ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಹಬ್ಬವು (Ganesh Chaturthi) ಅದ್ಧೂರಿಯಿಂದ ನಡೆದಿದ್ದು, ಬುಧವಾರ ಮತ್ತು ಗುರುವಾರ ೧.೬ ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಅಲ್ಲದೆ, ಬುಧವಾರ ಒಂದೇ ದಿನ 45,722 ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಈ ನಡುವೆ ೨೦ ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಗಣೇಶೋತ್ಸವದ ಕೊನೆಯ ಘಟ್ಟ ಮೂರ್ತಿ ವಿಸರ್ಜನೆ. ಹೀಗಾಗಿ ಎಲ್ಲೆಲ್ಲೂ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ನಡೆಯುತ್ತಿದೆ. ಕೆಲವರು ಪ್ರತಿಷ್ಠಾಪನೆ ಮಾಡಿದ ದಿನ, ಇನ್ನು ಕೆಲವರು ಎರಡು, ಮೂರು ಅಥವಾ ಐದು ದಿನಗಳಿಗೆ ಸಾಮಾನ್ಯವಾಗಿ ಮೂರ್ತಿ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಬಿಬಿಎಂಪಿಯಿಂದ ಸ್ಯಾಂಕಿ ಕೆರೆ, ಯಡಿಯೂರು ಕೆರೆ, ಹಲಸೂರು ಕೆರೆ ಹಾಗೂ ವಿವಿಧ ಕಲ್ಯಾಣಿಗಳಲ್ಲಿ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ನಗರದಾದ್ಯಂತ ಗಣೇಶ ಹಬ್ಬದಂದು ತಾತ್ಕಾಲಿಕ ಕಲ್ಯಾಣಿ ಹಾಗೂ ಟ್ಯಾಂಕರ್‌ಗಳಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದ್ದು, ಗುರುವಾರ ರಾತ್ರಿವರೆಗೆ 1.6 ಲಕ್ಷ ಮೂರ್ತಿಗಳು ವಿಸರ್ಜನೆ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆ ವಿವರ:
ಪಶ್ಚಿಮ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 10,557
ಪಿ.ಒ.ಪಿ ಗಣೇಶ ಮೂರ್ತಿಗಳು: 43
ದಕ್ಷಿಣ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 19,359
ಪಿ.ಒ.ಪಿ ಗಣೇಶ ಮೂರ್ತಿಗಳು: 1,555
ದಾಸರಹಳ್ಳಿ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 175
ಪಿ.ಒ.ಪಿ ಗಣೇಶ ಮೂರ್ತಿಗಳು: 5
ಪೂರ್ವ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 5,898
ಪಿ.ಒ.ಪಿ ಗಣೇಶ ಮೂರ್ತಿಗಳು: 0
ಆರ್.ಆರ್.ನಗರ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 2,975
ಪಿ.ಒ.ಪಿ ಗಣೇಶ ಮೂರ್ತಿಗಳು: 0
ಬೊಮ್ಮನಹಳ್ಳಿ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 1,286
ಪಿ.ಒ.ಪಿ ಗಣೇಶ ಮೂರ್ತಿಗಳು: 44
ಯಲಹಂಕ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 2,136
ಪಿ.ಒ.ಪಿ ಗಣೇಶ ಮೂರ್ತಿಗಳು: 0
ಮಹದೇವಪುರ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 1,686
ಪಿ.ಒ.ಪಿ ಗಣೇಶ ಮೂರ್ತಿಗಳು: 0
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗಣೇಶ ಹಬ್ಬದ ದಿನ 45,722 ಗಣೇಶ ಮೂರ್ತಿಗಳ ವಿಸರ್ಜನೆಯಾಗಿದೆ. ದಕ್ಷಿಣ ವಲಯದಲ್ಲಿ 19,359 ಮೂರ್ತಿಗಳ ವಿಸರ್ಜನೆಯಾಗಿದ್ದು, ಇದು ನಗರದಲ್ಲೇ ಅತಿ ಹೆಚ್ಚಾಗಿದೆ. ಈ ಬಾರಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಈ ಬಾರಿಯೂ ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಎಂದಿಗಿಂತಲೂ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಸಾಕಷ್ಟು ಕಡಿಮೆಯಾಗಿದೆ, ಮುಂದಿನ ಇವುಗಳ ಬಳಕೆ ಶೂನ್ಯಕ್ಕಿಲಿಸಲು ಪ್ರಯತ್ನಿಸಲಾಗುವುದು.
| ರಂಗಪ್ಪ, ವಿಶೇಷ ಆಯುಕ್ತ, ಬಿಬಿಎಂಪಿ
ವಿಸರ್ಜನೆ ಬಳಿಕ ಕೆರೆ, ಕಲ್ಯಾಣಿಗಳ ಸ್ವಚ್ಛತೆ
ಗಣೇಶ ವಿಸರ್ಜನೆ ಮಾಡುತ್ತಿರುವ ಸ್ಯಾಂಕಿ ಕೆರೆಯನ್ನು ಪ್ರತಿನಿತ್ಯ ಸ್ವಚ್ಛ ಮಾಡಲಾಗುತ್ತಿದೆ. ಹಾಗೆಯೇ ನೀರು ವಾಸನೆ ಬರದಂತೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಇನ್ನು 10 ದಿನಗಳ ಕಾಲ ಗಣೇಶ ವಿಸರ್ಜನೆಗೆ ಅವಕಾಶವಿದ್ದು, ಗಣೇಶ ವಿಸರ್ಜನೆ ಬಳಿಕ ಕಲ್ಯಾಣಿಗಳನ್ನು ಸ್ವಚ್ಛ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸೆ.5 ಮತ್ತು ಸೆ.12 ರಂದು ಯಡಿಯೂರು ಕೆರೆಯಲ್ಲಿ ಸ್ವಚ್ಛತಾ ಕಾರ್ಯ
ಬಿಬಿಎಂಪಿ ದಕ್ಷಿಣ ವಲಯದ ಯಡಿಯೂರು ಕೆರೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೆ.5 ಮತ್ತು 12 ರಂದು ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶವಿರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆ.31ರಿಂದ ಸೆ.15ರವರೆಗೆ ಸಾರ್ವಜನಿಕರಿಗೆ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಅವಕಾಶ ನೀಡಲಾಗಿದೆ. ಈಗಾಗಲೇ ಸಾಕಷ್ಟು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿರುವುದರಿಂದ ಸ್ವಚ್ಛತಾ ಕಾರ್ಯ ಮಾಡುವ ಸಲುವಾಗಿ ಯಡಿಯೂರು ಕೆರೆ ಕಲ್ಯಾಣಿಯಲ್ಲಿ ಸೆ.5 ಮತ್ತು 12 ರಂದು ಅವಕಾಶ ಸಿಗುವುದಿಲ್ಲ.
ಇದನ್ನೂ ಓದಿ | Ganesh Chaturthi | ಬೆಂಗಳೂರಿನಲ್ಲಿ 2 ದಿನದಲ್ಲಿ 8 ಸಾವಿರ ಟನ್ ಹಸಿ ತ್ಯಾಜ್ಯ; ಈಗ ವಿಲೇವಾರಿ ವರಿ!