Site icon Vistara News

Moral policing | ಬಸ್‌ನಲ್ಲಿ ಹೋಗುತ್ತಿದ್ದ ಹಿಂದು-ಮುಸ್ಲಿಂ ವಕೀಲ ಜೋಡಿಗೆ ತಡೆ: ಕಾರ್ಯಕರ್ತರ ಬೆವರಿಳಿಸಿದ ಯುವತಿ

moral policing

ಮಂಗಳೂರು: ಮಂಗಳೂರಿನಲ್ಲಿ ಹಿಂದು ಮತ್ತು ಮುಸ್ಲಿಮ್‌ ಯುವಕ-ಯುವತಿ ಜತೆಯಾಗಿರುವುದನ್ನು ಕಂಡ ಕೂಡಲೇ ಮುಗಿ ಬೀಳುವ (Moral policing) ಪ್ರವೃತ್ತಿ ಹೆಚ್ಚಾಗುತ್ತಿದೆ. ಗುರುವಾರ ರಾತ್ರಿ ಬಸ್‌ನಲ್ಲಿ ಜತೆಯಾಗಿ ಪ್ರಯಾಣಿಸುತ್ತಿದ್ದ ಹಿಂದು-ಮುಸ್ಲಿಂ ಯುವಕ-ಯುವತಿಯನ್ನು ಹಿಂದು ಸಂಘಟನೆಗಳ ಕಾರ್ಯಕರ್ತರು ತಡೆಯಲು ಯತ್ನಿಸಿದ್ದಾರೆ. ಆದರೆ, ಯುವತಿ ಖಡಕ್ಕಾಗಿ ನಿಂತು ಆವರ ಬೆವರಿಳಿಸಿದ್ದಾಳೆ.

ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ಇಬ್ಬರು ಬೆಂಗಳೂರಿನಲ್ಲಿ ವಕೀಲರಾಗಿದ್ದು, ತಮ್ಮ ಮೇಲಿನ ನೈತಿಕ ಪೊಲೀಸ್‌ಗಿರಿಯನ್ನು ಪ್ರಶ್ನಿಸಿದ್ದಾರೆ. ಮುಸ್ಲಿಂ ಯುವಕ ಭಟ್ಕಳದದವನಾಗಿದ್ದು, ಅಲ್ಲಿಂದಲೇ ಬಸ್‌ನಲ್ಲಿ ಬಂದಿದ್ದಾನೆ. ಯುವತಿ ಮಂಗಳೂರಿನಲ್ಲಿ ಬಸ್‌ ಹತ್ತಿದ್ದಾಳೆ. ಅವರಿಬ್ಬರೂ ಒಂದೇ ಸ್ಲೀಪರ್‌ ಸೀಟ್‌ನಲ್ಲಿ ಇದ್ದಾರೆ ಎಂಬ ಮಾಹಿತಿ ಪಡೆದ ಬಜರಂಗ ದಳ ಕಾರ್ಯಕರ್ತರು ಬಸ್ಸನ್ನು ತಡೆಯಲು ಮುಂದಾದರು.

ಬಸ್‌ ಮಂಗಳೂರಿನಿಂದ ಹೊರಟ ಕೂಡಲೇ ವಿಷಯ ಬಜರಂಗದಳದವರಿಗೆ ತಲುಪಿದೆ. ಅವರು ಪಂಪ್‌ವೆಲ್‌ನಲ್ಲೇ ಬಸ್ಸನ್ನು ನಿಲ್ಲಿಸಲು ಮುಂದಾಗಿದ್ದರು. ಆದರೆ, ಅವರ ಪ್ರಯತ್ನ ಫಲಿಸಲಿಲ್ಲ. ಆಗ ಅವರು ಕೂಡಲೇ ಕಲ್ಲಡ್ಕದ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಕೂಡಲೇ ಅಲ್ಲಿನ ದಾಸನಕೋಡಿಯಲ್ಲಿ ಯುವಕರ ತಂಡ ಬಸ್ಸನ್ನು ತಡೆಯಲು ಸಿದ್ಧವಾಗಿ ನಿಂತಿತು.

ಕಲ್ಲಡ್ಕ ಸಮೀಪದ ದಾಸನಕೋಡಿಯಲ್ಲಿ ಬಜರಂಗ ದಳ ಕಾರ್ಯಕರ್ತರು ಬಸ್ಸನ್ನು ನಿಲ್ಲಿಸಿ ಯುವಕ-ಯುವತಿಯನ್ನು ಕೆಳಗಿಳಿಸಲು ಸೂಚಿಸಿದರು. ಆಗ ತಾನೇ ಮುಂದಾಗಿ ಬಂದ ಯುವತಿ ಬಜರಂಗ ದಳದವರ ನೈತಿಕ ಪೊಲೀಸ್‌ಗಿರಿಯನ್ನು ಪ್ರಶ್ನಿಸಿದ್ದಾಳೆ.

ʻʻನಾನೊಬ್ಬ ಲಾಯರ್‌, ಯಾವುದು ಸರಿ, ಯಾವುದು ತಪ್ಪು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ನೀವು ತಿಳಿದಿರುವ ಪ್ರಕಾರ ನಾವು ಪ್ಲ್ಯಾನ್ಡ್‌ ಆಗಿ ಒಂದೇ ಬಸ್ಸಿನಲ್ಲಾಗಲೀ, ಒಂದೇ ಸೀಟಿನಲ್ಲಾಗಲೀ ಹೋಗುತ್ತಿರುವುದಲ್ಲ. ನಾನು ಮಂಗಳೂರಿನಿಂದ ಟಿಕೆಟ್‌ ಬುಕ್‌ ಮಾಡುವಾಗ ಇದೊಂದೇ ಸೀಟು ಬಾಕಿ ಇತ್ತು. ನಾನು ಗಟ್ಟಿಗಳಿದ್ದೇನೆ. ಬೇರೆ ಸೀಟು ಇಲ್ಲದೆ ಇರುವುದರಿಂದ ಇದರಲ್ಲೇ ಪ್ರಯಾಣಿಸುತ್ತೇನೆ ಎಂಬ ಧೈರ್ಯ ತೆಗೆದುಕೊಂಡಿದ್ದೇನೆ.. ಇದರಿಂದ ನಿಮಗೇನು ಸಮಸ್ಯೆʼʼ ಎಂದು ಕಾರ್ಯಕರ್ತರ ಬೆವರಿಸಿಳಿಸಿದ್ದಾಳೆ.

ಅಂತಿಮವಾಗಿ ಕಾರ್ಯಕರ್ತರು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡರು. ಆದರೆ, ಆಗಲೂ ಯುವತಿ ತನ್ನ ಸ್ಪಷ್ಟ ಮಾತುಗಳಿಂದ ಪೊಲೀಸರಿಗೆ ವಿವರಣೆ ನೀಡಿದರು. ಹೀಗಾಗಿ ಅವರನ್ನು ತಡೆಯಲಾಗದೆ ಬಸ್ಸನ್ನು ಬಿಟ್ಟು ಕಳುಹಿಸಲಾಯಿತು.

ಇದನ್ನೂ ಓದಿ | Moral Policing | ಕೂಲಿ ಕಾರ್ಮಿಕನ ಮೇಲೆ ನೈತಿಕ ಪೊಲೀಸ್‌ ಗಿರಿ; ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

Exit mobile version