Site icon Vistara News

Moral Policing: ಉಪ್ಪಿನಂಗಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ತಡೆದು ಧಮಕಿ!

Moral policing

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ (Moral Policing) ನಡೆದಿದೆ. ಆಟೋದಲ್ಲಿ ಹೋಗುತ್ತಿದ್ದ ಮುಸ್ಲಿಂ ವಿದ್ಯಾರ್ಥಿ ಜೋಡಿಯನ್ನು ತಡೆದು ಹಲ್ಲೆಗೆ ಯತ್ನಿಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಜಾರು ಎಂಬಲ್ಲಿ ನಡೆದಿದೆ. ವಾರದ ಹಿಂದೆ ನಡೆದಿರುವ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಟೋದಲ್ಲಿ ಹೋಗುತ್ತಿದ್ದ ಮುಸ್ಲಿಂ ವಿದ್ಯಾರ್ಥಿ ಜೋಡಿಯನ್ನು ತಡೆದಿರುವ ಕೆಲವರು, ವಿದ್ಯಾರ್ಥಿಯನ್ನು ಕೆಳಗಿಳಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೆ ಯತ್ನಿಸಿದ ಆರೋಪಿಗಳು ಪರಾರಿಯಾಗಿದ್ದು, ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಾವಣಗೆರೆಯಲ್ಲಿ ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟ ಹಿಂದು ಯುವಕನಿಗೆ ಥಳಿತ

ದಾವಣಗೆರೆ: ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟ ಎಂದು ಹಿಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಾವಣಗೆರೆಯ ಆರ್‌ಟಿಒ ಕಚೇರಿ ಬಳಿ ನಡೆದಿದೆ. ಜಾಲಿ ನಗರದ ನಿವಾಸಿ ಶ್ರೀನಿವಾಸ್ (29) ಹಲ್ಲೆಗೊಳಗಾದ ಯುವಕ. ಮನೆಯ ಪಕ್ಕದಲ್ಲಿರುವ ಮುಸ್ಲಿಂ ಯುವತಿಯನ್ನು ಬೈಕ್‌ನಲ್ಲಿ ಡ್ರಾಪ್ ಮಾಡಲು ಹೋಗಿದ್ದಾಗ ಶ್ರೀನಿವಾಸ್‌ನನ್ನು ಅಡ್ಡಗಟ್ಟಿ ಹಲ್ಲೆ ನಂತರ, ತಾಜ್ ಪ್ಯಾಲೇಸ್‌ಗೆ ಕರೆದೊಯ್ದು ಇಡೀ ರಾತ್ರಿ ಯುವಕರ ತಂಡ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಬಳಿಕ ಶ್ರೀನಿವಾಸ್‌ನನ್ನು ನಿರ್ಜನ ಪ್ರದೇಶದಲ್ಲಿ ತಂದು ಯುವಕರು ಬಿಸಾಡಿದ್ದರು. ಶನಿವಾರ ಬೆಳಗ್ಗೆ ಶ್ರೀನಿವಾಸ್ ಪೋಷಕರಿಗೆ ಪೋನ್‌ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಗಾಯಾಳುವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಮುಂಭಾಗ ಹಿಂದು ಸಂಘಟನೆಯ ಮುಖಂಡರು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.

ನಂತರ ಶ್ರೀನಿವಾಸ್ ಮೇಲೆ ಯುವತಿ ಕಡೆಯವರು ಪೋಕ್ಸೊ ಪ್ರಕರಣ ದಾಖಲಿಸಿ, ಅತ್ಯಾಚಾರ ಮಾಡಿದ್ದಾನೆ ದೂರು ನೀಡಿದ್ದಾರೆ. ಹೀಗಾಗಿ ಯುವಕನ‌ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಹಿಂದು ಸಂಘಟನೆಗಳು ಆಗ್ರಹಿಸಿವೆ. ಇದರ ಹಿಂದೆ ಷಡ್ಯಂತ್ರವಿದ್ದು ಹಿಂದು ಯುವಕನ ಮೇಲೆ ಹಲ್ಲೆ ಮಾಡಿದ್ದು ಏಕೆ? ಅವನು ತಪ್ಪು ಮಾಡಿದ್ದರೇ ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಯುವಕನಿಗೆ ಈಗಾಗಲೆ ಎಂಗೇಜ್ಮೆಂಟ್ ಆಗಿದ್ದು, ಮದುವೆ ಪಿಕ್ಸ್ ಆಗಿದೆ. ಆತ ತಪ್ಪು ಮಾಡಿದ್ದರೇ ಶಿಕ್ಷೆ ಕೊಡುವುದಕ್ಕೆ ಕಾನೂನು ಇದೆ. ಆದ್ದರಿಂದ ನೈತಿಕ ಪೊಲೀಸ್ ಗಿರಿ ಮಾಡಿದವರನ್ನು ಬಂಧಿಸಬೇಕು ಎಂದು ಹಿಂದು ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Physical Abuse : 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ನಿವೃತ್ತ ಕ್ಲರ್ಕ್!

ಸಾವಿನಲ್ಲೂ ಒಂದಾದ ಪ್ರೇಮಿಗಳು; ರಸ್ತೆ ಅಪಘಾತದಲ್ಲಿ ಮೃತ್ಯು

ರಾಮನಗರ: ನೂರಾರು ಕನಸುಗಳನ್ನು ಹೊತ್ತಿದ್ದ ಆ ಜೋಡಿ ಸಾವಿನಲ್ಲೂ ಒಂದಾಗಿದೆ. ಶಾಲಾ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಪ್ರೇಮಿಗಳು (Lovers Death) ಮೃತಪಟ್ಟಿದ್ದಾರೆ. ಕೆಬ್ಬೆಹಳ್ಳಿ ಗ್ರಾಮದ ದೀಪು (25), ತಿಪ್ಪೂರು ಗ್ರಾಮದ ಶೈಲ (20) ಮೃತ ದುರ್ದೈವಿಗಳು.

ಶನಿವಾರ ರಾತ್ರಿ ಕನಕಪುರ ತಾಲೂಕಿನ ಕೋಡಿಹಳ್ಳಿ ಮುಖ್ಯ ರಸ್ತೆಯ ನಾರಾಯಣಪುರದ ನಂಜಪ್ಪನ ಕಟ್ಟೆ ಬಳಿ ಈ ದುರ್ಘಟನೆ ನಡೆದಿದೆ. ಶೈಲಾಳನ್ನು ಮನೆಗೆ ಡ್ರಾಪ್‌ ಮಾಡುವ ಸಲುವಾಗಿ ಕನಕಪುರದಿಂದ ದೀಪು ತನ್ನ ಕಾರಲ್ಲಿ ಹೊರಟ್ಟಿದ್ದರು. ಈ ವೇಳೆ ಎದುರಿಗೆ ಬಂದ ಶಾಲಾ ಬಸ್‌ವೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಛಿದ್ರ ಛಿದ್ರಗೊಂಡಿದ್ದು, ಒಳಗಿದ್ದ ದೀಪು, ಶೈಲು ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ | Accident Case : ಕಿಟಕಿ ಒರೆಸುವಾಗ ಜಾರಿದ ಕಾಲು; 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಅಪಘಾತದಲ್ಲಿ ಶೈಲ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ದೀಪುನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಜೀವ ಬಿಟ್ಟಿದ್ದಾನೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version