Site icon Vistara News

ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್, ಇದು ಬಡಮಕ್ಕಳ ಪಾಲಿಗೆ ಪ್ರೀತಿಯ ಅರಮನೆ!

ʼಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ʼ

ಬೆಂಗಳೂರು: ಚಂದದ ಯುನಿಫಾರ್ಮ್‌, ಮುದ್ದಾದ ಬ್ಯಾಗ್‌ ಹಿಡಿದುಕೊಂಡು ಪುಟಪುಟನೆ ಸ್ಕೂಲ್‌ ಬಸ್‌ ಹತ್ತಿ ಶಾಲೆಗೆ ಹೋಗುವುದು ಎಲ್ಲ ಮಕ್ಕಳಿಗೆ ಹೆಮ್ಮೆ ಮತ್ತು ಅಚ್ಚುಮೆಚ್ಚಿನ ಕೆಲಸ. ಆದರೆ, ಈ ಭಾಗ್ಯ ಎಲ್ಲ ಮಕ್ಕಳಿಗೂ ಇರುವುದಿಲ್ಲ. ಅದರಲ್ಲೂ ಕೊಳೆಗೇರಿಗಳ ಮಕ್ಕಳಿಗೆ ಸ್ಕೂಲ್‌ ಬಸ್ಸಿನಲ್ಲಿ ಹೋಗುವುದು ಬಿಡಿ, ಶಾಲೆಗೆ ಹೋಗುವುದೇ ದೊಡ್ಡ ಸಾಧನೆ. ಕೆಲವರ ಪಾಲಿಗಂತೂ ಶಾಲೆಯೇ ಮರೀಚಿಕೆ.

ಅಂಥ ವಂಚಿತ ಮಕ್ಕಳ ಬಾಗಿಲಿಗೇ ಚಂದದೊಂದು ಶಾಲೆಯೇ ಸುಂಯ್‌ ಅಂತ ಬಂದರೆ ಹೇಗಿರುತ್ತದೆ. ಶಾಲೆಗೆ ಬಸ್ಸಿನಲ್ಲಿ ಹೋಗಲಿಕ್ಕಿಲ್ಲ. ಶಾಲೆಯೇ ಬಸ್ಸಿನ ರೂಪದಲ್ಲಿ ಬಂದರೆ ಹೇಗಿರುತ್ತದೆ. ಇಂಥಹುದೊಂದು ಕಲ್ಪನೆ ಬೆಂಗಳೂರು ಮಹಾನಗರ ಪಾಲಿಕೆಯನ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಿಜವಾಗಿದೆ.
ಮನೆಯನ್ನೇ ಸರಿಯಾಗಿ ಕಾಣದ, ಶಾಲೆಗಳು ಕೇವಲ ಕನಸೇ ಆಗಿರುವ ಮಕ್ಕಳ ಮನೆ ಬಾಗಿಲಿಗೆ ಬಸ್‌ ಮೂಲಕ ಶಿಕ್ಷಣವನ್ನು ಒದಗಿಸುವ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ಬೆಂಗಳೂರು ಮೂಲದ ಎನ್‌ಜಿಒ ಆಗಿರುವ ಫ್ರೀ ಥಿಂಕಿಂಗ್‌ ಫೌಂಡೇಷನ್‌. ಪಾಲಿಕೆಯ ಸಹಕಾರದೊಂದಿಗೆ ಮೊದಲ ಮಾಂಟೆಸ್ಸರಿ ಸ್ಕೂಲ್‌ ಆನ್‌ ವೀಲ್ಸ್‌ ಎನ್ನುವ ಯೋಜನೆಯನ್ನು ದಕ್ಷಿಣ ವಲಯದಲ್ಲಿ ಜಾರಿಗೆ ತರಲಾಗಿದೆ.

ಬಸ್ಸೇ ಇವರ ಶಾಲೆ
ಬಿಬಿಎಂಪಿಯು ಪ್ರತಿಷ್ಠಾನಕ್ಕೆ ಎರಡು ಬಿಎಂಟಿಸಿ ಬಸ್‌ಗಳನ್ನು ಒದಗಿಸಿದ್ದು, ಅವುಗಳನ್ನು ಸುಂದರವಾಗಿ ಕ್ಲಾಸ್‌ ರೂಂಗಳಾಗಿ ಪರಿವರ್ತಿಸಲಾಗಿದೆ. ಬೆಳಗ್ಗೆ 9.30ರ ಹೊತ್ತಿಗೆ ಒಂದು ಪ್ರದೇಶಕ್ಕೆ ಬರುವ ಈ ಸ್ಕೂಲ್‌ ಬಸ್‌ ಮಧ್ಯಾಹ್ನ 12 ಗಂಟೆಯವರೆಗೂ ಅಲ್ಲೇ ಇದ್ದು ಮಕ್ಕಳಾಟದ, ಖುಷಿಯ ತಾಣವಾಗುತ್ತದೆ.

300 ಮಕ್ಕಳ ಆಟದ ಮನೆ
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿರುವ ಮಾಂಟೆಸರಿ ಆನ್‌ ವೀಲ್ಸ್‌ ಬಸ್‌ನಲ್ಲಿ ಎರಡೂವರೆಯಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಈಗಾಗಲೇ ಸುಮಾರು 300 ಮಕ್ಕಳು ಇದರಲ್ಲಿ ಶಿಕ್ಷಣ ಪಡೆದಿದ್ದಾರೆ. ಬಿಬಿಎಂಪಿ ಇನ್ನೂ 10 ಬಸ್‌ಗಳನ್ನು ಒದಗಿಸಿದ್ದು, ದಕ್ಷಿಣ ವಲಯದ ಎಲ್ಲ ಭಾಗಗಳಿಗೆ ಈ ಮಾಂಟೆಸ್ಸರಿ ಆನ್‌ ವೀಲ್ಸ್‌ ತಲುಪಲಿದೆ ಎಂದು ಬಿಬಿಎಂಪಿಯಲ್ಲಿ ಶಿಕ್ಷಣ ವಿಭಾಗದ ಸಹಾಯಕ ಕಮಿಷನರ್‌ ಆಗಿರುವ ಉಮೇಶ್‌ ಡಿ.ಎಸ್‌. ಹೇಳಿದ್ದಾರೆ.

ಫ್ರೀಥಿಂಕಿಂಗ್‌ ವಿಶೇಷ ಕನಸು
ಫ್ರೀಥಿಂಕಿಂಗ್‌ ಎನ್‌ಜಿಒ ಎಲ್ಲ ಬಸ್‌ಗಳನ್ನು ಶಾಲೆಯಾಗಿ ಪರಿವರ್ತಿಸುವುದಲ್ಲದೆ, ಬೇಕಾದ ಎಲ್ಲ ಆಧುನಿಕ ಶೈಕ್ಷಣಿಕ ಸವಲತ್ತುಗಳನ್ನು ಒದಗಿಸುತ್ತದೆ. ಪ್ರತಿಯೊಂದು ಬಸ್‌ ಸುಮಾರು 50 ಮಕ್ಕಳಿಗೆ ಹಲವು ಸಮಯದ ಕಾಲ ಪ್ರೀತಿಯಿಂದ ಶಿಕ್ಷಣವನ್ನು ನೀಡುತ್ತದೆ.

ಏನೆಲ್ಲಾ ಇದೆ ಅದರೊಳಗೆ?
ಈ ಬಸ್ಸೆಂಬ ಶಾಲೆಯಲ್ಲಿ ಇಬ್ಬರು ಅಥವಾ ಮೂವರು ಶಿಕ್ಷಕ/ಶಿಕ್ಷಕಿಯರು ಇರುತ್ತಾರೆ. ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಇದರಲ್ಲಿ ಒಂದು ಸಣ್ಣ ಲೈಬ್ರರಿ, ಆಡಿಯೊ ವಿಷುವಲ್‌ ಸಾಧನಗಳನ್ನು ಹೊಂದಿದ್ದು, ಸಮಗ್ರ ಶಿಕ್ಷಣಕ್ಕೆ ಇಲ್ಲಿ ಅವಕಾಶವಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಮಾತ್ರವಲ್ಲ ಮಾಂಟೆಸ್ಸರಿ ಶಿಕ್ಷಕಿಯರಿಗೂ ಕಲಿಕೆಯ ತಾಣವಾಗಿದೆ.

ಮಕ್ಕಳಿಗೆ ಊಟವೂ ಇದೆ
ಈ ಮಾಂಟೆಸರಿ ಬಸ್‌ನಲ್ಲಿ ಮಧ್ಯಾಹ್ನದ ಊಟ ನೀಡಲಾಗುತ್ತದೆ. ಆಗಾಗ ಆರೋಗ್ಯ ತಪಾಸಣೆ ನಡೆಯುತ್ತದೆ. ಇದನ್ನೂ ಇನ್ನಷ್ಟು ವಿಸ್ತರಿಸುವ, ಬಸ್‌ಗಳ ಸಂಖ್ಯೆಯನ್ನು 200ಕ್ಕೇರಿಸುವ, ಮುಂದಿನ ಐದು ವರ್ಷಗಳಲ್ಲಿ 10000 ಮಕ್ಕಳಿಗೆ ಶಿಕ್ಷಣ ನೀಡುವ, 2000 ಮಾಂಟೆಸ್ಸರಿ ಶಿಕ್ಷಕಿಯರನ್ನು ರೂಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಇದನ್ನೂ ಓದಿ | ಮಕ್ಕಳಿಗೆ ಕೋವಿಡ್‌ ಲಸಿಕೆ ಹಿನ್ನಡೆ, ಬಿಬಿಎಂಪಿಯಿಂದ ಶಾಲೆಗಳಲ್ಲಿ ವಿಶೇಷ ಅಭಿಯಾನ

ವಾಹನದಲ್ಲಿರುವ ಸೌಲಭ್ಯಗಳು

ʼಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ʼ

1. ಇಬ್ಬರು ಶಿಕ್ಷಕಿಯರು
2. ಓರ್ವ ಗ್ರೂಪ್ ಡಿ ನೌಕರ
3. ಮಾಂಟೆಸ್ಸರಿ ಕಲಿಕಾ ಸಾಮಗ್ರಿಗಳು
4. ಆಡಿಯೋ ದೃಶ್ಯಾವಳಿ-ಲ್ಯಾಪ್‌ಟಾಪ್
5. ಗ್ರಂಥಾಲಯ ಪುಸ್ತಕಗಳು
6. ಲೇಖನ ಸಾಮಗ್ರಿಗಳು
7. ಕಪ್ಪು ಹಲಗೆ(ಬ್ಲಾಕ್ ಬೋರ್ಡ್)
8. ಮಕ್ಕಳ ಸ್ನೇಹಿ ಚಿತ್ರಗಳ ಅಳವಡಿಕೆ
9. ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳು ಇರಲಿವೆ.

ಇದನ್ನೂ ಓದಿ | ಅಮೆರಿಕದ ಶಾಲೆಗಳಲ್ಲಿ ನಡೆದ ಭೀಕರ ಗುಂಡಿನ ದಾಳಿ ಇದೇ ಮೊದಲಲ್ಲ…

Exit mobile version