ಮಂಗಳೂರು: ಮಂಗಳೂರಿನಲ್ಲಿ ಸ್ಕೂಟರ್‌ನಲ್ಲಿ ಸುತ್ತಾಡುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಬೆನ್ನಟ್ಟಿ ಹೋದ ಬಜರಂಗದಳ (Bhajarang Dal) ಕಾರ್ಯಕರ್ತರು, ಅವರನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ಘಟನೆ ನಡೆದಿದೆ. ಮಂಗಳೂರಿನ ಮಂಕಿ ಸ್ಟಾಂಡ್ ನಿವಾಸಿ, ಅನ್ಯಕೋಮಿನ ಯುವಕನೊಂದಿಗೆ ಚಿಕ್ಕಮಗಳೂರಿನ ಯುವತಿ ಸುತ್ತಾಡುತ್ತಿದ್ದುದನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಗಮನಿಸಿ ಬೆನ್ನಟ್ಟಿದ್ದರು.
ಮಂಕಿ ಸ್ಟಾಂಡ್‌ನ ಮಳಿಗೆಯೊಂದರಲ್ಲಿ ಈ ಜೋಡಿ ಉದ್ಯೋಗದಲ್ಲಿದೆ. ಸ್ಕೂಟರ್‌ನಲ್ಲಿ ಜೋಡಿಯ ಸುತ್ತಾಟ ಗಮನಿಸಿ ಬೈಕ್‌ಗಳಲ್ಲಿ ಬೆನ್ನಟ್ಟಿದ ಬಜರಂಗದಳ ಕಾರ್ಯಕರ್ತರು, ಮಂಕಿಸ್ಟಾಂಡ್ ಬಳಿ ಸ್ಕೂಟರ್ ಅಡ್ಡ ಹಾಕಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ಇನ್ನೊಂದು ಕೋಮಿನ ಯುವಕರ ತಂಡವೂ ಸ್ಥಳದಲ್ಲಿ ಜಮಾಯಿಸಿದೆ. ಎರಡೂ ಕೋಮುಗಳ ತಂಡಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪಾಂಡೇಶ್ವರ ಠಾಣೆಯ ಪೊಲೀಸರು ಮಧ್ಯ ಪ್ರವೇಶಿಸಿ, ಗುಂಪನ್ನು ಚದುರಿಸಿದರು. ಜೋಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಗುಂಪಿನ ಇಬ್ಬರು ಆರೋಪಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಒಂದು ತಿಂಗಳ ಹಿಂದೆ ಶೃಂಗೇರಿ ದೇವಸ್ಥಾನದಿಂದ (Shringeri Temple) ಮರಳುತ್ತಿದ್ದ, ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವೈದ್ಯರಾಗಿದ್ದವರ ಕಾರೊಂದನ್ನು ಅಡ್ಡಗಟ್ಟಿದ ಐವರ ತಂಡ ಅದರಲ್ಲಿದ್ದವರ ಮೇಲೆ ಹಲ್ಲೆ ಮಾಡಿತ್ತು. ಇನ್ನೊಂದು ಪ್ರಕರಣದಲ್ಲಿ ವೈದ್ಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಲಾಗಿತ್ತು.
ಇದನ್ನೂ ಓದಿ: ಅನ್ಯಕೋಮಿನ ಯುವತಿ ಜತೆ ಇದ್ದ ಯುವಕನಿಗೆ ಮಾರಣಾಂತಿಕ ಹಲ್ಲೆ! ಪೊಲೀಸರೆದುರೇ ನೈತಿಕ ಪೊಲೀಸ್‌ಗಿರಿ