ಮಂಗಳೂರು: ಕೂಲಿ ಕಾರ್ಮಿಕನ ಮೇಲೆ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ (Moral Policing) ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಕೂಲಿ ಕಾರ್ಮಿಕ ಇಸಾಕ್ (45) ಎಂಬಾತನ ಮೇಲೆ ಬುಧವಾರ ಹಲ್ಲೆ ಮಾಡಲಾಗಿತ್ತು. ಗಾಯಗೊಂಡಿದ್ದ ವ್ಯಕ್ತಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಕೂಲಿ ಕಾರ್ಮಿಕನಿಗೆ ಹಲ್ಲೆ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಿ.ಸಿ.ರೋಡ್ ಮಾರ್ಗವಾಗಿ ಮೂಡಬಿದ್ರೆಗೆ ಬಸ್‌ನಲ್ಲಿ ಬಂಟ್ವಾಳದ ಮೂಲರಪಟ್ನ ನಿವಾಸಿ ಇಸಾಕ್ ತೆರಳುತ್ತಿದ್ದಾಗ, ಮಹಿಳೆಯರಿಗೆ ಮೈ ಕೈ ತಾಗಿದ ವಿಚಾರದಲ್ಲಿ ತಗಾದೆ ತೆಗೆದು ಹಲ್ಲೆ ಮಾಡಲಾಗಿತ್ತು. ರಾಯಿ ಬಳಿ ಕಂಡಕ್ಟರ್ ಬಸ್‌ನಿಂದ ಇಳಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಾಗ ಸ್ಥಳಕ್ಕೆ ಯುವಕರ ಗುಂಪೊಂದು ಆಗಮಿಸಿ ಇಸಾಕ್ ಮೇಲೆ ಹಲ್ಲೆ ಮಾಡಿತ್ತು. ಮೈ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದು, ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹೊಡೆದಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Property fraud | ಹೆತ್ತವಳಿಗೆ ವಂಚನೆ ಮಾಡಿದ ಪಾಪಿ ಮಗ; ಕೋರ್ಟ್ ನೋಟಿಸ್‌ಗೆ ಮಂಚದಲ್ಲೆ ಹೊತ್ತು ತಂದ ಮಕ್ಕಳು
ನೈತಿಕ ಪೊಲೀಸ್ ಗಿರಿ ಬಗ್ಗೆ ಹಲ್ಲೆಗೊಳಗಾದ ಕೂಲಿ ಕಾರ್ಮಿಕ ಇಸಾಕ್ ಪ್ರತಿಕ್ರಿಯಿಸಿ, ಬುಧವಾರ ಬೆಳಗ್ಗೆ ಬಿ.ಸಿ.ರೋಡ್‌ನಿಂದ ಮೂಡಬಿದ್ರೆಗೆ ಬಸ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದೆ. ಕುಳಿತಿದ್ದ ನನ್ನ ಕೈಗೆ ಒಬ್ಬ ವಿದ್ಯಾರ್ಥಿನಿ ಬ್ಯಾಗ್ ಕೊಟ್ಟಿದ್ದಳು. ನಂತರ ರಾಯಿ ಬಳಿ ಇಳಿಯುವಾಗ ಬ್ಯಾಗ್ ತೆಗೆದುಕೊಂಡಳು. ಈ ವೇಳೆ ಕಂಡಕ್ಟರ್ ಮಹಿಳೆಯರ ಮೈ ಕೈ ಮುಟ್ಟುತ್ತೀಯಾ ಎಂದು ಗಲಾಟೆ ಮಾಡಿದ. ನಂತರ ರಾಯಿ ಸಮೀಪದ ಕುದ್ಕೋಳಿಯಲ್ಲಿ ಮೊದಲೇ ಕೆಲ ಯುವಕರು ಬಂದು ನಿಂತಿದ್ದರು. ಅಲ್ಲಿಂದ ನನ್ನನ್ನು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿ ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆ ನಂತರ ಪೊಲೀಸರು ನನ್ನನ್ನು ಜೀಪ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಪಿ ಚೆಕ್ ಮಾಡಿಸಿ, ಯಾವುದೇ ಪ್ರಕರಣ ದಾಖಲಿಸದೇ ಮನೆಗೆ ಕಳುಹಿಸಿದರು. ಆದರೆ, ಇವತ್ತು ಮತ್ತೆ ಫೋನ್ ಮಾಡಿ ದೂರು ಪಡೆದಿದ್ದಾರೆ. ನಾನು ನಿತ್ಯ ಅದೇ ಬಸ್‌ನಲ್ಲಿ ಹೋಗುತ್ತಿದ್ದೆ. ಕಂಡಕ್ಟರ್ ಪರಿಚಯವಿದೆ, ಆದರೆ, ಹಲ್ಲೆ ಮಾಡಿದ ಯುವಕರ ಬಗ್ಗೆ ಗೊತ್ತಿಲ್ಲ, ನೋಡಿದರೆ ಗುರುತು ಸಿಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Yellapur News | ವಿಷವಿಟ್ಟು 46 ಟರ್ಕಿ ಕೋಳಿಗಳನ್ನು ಸಾಯಿಸಿದ ದುಷ್ಕರ್ಮಿಗಳು, ಬಡ ಸಿದ್ದಿ ಮಹಿಳೆ ಕಂಗಾಲು