ಉಡುಪಿ: ಶೃಂಗೇರಿ ದೇವಸ್ಥಾನದಿಂದ (Shringeri Temple) ಮರಳುತ್ತಿದ್ದ ಕಾರೊಂದನ್ನು ಅಡ್ಡಗಟ್ಟಿದ ಐವರ ತಂಡ ಅದರಲ್ಲಿದ್ದವರ ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ಮೆರೆದಿದೆ. ಕಾರಿನಲ್ಲಿ ಹುಡುಗ ಮತ್ತು ಹುಡುಗಿಯರಿದ್ದು, ಇವರಲ್ಲಿ ಹಿಂದುಗಳು ಮತ್ತು ಮುಸ್ಲಿಮರು (Hindu and Muslims) ಇರಬಹುದು ಎಂಬ ಸಂಶಯದಲ್ಲಿ ಬೆನ್ನಟ್ಟಿ ದಾಳಿ ಮಾಡಿದೆ. ಇದೀಗ ಹೀಗೆ ದಾಳಿ ಮಾಡಿದ ಐವರು ಯುವಕರು ಜೈಲುಪಾಲಾಗಿದ್ದಾರೆ.
ಅವರೆಲ್ಲ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವೈದ್ಯರು (Team of Doctors). ಅವರು ಕಾರು ಮಾಡಿಕೊಂಡು ಶೃಂಗೇರಿ ದೇವಸ್ಥಾನಕ್ಕೆ ಹೋಗಿದ್ದರು. ಅದರಲ್ಲಿ ಮಹಿಳಾ ವೈದ್ಯರೂ ಇದ್ದರು. ಪುರುಷ ವೈದ್ಯರೂ ಇದ್ದರು. ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹಿಂದೆ ಬರುತ್ತಿದ್ದಾಗ ಅವರ ಕಾರಿನ ಮೇಲೆ ಸ್ವಯಂಘೋಷಿತ ಹಿಂದೂ ಸಂರಕ್ಷಕರೆಂದು ಹೇಳಿಕೊಂಡ ಯುವಕರ ಕಣ್ಣುಬಿದ್ದಿದೆ.
ಶೃಂಗೇರಿಯಿಂದ ಮಂಗಳೂರಿಗೆ ಮರಳುತ್ತಿದ್ದಾಗ ಎಸ್‌ಕೆ ಬಾರ್ಡರ್ ಬಳಿ ಯುವಕರ ಕಣ್ಣು ಕಾರಿನ ಮೇಲೆ ಬಿದ್ದಿದೆ. ಕೂಡಲೇ ಅವರು ಇನ್ನೊಂದು ಕಾರಿನಲ್ಲಿ ಇವರ ಕಾರನ್ನು ಬೆನ್ನಟ್ಟಿದ್ದಾರೆ. ಕಾರು ಕಾರ್ಕಳದ ಕುಂಟಲ್ಪಾಡಿ ತಲುಪುತ್ತಿದ್ದಂತೆಯೇ ಯುವಕರ ಕಾರು ವೈದ್ಯರ ಕಾರನ್ನು ಅಡ್ಡಗಟ್ಟಿದೆ.
ನೀವೆಲ್ಲ ಬೇರೆ ಬೇರೆ ಧರ್ಮಕ್ಕೆ ಸೇರಿದವರು, ಎಲ್ಲಿ ಹೋಗಿದ್ದೀರಿ? ಹಿಂದು ಹೆಣ್ಮಕ್ಕಳನ್ನು ಹಾಳು ಮಾಡುತ್ತಿದ್ದೀರಿ ಎಂದೆಲ್ಲ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಮುಂದಾದರು. ಈ ನಡುವೆ ಕಾರಿನಲ್ಲಿದ್ದ ಮಹಿಳೆಯೊಬ್ಬರು ತಕ್ಷಣವೇ ಪೊಲೀಸ್ ಸಂಪರ್ಕ ಸಂಖ್ಯೆ 112ಗೆ ಕರೆ ಮಾಡಿದರು. ಈ ರೀತಿಯಾಗಿ ತಮ್ಮ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದ್ದಾರೆ ಎಂದು ವಿಷಯ ತಿಳಿಸಿದರು.
ಸ್ವಲ್ಪವೇ ಹೊತ್ತಿನಲ್ಲಿ ಪೊಲೀಸರು ಅಲ್ಲಿಗೆ ಆಗಮಿಸಿದರು. ಕಾರಿನಲ್ಲಿ ಬೆನ್ನಟ್ಟಿ ನೈತಿಕ ಪೊಲೀಸ್ ಗಿರಿ ಮೆರೆದ ಘಟನೆಯನ್ನು ಪರಿಶೀಲಿಸಿದ ಪೊಲೀಸರು ದುಷ್ಕೃತ್ಯ ನಡೆಸಿದ ಸಂತೋಷ್ ನಂದಳಿಕೆ, ಕಾರ್ತಿಕ ಪೂಜಾರಿ, ಸುನೀಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಎಂಬವರನ್ನು ವಶಕ್ಕೆ ಪಡೆದರು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ್ ಕಲಗುಜ್ಜೆ, ಸರ್ಕಲ್ ಇನ್‌ಸ್ಪೆಕ್ಟರ್ ನಾಗರಾಜ್ ಅವರು ಕೂಡಾ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು. ವೈದ್ಯರ ತಂಡವನ್ನು ಈ ರೀತಿಯಾಗಿ ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ಮೆರೆದ ಯುವಕರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ಅವರು ಕೂಡಾ ಪ್ರಕರಣದ ವಿಚಾರಣೆಯಲ್ಲಿ ಭಾಗಿದ್ದಾರೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ನೈತಿಕ ಪೊಲೀಸ್‌ಗಿರಿ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ
ಹಿಂದು-ಮುಸ್ಲಿಮ್ ಹುಡುಗ ಹುಡುಗಿ ಜತೆಗಿದ್ದಾಗ ಹಲ್ಲೆ ನಡೆಸುವುದು, ಬಸ್ಸಿನಲ್ಲಿ ಪ್ರಯಾಣಿಸುವಾಗ ಬೆನ್ನಟ್ಟುವುದು, ಮುಸ್ಲಿಂ ಇರಬಹುದು ಎಂಬ ಸಂಶಯದಲ್ಲಿ ದಾಳಿ ಮಾಡುವುದು.. ಹೀಗೆ ಯಾವುದೇ ರೀತಿಯ ನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ಹಾಗೆ ದಾಳಿ ಮಾಡುವವರ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದೆ. ಯಾರಾದರೂ ಪದೇಪದೆ ಇಂಥ ದಾಳಿಯ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರೆ ಅವರ ವಿರುದ್ಧ ಗೂಂಡಾ ಕಾಯಿದೆ ಜಾರಿ ಮಾಡುವಂತೆಯೂ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.