ಪುತ್ತೂರು (ದಕ್ಷಿಣ ಕನ್ನಡ): ಬಜರಂಗದಳ ನಿಷೇಧದ ಕುರಿತು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಲಾಗಿದೆ. ಯುವತಿ ಜತೆ ಮಾತನಾಡಿದ್ದಕ್ಕೆ ಹಿಂದು ಸಂಘಟನೆ ಕಾರ್ಯಕರ್ತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಮೊಹಮ್ಮದ್ ಪಾರಿಶ್ (18) ಎಂಬ ಯುವಕನಿಗೆ ಹಿಂದು ಕಾರ್ಯಕರ್ತರು ಥಳಿಸಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಫಾರಿಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದೂ ಯುವತಿ ಜೊತೆ ಮಾತನಾಡಿದ್ದಕ್ಕಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣದ ಕುರಿತು ವಿದ್ಯಾರ್ಥಿಯಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಯು ಪುತ್ತೂರಿನ ಮರೀಲ್ ಕಾಡುಮನೆ ನಿವಾಸಿಯಾಗಿದ್ದಾನೆ.
ಬಜರಂಗದಳದ ಮೇಲೆ ಯುವಕ ಆರೋಪ
ಘಟನೆ ಕುರಿತು ಪಾರಿಶ್ ಹೇಳಿದ್ದೇನು?
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊಹಮ್ಮದ್ ಪಾರಿಶ್, ಬಜರಂಗದಳದ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. “ನನ್ನ ಕ್ಲಾಸ್‌ಮೇಟ್ ಕರೆ ಮಾಡಿದ್ದರು. ಇದಾದ ಬಳಿಕ ನಾವು ಭೇಟಿಯಾಗಿದ್ದೆವು. ನಾನು ಮತ್ತೆ ಕ್ಲಾಸ್‌ಮೇಟ್ ಇಬ್ಬರೂ ಜ್ಯೂಸ್ ಕುಡಿದೆವು. ಇದಾದ ಬಳಿಕ 15 ಜನ ನನ್ನನ್ನು ಕರೆದರು. ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಹೇಳಿದೆ. ಆದರೂ, ಅವರು ನನ್ನ ಮೇಲೆ ವೈರ್, ಲಾಠಿ, ಕಡಗದಲ್ಲಿ ಹೊಡೆದರು. ಕಬ್ಬಿಣ ಬಿಸಿ ಮಾಡಿ ಕುತ್ತಿಗೆ ಹತ್ತಿರ ಇಟ್ಟರು. ದೂರು ಕೊಟ್ಟರೆ ಸಾಯಿಸುತ್ತೇವೆ ಎಂಬುದಾಗಿ 50ಕ್ಕೂ ಅಧಿಕ ಜನ ಬೆದರಿಕೆ ಹಾಕಿದರು” ಎಂದು ಪಾರಿಶ್ ಹೇಳಿದ್ದಾರೆ.