Site icon Vistara News

Monsoon weekend: ಬೆಂಗಳೂರಿಗರಿಗೆ ಇದೋ ಮಳೆಗಾಲದ ಒಂದು ದಿನದ ಜಾಲಿ ರೈಡ್!

nandi hills and other places in monsoon time to one day trip

ಮಳೆಗಾಲ ಎಂಬುದು ಭಾವಜೀವಿಗಳಿಗೆ ರಮ್ಯಕಾಲ. ಮಳೆಯ ಅವಾಂತರಗಳು ಬೆಂಗಳೂರಿಗರಿಗೆ ಗೊತ್ತಿದ್ದರೂ, ಮಳೆಗಾಗಿ ಭೂಮಿಯ ಪ್ರತಿಯೊಂದು ಜೀವವೂ ಕಾತರಿಸುತ್ತದೆ. ಮಳೆ ಬಂದಾಕ್ಷಣ ಮೈಮನ ಪುಳಕಗೊಳ್ಳುವುದಷ್ಟೇ ಅಲ್ಲ, ಸಕಲ ಜೀವರಾಶಿಗಳಲ್ಲೂ ಜೀವ ಅಂಕುರಿಸುತ್ತದೆ. ಮಳೆಯಿದ್ದರೆ ಎಲ್ಲವೂ ಇದೆ, ಮಳೆಯಿಲ್ಲದಿದ್ದರೆ ಏನೂ ಇಲ್ಲ ಎಂಬ ಸತ್ಯ ಪ್ರತಿಯೊಬ್ಬರಿಗೂ ತಿಳಿದಿದೆ. ಈ ಮಳೆಗಾಲದಲ್ಲಿ ಸುತ್ತಾಡಿ ಬರುವುದು ಬಹುತೇಕ ಭಾವಜೀವಿಗಳಿಗೆ ಆನಂದಮಯ ಕ್ಷಣ. ಬೆಂಗಳೂರಿಗರಿಗಂತೂ ವೀಕೆಂಡ್‌ ಬಂದಾಕ್ಷಣ ನಗರದ ಗಿಜಿಗುಡುವ ಗಜಿಬಿಜಿಯಿಂದ ದೂರವಾಗಿ ಎಲ್ಲಾದರೂ ಹೋಗಿ ಬರುವ ಮನಸ್ಸಾಗುವುದುಂಟು, ಮಲೆನಾಡಿಗೋ, ಅಥವಾ ಇನ್ನಾವುದೋ ರಾಜ್ಯದ ಮಳೆಕಾಡುಗಳನ್ನೋ ಸುತ್ತಾಡಿಬರಲು ಸಮಯದ ಅಭಾವವಿರುವ ಮಂದಿ, ವೀಕೆಂಡಿನಲ್ಲಿ ಬೆಂಗಳೂರಿನ ಸುತ್ತಮುತ್ತಲೇ (Monsoon weekend) ಇರುವ ಜಾಗಗಳನ್ನು ಮಳೆಗಾಲದಲ್ಲಿ  ನೋಡಿಕೊಂಡು ಬರಬಹುದು. ಒಂದೇ ದಿನದಲ್ಲಿ ನಗರದಿಂದ ಹೊರಹೋಗಿ, ಮನಸ್ಸನ್ನು ರಿಲ್ಯಾಕ್ಸ್‌ ಮಾಡಿಸಿಕೊಂಡು ಮಳೆಯಲ್ಲಿ ಭರಪೂರ ಮಿಂದೆದ್ದು (monsoon trek) ಬರಬಹುದು. ಅಂತಹ ಜಾಗಗಳು ಇಲ್ಲಿವೆ.

1. ನಂದಿಬೆಟ್ಟ: ಟಿಪ್ಪುಸುಲ್ತಾನನ ಬೇಸಿಗೆಯ ತಾಣವಾಗಿದ್ದ ನಂದಿಬೆಟ್ಟ (nandi hills) ಬೆಂಗಳೂರಿಗರ ಫೇವರಿಟ್‌ ವೀಕೆಂಡ್‌ ತಾಣ. ನಂದಿಬೆಟ್ಟ ಎಂದು ಮೂಗು ಮುರಿಯುವ ಮೊದಲು ಒಂದು ಬೆಳಗಾಗುವ ಮೊದಲು ಮಳೆಯ ದಿನಗಳಲ್ಲಿ ಹೋಗಿ ನೋಡಿ. ನೀವೆಂದೂ ಕಾಣದಿದ್ದ ಅಪರೂಪದ ಪ್ರಪಂಚ ನಿಮ್ಮೆದುರು ತೆರೆಯದಿದ್ದರೆ ಕೇಳಿ. ಬೆಂಗಳೂರಿನಿಂದ ಕೇವಲ ೬೦ ಕಿಮೀ ದೂರದಲ್ಲಿರುವ ನಂದಿಬೆಟ್ಟ ಪ್ರಕೃತಿ ಪ್ರಿಯರಿಗೆಂದೂ ಮೋಸ ಮಾಡದು. ಮಳೆಪ್ರಿಯರಿಗೂ ಕೂಡಾ ಅಷ್ಟೇ! ಮೋಡದ ರಾಶಿಯೊಳಗಿಂದ ನೀವೇ ತೇಲಿ ಬಂದಂತೆ ಬೆಟ್ಟದ ತುದಿಯಲ್ಲಿ ಸೂರ್ಯೋದಯದ ಹೊಂಬೆಳಕಿನಲ್ಲೂ, ಮಂಜಿನಲ್ಲೂ, ಮಳೆಹನಿಯಲ್ಲೂ ಮಿಂದೇಳುವ ಅಪರೂಪದ ಅವಕಾಶ ಇಲ್ಲಿ ಲಭ್ಯ.

kunti betta and other places in monsoon time to one day trip

2. ರಾಮನಗರ: ರಾಮನಗರವೂ (ramanagara) ಕೂಡಾ, ಬೆಂಗಳೂರಿನ ಪ್ರಕೃತಿ ಪ್ರಿಯರ ಪಾಲಿನ ಸ್ವರ್ಗ. ನಂದಿಬೆಟ್ಟದ ಪ್ರಸಿದ್ಧಿ, ಅಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ ಅಂತನಿಸಿದರೆ, ಕೊಂಚ ಶಾಂತವಾದ ರಾಮನಗರದ ಕಡೆಗೆ ಹೋಗಬಹುದು. ಪಕ್ಷಿಪ್ರಿಯರಿಗಂತೂ ರಾಮನಗರ ಹಬ್ಬವೇ ಸರಿ. ಇಲ್ಲಿನ ರಾಮದೇವರ ಬೆಟ್ಟಕ್ಕೆ ಮಳೆಯಲ್ಲಿ ಹತ್ತುವುದು, ಜಾರುವ ಬಂಡೆಗಳಲ್ಲಿ ನಿಧಾನವಾಗಿ ಹತ್ತುತ್ತಾ ಮಳೆಯಲ್ಲಿ ನೆನೆಯುವುದು ಇತ್ಯಾದಿ ಚಟುವಟಿಕೆಗಳು ಖುಷಿಯನ್ನಷ್ಟೇ ತರಬಹುದು. ಬೆಂಗಳೂರಿನಿಂದ ಕೇವಲ 49 ಕಿಮೀ ದೂರದಲ್ಲಿರುವ ಇದು ವೀಕೆಂಡಿಗೆ ಪರ್ಫೆಕ್ಟ್‌ ತಾಣ.

kunti betta and other places in monsoon time to one day trip

3. ಸ್ಕಂದಗಿರಿ: ನೀವು ಚಾರಣ ಪ್ರಿಯರಾದರೆ ಸ್ಕಂದಗಿರಿಯನ್ನು (Skandagiri) ಖಂಡಿತಾ ಮರೆಯಲಾರಿರಿ. ಅದರಲ್ಲೂ ಮಳೆಗಾಲದಲ್ಲಿ ಸ್ಕಂದಗಿರಿ ಹತ್ತಿ ಅಲ್ಲಿಂದ ಸುತ್ತಮುತ್ತಲ ದೃಶ್ಯವನ್ನು ಮನ ತುಂಬಿಕೊಳ್ಳುವುದು ಖಂಡಿತವಾಗಿಯೂ ಅದ್ಭುತ ಅನುಭವ. ಇಲ್ಲಿನ ರಾತ್ರಿ ಚಾರಣವೂ ಕೂಡಾ ಪ್ರಕೃತಿ ಪ್ರಿಯರ ನಡುವೆ ಬಲುಪ್ರಸಿದ್ಧಿ. ಬೆಳಗಿನ ಸೂರ್ಯೋದಯ ಅಧ್ಬುತವಾಗಿ ಕಾಣುತ್ತದೆ. ಬೆಟ್ಟದ ತುದಿಯಲ್ಲಿ ಮೋಡಗಳೊಡನೆ ತೇಲಾಡಿದ ಅನುಭವ ನಿಮಗೆ ಬೇಕಿದ್ದರೆ ನೀವು ಸ್ಕಂದಗಿರಿ ಹತ್ತಬೇಕು. ಬೆಂಗಳೂರಿನಿಂದ ಕೇವಲ 62 ಕಿಮೀ ದೂರದಲ್ಲಿರುವ ಇದು ನಂದಿಬೆಟ್ಟದ ಪಕ್ಕದಲ್ಲಿಯೇ ಇದೆ.

kunti betta and other places in monsoon time to one day trip

4. ಅಂತರಗಂಗೆ: ಬೆಂಗಳೂರಿನಿಂದ ಸುಮಾರು 70 ಕಿಮೀ ದೂರದಲ್ಲಿರುವ ಅಂತರಗಂಗೆ (Antaragange) ವೀಕೆಂಡಿನಲ್ಲಿ ನೋಡಿ ಬರಬಹುದಾದ ಅದ್ಭುತ ಜಾಗ. ನೀವು ಕೊಂಚ ಚಾರಣ ಪ್ರಿಯರಾದರೆ, ಅಂತರಗಂಗೆಯನ್ನು ಖಂಡಿತ ಇಷ್ಟಪಡುತ್ತೀರಿ. ಕೋಲಾರ ಜಿಲ್ಲೆಯಲ್ಲಿರುವ ಇದು ಕುಟುಂಬ ಸಮೇತ ಮಕ್ಕಳ ಜೊತೆ ಹೋಗಿ ಬರಬಹುದಾದ ಜಾಗ. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಈ ಜಾಗದಲ್ಲಿ ಪುಟ್ಟ ದೇವಾಲಯ, ಗುಹೆಗಳೂ ಇವೆ. ಸುಮಾರು 15ರಿಂದ 20 ನಿಮಿಷ ಮೆಟ್ಟಲೇರುವ ಸಾಹಸ ಮಾಡಿದರೆ ಸುಂದರ ದೃಶ್ಯವನ್ನೂ ಕಣ್ತುಂಬಿಕೊಂಡು ದೇವರ ದರ್ಶನವನ್ನೂ ಮಾಡಿಕೊಂಡು ಬರಬಹುದು. ಗುಹೆಗೆ ಹೋಗುವಾಗ ಮಾತ್ರ ಮಳೆಗಾಲದಲ್ಲಿ ಕೊಂಚ ಜಾಗ್ರತೆ ವಹಿಸುವುದು ಉತ್ತಮ.

kunti betta and other places in monsoon time to one day trip

5. ಕುಂತೀ ಬೆಟ್ಟ: ಬೆಂಗಳೂರಿನಿಂದ 100 ಕಿಮೀ ದೂರದಲ್ಲಿರುವ ಕುಂತೀ ಬೆಟ್ಟ ಸಾಹಸ ಪ್ರಿಯರಿಗೆ ಇಷ್ಟವಾಗುವಂಥ ಜಾಗ. ಬ್ರಿಟೀಶರ ಕಾಲದಲ್ಲಿ ಫ್ರೆಂಚ್‌ ರಾಕ್‌ ಎಂದು ಕರೆಯಲ್ಪಡುತ್ತಿದ್ದ ಇದು ಬಂಡೆಗಲ್ಲುಗಳ ಬೆಟ್ಟ. ಪಾಂಡವಪುರದ ಬಳಿ ಇರುವ ಇದು ಸ್ಥಳೀಯರ ಪಾಲಿಗೆ ಇದು ಯಾವಾಗಲೂ ಕುಂತೀ ಬೆಟ್ಟ. ಮಳೆಗಾಲದಲ್ಲಿ ಈ ಬೆಟ್ಟ ಹತ್ತುವ ಲಾಭಗಳೇ ಬೇರೆ. ಇಲ್ಲಿಂದ ಕಾಣುವ ಹಸಿರು ಹಸಿರಾದ ದೃಶ್ಯಾವಳಿ, ಬೆಟ್ಟದಲ್ಲಿ ಅರಳುವ ನೂರಾರು ಕಾಡುಹೂಗಳು ಮನಸೂರೆಗೊಳ್ಳುತ್ತವೆ.  ಒಂದು ದಿನದಲ್ಲಿ ಹೋಗಿ ಬರಬಹುದಾದ ಅದ್ಭುತ ಜಾಗವಿದು.

ಇದನ್ನೂ ಓದಿ: Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!

Exit mobile version