Site icon Vistara News

Moral Policing : ಬುರ್ಕಾ ಇಲ್ಲದೆ ಬಸ್‌ ಹತ್ತುವಂತಿಲ್ಲ; ಮುಸ್ಲಿಂ ಬಾಲಕಿಯರಿಗೆ KSRTC ಚಾಲಕನ ದಾರ್ಷ್ಟ್ಯ

burqa controversy in Kalaburagi

ಬೆಂಗಳೂರು: ಧಾರ್ಮಿಕ ವಿವಾದಗಳು ಮುಗಿಯುವಂತೆ ಕಾಣುತ್ತಿಲ್ಲ. ಹಿಜಾಬ್‌ ವಿವಾದ (Hijab row) ತಣ್ಣಗಾದ ಬೆನ್ನಿಗೇ ಉಡುಪಿಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದು ವಿದ್ಯಾರ್ಥಿನಿಯ ಟಾಯ್ಲೆಟ್‌ (Udupi Toilet Case) ಬಳಕೆಯ ದೃಶ್ಯ ಸೆರೆ ಹಿಡಿದು ವೈರಲ್‌ ಮಾಡಿದ್ದಾರೆ ಎಂಬ ಆರೋಪ ಜೋರಾಗಿ ಕೇಳಿಬಂದಿದೆ. ಈ ನಡುವೆ ಕಲಬುರಗಿಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ (KSRTC Driver Asks muslim girls to wear Burkha) ಮುಸ್ಲಿಂ ವಿದ್ಯಾರ್ಥಿನಿಯರು (Muslim Girls) ಬಸ್‌ ಹತ್ತಬೇಕಾದರೆ ಬುರ್ಕಾ ಧರಿಸಲೇಬೇಕು (Wearing burkha is must) ಎಂದು ತಾಕೀತು ಮಾಡುವ ಮೂಲಕ ನೈತಿಕ ಪೊಲೀಸ್‌ಗಿರಿ (Moral Policing) ಪ್ರದರ್ಶಿಸಿದ್ದಾನೆ. ಕಮಲಾಪುರ ಬಸ್‌ ನಿಲ್ದಾಣದಲ್ಲಿ (Kamalapura Bus stand) ನಡೆದ ಈ ಘಟನೆ ಇದೀಗ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಆಪಾದಿತ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Minister Ramalinga Reddy) ಅವರು ತನಿಖೆಗೆ ಆದೇಶ ನೀಡಿದ್ದಾರೆ.

ಈ ಘಟನೆ ನಡೆದಿರುವುದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕು ಬಸ್ ನಿಲ್ದಾಣದಲ್ಲಿ. ಗುರುವಾರ (ಜುಲೈ 27) ಸಂಜೆ 14ರಿಂದ 18 ವರ್ಷದ ವಿದ್ಯಾರ್ಥಿನಿಯರು ಹೈಸ್ಕೂಲ್‌, ಕಾಲೇಜು ಮುಗಿಸಿ ಮನೆಗೆ ತೆರಳಲು ಕಮಲಾಪುರ ನಿಲ್ದಾಣಕ್ಕೆ ಬಂದಿದ್ದರು. ಇನ್ನೇನು ಬಸ್‌ ಹತ್ತಬೇಕು ಎನ್ನುವಷ್ಟರಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಬುರ್ಕಾ ಧರಿಸದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಸ್ಸಿಗೆ ಹತ್ತಿಸಿಕೊಳ್ಳುವುದಿಲ್ಲ ಎಂದು ತಾಕೀತು ಮಾಡಿದ್ದಾನೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನಾಕ್ರೋಶವನ್ನು ಸೃಷ್ಟಿಸಿದೆ.

ಘಟನೆಯ ವಿವರ ಹೀಗೆ

ಹೈಸ್ಕೂಲ್‌, ಕಾಲೇಜು ಮುಗಿಸಿದ ಕೆಲವು ವಿದ್ಯಾರ್ಥಿನಿಯರು ತಮ್ಮ ಊರಾದ ಓಕಲಿ ಗ್ರಾಮಕ್ಕೆ ಹೋಗಲು ಬಸ್‌ ಹತ್ತಲು ಕಾಯುತ್ತಿದ್ದರು. ಇವರಲ್ಲಿ ಕೆಲವರು ಬುರ್ಕಾ ಧರಿಸಿದ್ದರು. ಕೆಲವರು ಧರಿಸಿರಲಿಲ್ಲ. ಆಗ ಚಾಲಕ ಅವರನ್ನು ತಡೆಯುತ್ತಾನೆ. ಒಬ್ಬ ಹುಡುಗಿಯ ಬಳಿ, ನೀನು ಮುಸ್ಲಿಂ ಆಗಿದ್ದರೆ ಬುರ್ಕಾವನ್ನು ಧರಿಸಬೇಕು. ಬುರ್ಕಾ ಧರಿಸಿದರೆ ಮಾತ್ರ ಬಸ್‌ ಹತ್ತಲು ಅವಕಾಶ ನೀಡುತ್ತೇನೆ ಎಂದು ಹೇಳುತ್ತಾನೆ. ಬಾಲಕಿ ಬಳಿ ನಿನ್ನ ಹೆಸರೇನೆಂದು ಕೇಳುತ್ತಾನೆ.

ಆದರೆ, ಬಾಲಕಿ ತನ್ನ ಹೆಸರು ಹೇಳುವುದಿಲ್ಲ. ನಾವು ಮನೆಗೆ ಹೋಗಬೇಕು ಬಿಡಿ ಎಂದರೂ ಬಸ್​ ಚಾಲಕ ಒಪ್ಪುವುದಿಲ್ಲ. ಚಾಲಕನ ವರ್ತನೆಯಿಂದ ಬೇಸರಗೊಂಡ ವಿದ್ಯಾರ್ಥಿಗಳು ಓಕಲಿ ಗ್ರಾಮಕ್ಕೆ ತೆರಳುವ ಬೇರೆ ಬಸ್‌ ಹತ್ತಲು ನಿರ್ಧರಿಸಿದ್ದಾರೆ.

ಈ ನಡುವೆ ವಿದ್ಯಾರ್ಥಿನಿಯರು ಅಲ್ಲೇ ಇದ್ದ ತಮ್ಮ ಶಿಕ್ಷಕರೊಬ್ಬರಿಗೆ ವಿಷಯ ತಿಳಿಸುತ್ತಾರೆ. ಆಗ ಅವರು ಬಂದು ಚಾಲಕನನ್ನು ವಿಚಾರಿಸುತ್ತಾರೆ. ಆದರೆ, ಚಾಲಕ ಮಾತ್ರ ಜೋರಾಗಿ ಬೊಬ್ಬೆ ಹೊಡೆದು ಎದೆ ಎತ್ತರಿಸಿ ಅವರಿಗೇ ಸವಾಲು ಹಾಕುತ್ತಾನೆ. ಆಗ ಮಕ್ಕಳೇ ಬೇಡ ಬಿಡಿ ಸರ್‌ ಎಂದು ಹೇಳುತ್ತಾರೆ.

ಈ ಘಟನೆಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಧಾರ್ಮಿಕ ಉಡುಪಿನ ಆಧಾರದ ಮೇಲೆ ತಾರತಮ್ಯ ಮಾಡುವ, ಸಾರ್ವಜನಿಕವಾಗಿ ಇನ್ನೊಬ್ಬರ ಮಕ್ಕಳ ಮೇಲೆ ತಮ್ಮ ಧಾರ್ಮಿಕ ನಂಬಿಕೆಯನ್ನು, ಕರ್ಮಠವಾದವನ್ನು ಹೇರಲು ಮುಂದಾದ ಚಾಲಕನ ಮೇಲೆ ಆಕ್ರೋಶ ವ್ಯಕ್ತವಾಗಿದೆ.

ಪ್ರಾಥಮಿಕ ತನಿಖೆ ನಡೆಸಿದ ಬೀದರ್‌ ಜಿಲ್ಲಾ ಕೆಎಸ್‌ಆರ್‌ಟಿಸಿ ಅಧಿಕಾರಿ

ಈ ರೀತಿ ಸಾರ್ವಜನಿಕವಾಗಿ ಧಾರ್ಮಿಕ ಅಸಹನೆ ಪ್ರದರ್ಶಿಸಿದ ಚಾಲಕನನ್ನು ಬಸವಕಲ್ಯಾಣ ಬಸ್ ಡಿಪೋದ ಮೆಹಬೂಬ್ ಎಂದು ಗುರುತಿಸಲಾಗಿದೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಜಿಲ್ಲಾ ಕೆಕೆಎಸ್‌ಆರ್‌ಟಿಸಿ ವಿಭಾಗೀಯ ಭದ್ರತಾ ನಿರೀಕ್ಷಕ (ಡಿಎಸ್‌ಐ) ಎಚ್‌ಕೆ ಮಲ್ಲಿಕಾರ್ಜುನ ಅವರು, ವಿಷಯ ತಿಳಿದ ಕೂಡಲೇ ನಾನು ಕಮಲಾಪುರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಕಂಡಕ್ಟರ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮಾಹಿತಿ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇನೆ. ಮೇಲ್ನೋಟಕ್ಕೆ ಚಾಲಕನದ್ದೇ ತಪ್ಪು. ನಾನು ಕೆಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ವರದಿ ಸಲ್ಲಿಸುತ್ತೇನೆ ಮತ್ತು ಅವರು ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ತನಿಖೆ ಮಾಡಿ ಚಾಲಕನ ವಿರುದ್ಧ ಕ್ರಮ: ರಾಮಲಿಂಗಾ ರೆಡ್ಡಿ

ಈ ವಿದ್ಯಮಾನದ ಬಗ್ಗೆ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕವಾಗಿ ಈ ರೀತಿ ಧಾರ್ಮಿಕ ಅಸಹನೆಯನ್ನು ಪ್ರದರ್ಶಿಸಿದ ಆರೋಪಿ ಚಾಲಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ತೇಜಸ್ವಿನಿ ಗೌಡ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಘಟನೆಯ ಬಗ್ಗೆ ತನಿಖೆ ನಡೆಸಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದರು. ಯಾವ ಬಟ್ಟೆ ಧರಿಸಬೇಕು ಎನ್ನುವುದು ವೈಯಕ್ತಿಕ ತೀರ್ಮಾನ, ಚಾಲಕನಿಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

ಇದನ್ನೂ ಓದಿ : Udupi Toilet Case : ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮೆರಾ ಇರಲಿಲ್ಲ, ಹರಿದಾಡುತ್ತಿರುವ ವಿಡಿಯೊ ಫೇಕ್‌ ; ಖುಷ್ಬೂ Report

Exit mobile version