Site icon Vistara News

Cartridges found : ಚಿಕ್ಕಮಗಳೂರಿನ ಮೀಸಲು ಅರಣ್ಯದಲ್ಲಿ ಫೈರಿಂಗ್‌ ಆದ ಖಾಲಿ ಕಾಟ್ರಿಜ್‌ಗಳು ಪತ್ತೆ, ಯಾರು ಹೊಡೆದದ್ದು?

Cartridge found in reserve forest

#image_title

ಚಿಕ್ಕಮಗಳೂರು: ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಫೈರಿಂಗ್‌ ಆಗಿ ಖಾಲಿಯಾದ ಕಾಟ್ರಿಜ್‌ಗಳು ಪತ್ತೆಯಾಗಿರುವುದು (Cartridges found) ಹಲವು ಸಂಶಯ ಮತ್ತು ಆತಂಕಕ್ಕೆ ಕಾರಣವಾಗಿದೆ. ಬಂದೂಕಿನ ಖಾಲಿ ಕಾಟ್ರಿಜ್‌ಗಳು ಇವು ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿವೆ.

ಸಾರಗೋಡು, ತತ್ಕೋಳ ಮೀಸಲು ಅರಣ್ಯದ ಸಮೀಪ ಸುಮಾರು 60ಕ್ಕೂ ಹೆಚ್ಚು ಖಾಲಿ ಕಾಟ್ರಿಜ್‌ಗಳು ಪತ್ತೆಯಾಗಿವೆ. ಇವು ಕಾಡು ಪ್ರಾಣಿಗಳ ಶಿಕಾರಿಗಾಗಿ ಬಳಕೆಯಾಗಿರುವ ಅನುಮಾನ ಕಾಡುತ್ತಿದೆ.

ಈ ಭಾಗದಲ್ಲಿ ಕಾಡಿಗೆ ಹೋದ ಕೆಲವು ಸ್ಥಳೀಯರಿಗೆ ಕಾಟ್ರಿಜ್‌ಗಳು ಕಾಣಿಸಿಕೊಂಡಿದ್ದು ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಲೇ ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಇದೀಗ ಪ್ರಕರಣ ಅರಣ್ಯ ಇಲಾಖೆಯಿಂದ ಪೊಲೀಸರಿಗೆ ಹಸ್ತಾಂತರವಾಗುವ ಸಾಧ್ಯತೆ ಇದೆ.

ಒಂದೇ ಕಡೆ ಪತ್ತೆ 60ಕ್ಕೂ ಹೆಚ್ಚು ಕಾಟ್ರಿಜ್‌ಗಳು ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ. ಈ ಭಾಗದಲ್ಲಿ ಅತಿ ಹೆಚ್ಚು ಕಾಡು ಪ್ರಾಣಿಗಳು ಸಾರಗೋಡು ತತ್ಕೋಳ ಮೀಸಲು ಅರಣ್ಯದಲ್ಲಿ ಕಂಡುಬರುತ್ತವೆ.

ಇತ್ತೀಚೆಗೆ ಇಲ್ಲಿ ಶಿಕಾರಿ ಮಾಡುವ ಖಯಾಲಿ ಹೆಚ್ಚುತ್ತಿದ್ದು, ಪೊಲೀಸರು ಹಲವು ಅನಧಿಕೃತ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಭಾಗದಲ್ಲಿ ಕಾಡಿನಲ್ಲಿ ಬೆಂಕಿ ಬೀಳವುದು ಕೂಡಾ ಹೆಚ್ಚಾಗಿದ್ದು, ಇದರಲ್ಲಿ ಹವಾಮಾನ ವೈಪರೀತ್ಯದ ಜತೆಗೆ ಬೇಟೆಗಾರರು ಹಚ್ಚುವ ಬೆಂಕಿಯ ಪ್ರಮಾಣವೂ ಜಾಸ್ತಿ ಇದೆ ಎನ್ನಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವ್ಯಾಪ್ತಿಗೆ ಸಾರಗೋಡು ತತ್ಕೋಳ ಅರಣ್ಯ ಬರುತ್ತಿದ್ದು, ಪೊಲೀಸರು ಕೂಡಾ ಪ್ರಕರಣವನ್ನು ಗಮನಿಸುತ್ತಿದ್ದಾರೆ.

ಇದನ್ನೂ ಓದಿ : Wild animal poaching : ತಲಕಾವೇರಿ ಕಾಡಿನಲ್ಲಿ ಬೇಟೆಗೆ ಬಂದ ನಾಲ್ವರಲ್ಲಿ ಒಬ್ಬನ ಸೆರೆ, ಮೂವರು ಪರಾರಿ

Exit mobile version