ಹಾವೇರಿ: ಜನವರಿ 8ರಂದು ಹಾನಗಲ್‌ನ ಲಾಡ್ಜ್ (Attack in Lodge) ಒಂದರಲ್ಲಿ ಜತೆಗಿದ್ದ ಮುಸ್ಲಿಂ ಮಹಿಳೆ (Muslim Woman) ಮತ್ತು ಹಿಂದು ಪುರುಷನ ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ನಡೆಸಿದ್ದ ಮುಸ್ಲಿಂ ಪುಂಡ ಯುವಕರು ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿರುವ ಭಯಾನಕ ಘಟನೆ ಈಗ ಬೆಳಕಿಗೆ ಬಂದಿದೆ.
ಶಿರಸಿ ಮೂಲದ ಮುಸ್ಲಿಂ ಮಹಿಳೆ ಮತ್ತು ಅವಿವಾಹಿತ ಯುವಕ ಹಾನಗಲ್ ಲಾಡ್ಜ್‌ನಲ್ಲಿರುವುದನ್ನು ರಿಕ್ಷಾ ಚಾಲಕನೊಬ್ಬನ ಮೂಲಕ ತಿಳಿದ ಮುಸ್ಲಿಂ ಯುವಕರು ಅಲ್ಲಿಗೆ ಧಾವಿಸಿ ಕೋಣೆಯೊಳಗಿನ ಟ್ಯಾಪ್ ರಿಪೇರಿ ಮಾಡುವ ನೆಪದಲ್ಲಿ ಒಳಗೆ ಹೋಗಿ ಇಬ್ಬರನ್ನೂ ಚೆನ್ನಾಗಿ ಥಳಿಸಿದ್ದರು.
ಬಳಿಕ ಯುವಕನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿ ಎಲ್ಲೋ ಹಲ್ಲೆ ಮಾಡಿ ಬಿಟ್ಟಿದ್ದರು. ಈ ನಡುವೆ, ಯುವತಿಯನ್ನು ಒಂದು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದ ಅವರು ಬಳಿಕ ರಸ್ತೆಯಲ್ಲಿ ತಂದು ಬಿಟ್ಟಿದ್ದರು. ಆದರೆ, ಹೀಗೆ ಕಾರಿನಲ್ಲಿ ಕರೆದುಕೊಂಡು ಹೋದ ಪುಂಡ ಯುವಕರು ಆಕೆಯನ್ನು ನದಿ ತೀರದಲ್ಲಿ ಮತ್ತು ಕಾಡಿನಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂಬ ಅಂಶ ಬಯಲಾಗಿದೆ. ಸ್ವತಃ ಸಂತ್ರಸ್ತ ಮಹಿಳೆಯೇ ಈ ವಿಚಾರವನ್ನು ಹೇಳಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾಳೆ.
ಆವತ್ತು ಹೋಟೆಲ್‌ಗೆ ನುಗ್ಗಿ ದಾಳಿ ಮಾಡಿದ ಮುಸ್ಲಿಂ ಯುವಕರು ಬಳಿಕ ನನ್ನನ್ನು ಒಂದು ಕಾರಿನಲ್ಲಿ ಕರೆದುಕೊಂಡು ಹೋದರು. ದಾರಿಯುದ್ದಕ್ಕೂ ನನ್ನ ಮೇಲೆ ಹಲ್ಲೆ ಮಾಡಿದ ಅವರು, ಮೊದಲು ಒಂದು ನದಿ ತೀರಕ್ಕೆ ಎಳೆದುಕೊಂಡು ಹೋದರು. ಅಲ್ಲಿ ನನ್ನ ಮೇಲೆ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದರು. ಬಳಿಕ ಒಂದು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಕೂಡಾ ಬೇಡ ಬೇಡ ಎಂದು ಹೇಳಿದರೂ ಕೇಳದೆ ದೌರ್ಜನ್ಯ ನಡೆಸಿದರು ಎಂದು ಮಹಿಳೆ ತಿಳಿಸಿದ್ದಾರೆ.
ಹೀಗೆ ಏಳು ಜನ ಸತತವಾಗಿ ಅತ್ಯಾಚಾರ ಮಾಡಿದ ಬಳಿಕ ರಸ್ತೆ ಬಳಿ ಕರೆದುಕೊಂಡು ಬಂದು ಶಿರಸಿ ಬಸ್ ಹತ್ತಿಸಿದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ರೀತಿ ದೌರ್ಜನ್ಯ ಮಾಡಿರುವವರು ಅಕ್ಕಿ ಆಲೂರಿನ ಯುವಕರು ಎಂದು ಹೇಳಿರುವ ಆಕೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕೋರಿದ್ದಾರೆ.
ಈ ನಡುವೆ ತನ್ನ ಪತ್ನಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಆಕೆಯ ಪತಿ ಕೂಡಾ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಆವತ್ತು ಆಗಿದ್ದೇನು?
ಬುರ್ಕಾ ಹಾಕಿದ ಯುವತಿಯೊಬ್ಬಳು ಪುರುಷನ ಜತೆ ಲಾಡ್ಜ್‌ಗೆ ಹೋಗಿದ್ದಾಳೆ ಎಂಬ ಮಾಹಿತಿಯನ್ನು ಒಬ್ಬ ರಿಕ್ಷಾ ಚಾಲಕ ಅಲ್ಲಿನ ಮುಸ್ಲಿಂ ಯುವಕರಿಗೆ ನೀಡಿದ್ದ. ಆಗ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಅಲ್ತಾಫ್ , ಮರ್ದಾನ್ ಸಾಬ್ ಮೊದಲಾದವರು ಲಾಡ್ಜ್‌ಗೆ ನುಗ್ಗಿದ್ದರು.
ಲಾಡ್ಜ್‌ನ ಕೋಣೆಯ ಬಳಿ ಬಂದ ದುಷ್ಕರ್ಮಿಗಳು ಕೋಣೆಯಲ್ಲಿ ಟ್ಯಾಪ್ ಹಾಳಾಗಿದೆ. ಸರಿ ಮಾಡಿ ಬಿಡ್ತೇವೆ ಎಂದು ಹೇಳಿದ್ದಾರೆ. ಮೊದಲು ಬಾಗಿಲು ತೆರೆಯದ ಯುವಕ-ಯುವತಿ ಕೊನೆಗೆ ತುಂಬ ಸಾರಿ ಕರೆದ ಬಳಿಕ ಬಾಗಿಲು ತೆರೆದಿದ್ದರು. ಆಗ ಒಳಗೆ ನುಗ್ಗಿದ ಯುವಕರು ʻʻಬುರ್ಖಾ ಹಾಕಿಕೊಂಡು ಬಂದು ಮಲಗಿದಿಯಾ?ʼ ಎಂದು ಮಹಿಳೆಯನ್ನು ಥಳಿಸುವ ಯುವಕರು, ನಿನಗೆ ನಮ್ ಹುಡುಗಿನೇ ಬೇಕಾ ಎಂದು ಹುಡುಗಿ ಜತೆಗಿರುವ ಯುವಕನಿಗೆ ಹಲ್ಲೆ ಮಾಡುತ್ತಾರೆ ಎನ್ನಲಾಗಿದೆ.
ಬಳಿಕ ಯುವಕನ್ನು ಲಾಡ್ಜ್‌ನಿಂದ ಕೆಳಗೆ ಕರೆದುಕೊಂಡು ಬಂದ ಯುವಕರು ಆತನನ್ನು ಒಂದು ಬೈಕ್‌ನಲ್ಲಿ ಕೂರಿಸಿ ಕಳುಹಿಸಿದ್ದಾರೆ. ನಂತರ ಆತನ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಬಿಡಲಾಗಿತ್ತು.
ಇದನ್ನೂ ಓದಿ : Moral Policing : ಹಿಂದು ಹುಡುಗ್ರ ಜತೆ ತಿರುಗುವ ಮುಸ್ಲಿಂ ಹುಡುಗೀರೇ ಟಾರ್ಗೆಟ್!
ಇತ್ತ ಆ ಮಧ್ಯರಾತ್ರಿಯೇ ಯುವತಿಯನ್ನೂ ಲಾಡ್ಜ್‌ನಿಂದ ಹೊರಗೆ ಕರೆದುಕೊಂಡು ಬಂದ ಪುಂಡರು ಆಕೆಯನ್ನು ಕಾರಿನಲ್ಲಿ ಹಾಕಿ ಕರೆದುಕೊಂಡು ಹೋಗಿದ್ದರು. ಹಾಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನುವುದು ಆಕೆಯ ದೂರು. ಪೊಲೀಸರು ಈಗ ಹಲವರನ್ನು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ನೈತಿಕ ಪೊಲೀಸರಿಗಿರಿ ಮಾತ್ರವಲ್ಲ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಲಿದ್ದಾರೆ.