪ, ದೇವಾಲಯ ಶಿಲ್ಪಗಳ ಕಡೆಗೆ ಓಡುವುದುಂಟು. ಆದರೆ ಬಹುತೇಕರು ಯಾವ ಕಾಲದಲ್ಲಿ ಇವನ್ನು ನೋಡಿದರೆ ಚಂದ ಎಂಬ ಬಗ್ಗೆ ಊಹಿಸಿರಲಿಕ್ಕಿಲ್ಲ. ಅದ್ಭುತ ವಾಸ್ತುಶಿಲ್ಪದ ದೇವಾಲಯಗಳು, ರಾಜಮಹಾರಾಜುರುಗಳು ಕಟ್ಟಿಸಿದ ಅದ್ಭುತ ಕೆತ್ತನೆಗಳು ನಮ್ಮ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿರುವಾಗ ಎಲ್ಲ ಕಾಲದಲ್ಲೂ ನಾವವನ್ನು ಕಣ್ತುಂಬಿಕೊಳ್ಳುತ್ತೇವೆ. ಆದರೆ, ಒಮ್ಮೆಯಾದರೂ ಯೋಚಿಸಿದ್ದೀರಾ? ಹಂಪಿಯಾಗಲಿ, ಐಹೊಳೆ ಪಟ್ಟದಕಲ್ಲು ಇತ್ಯಾದಿಗಳ ಗತವೈಭವವನ್ನು ಪೂರ್ಣವಾಗಿ ಕಣ್ತುಂಬಿಕೊಳ್ಳಲು ಪ್ರಕೃತಿ ಮಾತೆಯೂ ನಮ್ಮ ಜೊತೆ ಸಹಕರಿಸಬೇಕು. ಮಳೆ ಬಂದು ತಂಪಾಗಿ, ಗಿಡಮರ ಚಿಗುರಿ, ಹುಲ್ಲುಕಡ್ಡಿಗಳೂ ಜೀವತುಂಬಿಕೊಂಡು ನಳನಳಿಸುವಾಗ ಈ ವಾಸ್ತುಶಿಲ್ಪಗಳೂ ಜೀವಪಡೆದಂತೆ ಕಾಣುತ್ತವೆ ಎಂದರೆ ಒಪ್ಪುತ್ತೀರಾ? ಒಪ್ಪಬೇಕೆಂದರೆ ಒಮ್ಮೆ ಇವಕ್ಕೆಲ್ಲ ನೀವು ಮಳೆಗಾಲದಲ್ಲಿ ಪಯಣ (monsoon travel) ಬೆಳೆಸಬೇಕು. ಅಷ್ಟೇ ಅಲ್ಲ, ಉತ್ತರ ಕರ್ನಾಟಕವನ್ನು ಮಳೆಗಾಲದಲ್ಲಿ ಇನ್ನಷ್ಟು ಚಂದಗಾಣಿಸುವಲ್ಲಿ, ಕೃಷ್ಣೆ, ಭೀಮ, ತುಂಗಭದ್ರ, ಘಟಪ್ರಭ, ಮಲಪ್ರಭ ನದಿಗಳ ಕಾಣಿಕೆಯೂ ಇದೆ. ಹಾಗಾಗಿ ತಡವೇಕೆ, ಈ ಮಳೆಗಾಲದಲ್ಲಿ ಒಮ್ಮೆ ಉತ್ತರ ಕರ್ನಾಟಕದೆಡೆಗೆ ನಿಮ್ಮ ಕಾರು ತಿರುಗಿಸಿ!

1. ಹಂಪೆ: ಕರ್ನಾಟಕದ ಚರಿತ್ರೆಯನ್ನು ಹೊಂಬಣ್ಣದಲ್ಲಿ ಕಾಣುವಂತೆ ಮಾಡುವ, ಸದಾ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯು ಶಕ್ತಿ ಹೊಂದಿರುವ ಕರ್ನಾಟಕದ ಪ್ರಮುಖ ಆಕರ್ಷಣೆಗಳಲ್ಲಿ ಮುಂಚೂಣಿಯಲ್ಲಿರುವ ಸ್ಥಳ ಎಂದರೆ ಅದು ಹಂಪೆ. ಹಂಪೆಗೆ ಹೋದಿರೆಂದರೆ ಅದು ಒಂದು ದಿನದಲ್ಲಿ ನೋಡಿ ಮುಗಿಯುವಂಥದ್ದಲ್ಲ ಎಂಬ ಸತ್ಯವನ್ನು ಅರಗಿಸಿಕೊಂಡೇ ನೀವು ಹಂಪೆಯತ್ತ ಪಯಣ ಬೆಳೆಸಬೇಕು. ವೀಕೆಂಡಿನ ಎರಡು ದಿನಗಳ ಜೊತೆಗೆ ಇನ್ನೊಂದಿಷ್ಟು ದಿನಗಳನ್ನು ಸೇರಿಸಿಕೊಳ್ಳುವುದಾಗಿದ್ದರೆ ಮಾತ್ರ ಹಂಪೆಗೆ ಹೋಗಿ. ವಿಜಯನಗರ ಸಾಮ್ರಾಜ್ಯದ ಗತವೈಭವ ಮಳೆಗಾಲದಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಮುಖ್ಯವಾಗಿ ಮೈದುಂಬಿ ಹರಿವ ತುಂಗಭದ್ರೆಯೂ ಇಲ್ಲಿನ ಜೀವನದಿ. ಇಲ್ಲಿನ ವಿರೂಪಾಕ್ಷ, ವಿಠ್ಠಲ ದೇಗುಲಗಳು, ಕಮಲ ಮಹಲ್‌, ಕಲಿನ ರಥ, ರಾಣಿಯರ ಸ್ನಾನಗೃಹ, ಆನೆಲಾಯ ಸೇರಿದಂತೆ ಹಂಪೆಯ ಎಲ್ಲವನ್ನೂ ನೋಡುವುದೇ ಸೊಗಸು. ಅಷ್ಟೇ ಅಲ್ಲ, ರಾಮಾಯಣದ ಕಿಷ್ಕಿಂಧೆಯಾಗಿದ್ದ ಹಂಪೆಯ ಅಂಜನಾದ್ರಿ ಬೆಟ್ಟದ ಪುಟ್ಟ ದೇಗುಲ, ತುಂಗಭದ್ರೆಯ ತೀರ, ಮಾತಂಗ ಬೆಟ್ಟ, ಹಿಪ್ಪೀ ದ್ವೀಪ ಹೀಗೆ ಹಂಪೆಯೊಂದರಲ್ಲೇ ಸುತ್ತಾಡಿ ನೋಡಲು ಮನದಣಿಯೆ ಜಾಗಗಳಿವೆ. ಸಮಯವಿದ್ದರೆ, ದಾರೋಜಿ ಕರಡಿ ಧಾಮದಲ್ಲೂ ಕಾದು ಅದೃಷ್ಟವಿದ್ದರೆ ಕರಡಿಗಳನ್ನೂ ನೋಡಿ ಬರಬಹುದು.

2. ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ: ಉತ್ತರ ಕರ್ನಾಟಕಕ್ಕೆ ಒಮ್ಮೆ ಕಾಲಿಟ್ಟರೆ, ಹಂಪೆಯ ಹಾಗೆ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯನ್ನು ನೋಡದಿದ್ದರೆ ಉತ್ತರ ಕರ್ನಾಟಕ ಪೂರ್ತಿಯಾಗದು. ಮಳೆಗಾಲದಲ್ಲಿ ಬಾದಾಮಿಯ ಗುಹೆಗಳಲ್ಲಿ ಅಂಥ ವಿಶೇಷವೇನಿದೆ ಎಂದು ಹುಬ್ಬೇರಿಸಬೇಡಿ. ಮಳೆಗೆ ಬಂಡೆಕಲ್ಲಿಗೂ ಕೂಡಾ ಜೀವಕಳೆ ಬರುತ್ತದೆ ಎಂಬುದು ನಿಮಗೆ ಬಾದಾಮಿ ನೋಡಿದರೆ ಅರಿವಾಗುತ್ತದೆ. ಸುತ್ತಮುತ್ತಲ ಇಡೀ ಪರಿಸರ ಜೀವಕಳೆಯಂದ ತುಂಬುವುದೇ ಸಾಕು, ಇಡಿಯ ಪಯಣವನ್ನು ಚಂದವಾಗಿಸಲು. ಪಟ್ಟದಕಲ್ಲಿನ ದೇಗುಲಗಳ ಅಮೋಘ ವಾಸ್ತುಶಿಲ್ಪ, ಐಹೊಳೆಯ ದುರ್ಗಾ ದೇವಸ್ಥಾನ, ಲಾಡ್‌ಖಾನ್‌ ದೇವಾಲಯ ಹೀಗೆ ಒಂದೊಂದೇ ಕೆತ್ತನೆಗಳನ್ನು ಕಣ್ತುಂಬಿಕೊಂಡು ಮಳೆಗಾಲದ ತಂಪಿನಲ್ಲಿ ಪಯಣಿಸುವುದೇ ಆನಂದ.

3. ಬಿಜಾಪುರದ ಗೋಲ್‌ಗುಂಬಜ್‌: ಗೋಲ್‌ಗುಂಬಜ್‌ ನೋಡಲು ಇಂಥದ್ದೇ ಕಾಲ ಎಂಬುದು ಬೇಕಿಲ್ಲ ನಿಜ. ಆದರೆ ಒಂದು ಪಯಣವನ್ನು ಮಧುರವನ್ನಾಗಿಸುವ ಸಾಮರ್ಥ್ಯ ಮಳೆಗಿದೆ. ಸುತ್ತಲ ಇಡೀ ಪರಿಸರಕ್ಕೆ ಜೀವಕಳೆ ತುಂಬಿಸುವ ಶಕ್ತಿಯೂ ಮಳೆಗಿದೆ. ಹಾಗಾಗಿ ಮಳೆಯಲ್ಲಿ ಗೋಲ್‌ಗುಂಬಜ್‌ ನೋಡಬೇಕು.

4. ಗೋಕಾಕ್‌ ಜಲಪಾತ: ಘಟಪ್ರಭ ನದಿ ಬೆಳಗಾವಿಯ ಬಳಿ ಎತ್ತರದಿಂದ ಧುಮುಕುವ ಪರಿಯನ್ನು, ಅದರ ವೇಗವನ್ನು ಕಣ್ತುಂಬಿಕೊಳ್ಳಬೇಕಾದರೆ ಮಳೆಗಾಲವೇ ಆಗಬೇಕು. ಗೋಕಾಕ್‌ನಿಂದ ಆರೇಳು ಕಿಮೀ ದೂರದಲ್ಲಿರುವ ಗೋಕಾಕ್‌ ಜಲಪಾತ ಮಳೆಗಾಲದಲ್ಲಿ ನಯಾಗಾರ ಜಲಪಾತದ ಹಾಗೆಯೇ ಕಾಣುತ್ತದೆ.

5. ಕೂಡಲ ಸಂಗಮ: ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲ ಸಂಗಮವೂ ಕೂಡಾ ಒಂದು ನೋಡಲೇಬೇಕಾದ ಸ್ಥಳ. ಅಲಮಟ್ಟಿ ಅಣೆಕಟ್ಟಿನಿಂದ ಸುಮಾರು 15 ಕಿಮೀ ದೂರದಲ್ಲಿರುವ ಇಲ್ಲಿ ಬಸವಣ್ಣನವರ ಸಮಾಧಿ ಇದೆ. ಐಕ್ಯ ಮಂಟಪ ಹೆಸರಿನಲ್ಲಿ ಕರೆಯುವ ಈ ಸ್ಥಳ ಮನೋಹರವಾಗಿದೆ. ಕುಳಿತು ಧ್ಯಾನ ಮಾಡುವ ಶಾಂತಿ ಇಲ್ಲಿ ಸಿಗಬಹುದಾಗಿದ್ದು ಇಲ್ಲಿ ಉದ್ಭವ ಲಿಂಗವೂ ಇದೆ.

ಇದನ್ನೂ ಓದಿ: Monsoon weekend: ಬೆಂಗಳೂರಿಗರಿಗೆ ಇದೋ ಮಳೆಗಾಲದ ಒಂದು ದಿನದ ಜಾಲಿ ರೈಡ್!

Exit mobile version