ಬೆಂಗಳೂರು: ಹಿಂದುಗಳಾಗಲಿ, ಮುಸ್ಲಿಮರಾಗಲಿ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು (Will not allow anybody to take law into their hands) ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಘೋಷಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಬೆನ್ನು ಬೆನ್ನಿಗೆ ನಡೆದ ನೈತಿಕ ಪೊಲೀಸ್ ಗಿರಿ (Moral Policing), ಗ್ಯಾಂಗ್ ರೇಪ್, ಗುಂಪು ಗಲಭೆಗಳಿಗೆ ಸಂಬಂಧಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ವಾಹಿನಿಯೊಂದಕ್ಕೆ ಇಬ್ಬರೂ ಜತೆಯಾಗಿ ನೀಡಿದ ಸಂದರ್ಶನದಲ್ಲಿ ಅವರು ಇದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ನಾವು ತುಂಬ ಕಟ್ಟು ನಿಟ್ಟಾಗಿದ್ದೇವೆ. ಹಿಂದುಗಳಾಗಲೀ ಮುಸ್ಲಿಮರಾಗಲೀ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ ಅವರಿಬ್ಬರು, ಯಾ ಕಾರಣಕ್ಕೂ ಇಂಥ ಘಟನೆಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ವಾರದ ಅವಧಿಯಲ್ಲಿ ರಾಜ್ಯದಲ್ಲಿ ಮೂರು ನೈತಿಕ ಪೊಲೀಸ್‌ಗಿರಿ ಪ್ರಕರಣಗಳು ನಡೆದಿವೆ.
1. ಜನವರಿ 6ರಂದು ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದ ಅಕ್ಕ-ತಮ್ಮನನ್ನು ಪ್ರೇಮಿಗಳೆಂದು ಭ್ರಮಿಸಿ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದರು. ಯುವತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರೆ ಯುವಕ ತಿಲಕ ಇಟ್ಟಿದ್ದ. ಮುಖಕ್ಕೆ ಬಟ್ಟೆ ಕಟ್ಟಿದ ಯುವತಿ ಮುಸ್ಲಿಂ ಇರಬಹುದೆಂದು ತಿಳಿದ ಮುಸ್ಲಿಂ ಯುವಕರ ಗುಂಪು, ಮುಸ್ಲಿಂ ಯುವತಿ ಜತೆ ಹಿಂದೂ ಹುಡುಗ ತಿರುಗಾಡುವುದನ್ನು ಪ್ರಶ್ನಿಸಿ ಹಲ್ಲೆ ಮಾಡಿದೆ. 17 ಮಂದಿ ಯುವಕರ ತಂಡ ಈ ಕೃತ್ಯವನ್ನು ನಡೆಸಿತ್ತು.
2. ಜನವರಿ 8ರಂದು ಹಾವೇರಿಯ ಲಾಡ್ಜ್ ಒಂದರಲ್ಲಿ ಶಿರಸಿಯ ಹಿಂದು ಹುಡುಗ ಮತ್ತು ಮುಸ್ಲಿಂ ಮಹಿಳೆ ರೂಂ ಪಡೆದಿದ್ದರು. ಅಲ್ಲಿಗೆ ಹೋದ ಮುಸ್ಲಿಂ ಯುವಕರ ತಂಡವೊಂದು ಅವರಿಬ್ಬರಿಗೆ ಥಳಿಸಿದ್ದಲ್ಲದೆ, ಯುವತಿಯನ್ನು ಹೊಳೆ ಬದಿ ಮತ್ತು ಕಾಡಿಗೆ ಎಳೆದೊಯ್ದು ಏಳು ಮಂದಿ ಗ್ಯಾಂಗ್ ರೇಪ್ ಮಾಡಿದ್ದರು.
3. ಜನವರಿ 10ರಂದು ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದಲ್ಲಿ ಅನ್ಯಕೋಮಿನ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಗೆ ಡೈರಿ ಮಿಲ್ಕ್ ಚಾಕೊಲೇಟ್ ಕೊಟ್ಟಿದ್ದನ್ನೇ ಗಂಭೀರವಾಗಿ ಪರಿಗಣಿಸಿ ಯುವಕರ ತಂಡವೊಂದು ಕಾರಿನಲ್ಲಿ ಬಂದು ಆತನ ಮೇಲೆ ದಾಳಿ ಮಾಡಿತ್ತು.
ಹೀಗೆ ಮೇಲಿಂದ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ಮಲಗಿ ನಿದ್ರಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಚಾರ ನಡೆಸಿತ್ತು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳ ಪಟ್ಟಿಯನ್ನು ಪ್ರಕಟಿಸಿ ಒಂದು ಮಲಗಿ ನಿದ್ರಿಸುವ ಸರ್ಕಾರ ಇಷ್ಟೊಂದು ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಾ ಬಿಜೆಪಿಯ ಈ ಅಪಪ್ರಚಾರವನ್ನು ಖಂಡಿಸಿದ್ದು, ʻʻನಾವು ಯಾವ ಕಾರಣಕ್ಕೂ ಯಾವುದೇ ನೈತಿಕ ಪೊಲೀಸ್‌ಗಿರಿಯನ್ನು ಬೆಂಬಲಿಸುವುದಿಲ್ಲ. ನಾವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬದ್ಧರಾಗಿದ್ದೇವೆʼʼ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ವೋಟಿಗಾಗಿ ಅಲ್ಲ ಜನರ ಕಲ್ಯಾಣಕ್ಕಾಗಿ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಲಾಭ ತಂದು ಕೊಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಮತ್ತು ಡಿಸಿಎಂ, ಕಾಂಗ್ರೆಸ್ ಈ ಯೋಜನೆಗಳನ್ನು ಮತಕ್ಕಾಗಿ ಇಲ್ಲವೇ ಜನರನ್ನು ಓಲೈಸಲು ಮಾಡಿದ್ದಲ್ಲ., ನಾವು ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅವಲಂಬಿಸಿಲ್ಲ. ಈ ಯೋಜನೆಗಳು ಜನರಿಗೆ ನಾವು ಕೊಟ್ಟಿರುವ ಕೊಡುಗೆಗಳು. ನಾವು ರಾಜ್ಯದ ಜನ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಬದ್ಧರಾಗಿದ್ದು, ಅದರ ಭಾಗವಾಗಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ ಎಂದರು.
ಇದೇ ವೇಳೆ, ನಿರುದ್ಯೋಗಿ ಯುವಕರು ಯುವನಿಧಿ ಯೋಜನೆಯ ಲಾಭ ಪಡೆಯುವಂತೆ ವಿನಂತಿಸಿದ ಸಿದ್ದರಾಮಯ್ಯ ಅವರು ದುರುಪಯೋಗಪಡಿಸಿಕೊಳ್ಳದಂತೆಯೂ ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳನ್ನು ಮುಷ್ಟಿಗೆ ಹೋಲಿಸಿದ ಡಿ.ಕೆ. ಶಿವಕುಮಾರ್
- ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಕೈಯ ಐದು ಬೆರಳುಗಳಿಗೆ ಹೋಲಿಸಿದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಐದು ಗ್ಯಾರಂಟಿ ಯೋಜನೆಗಳು ಸೇರಿ ಒಂದು ಮುಷ್ಟಿಯಾಗುತ್ತದೆ. ಅದುವೇ ನಮ್ಮನ್ನು ಗಟ್ಟಿಗೊಳಿಸುತ್ತದೆ. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಹೇಳುತ್ತಿದ್ದೇನೆ, ನಾವು ಚುನಾವಣೆಗೆ ಮೊದಲು ನೀಡಿದ ಪ್ರತಿಯೊಂದು ಭರವಸೆಯನ್ನೂ ಈಡೇರಿಸಿದ್ದೇವೆ. ಇದೇ ಸಂದರ್ಭದಲ್ಲಿ ಯುವಜನರಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ, ನೀವು ಉದ್ಯೋಗಿಗಳಾಗಲು ಕಷ್ಟಪಡಬೇಡಿ, ಉದ್ಯೋಗ ನೀಡುವ ವ್ಯಕ್ತಿಗಳಾಗಲು ಪ್ರಯತ್ನಿಸಿ ಎಂದು ಹೇಳಿದರು.