ಬೆಂಗಳೂರು: ಕರ್ನಾಟಕದ ಹಲವೆಡೆ ಇಂದು ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ತಡರಾತ್ರಿಯಿಂದಲೇ ಆರಂಭವಾದ ಮಳೆ ಶುಕ್ರವಾರ ಮುಂಜಾನೆಯೂ ಮುಂದುವರಿದಿದೆ.
ರಾಜ್ಯದ ಮಲೆನಾಡು ಮತ್ತು ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ಸೂಚನೆ ನೀಡಿದೆ. ರಾಜ್ಯದ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಾಳೆ ಬೆಳಗ್ಗೆ 8.30ರವರೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿ ಜಿಲ್ಲೆಯ ಸಮುದ್ರ ಭಾಗಗಳಲ್ಲಿ ಗಂಟೆಗೆ 40ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಇದರಿಂದ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಯ ಪರಿಣಾಮ ರಸ್ತೆಗಳಲ್ಲಿ ನೀರು ನಿಂತು, ಮುಂಜಾನೆ ಉದ್ಯೋಗಕ್ಕೆ ಹೋಗುವ ನೌಕರರು ಪರದಾಡಿದರು. ಕೆ.ಆರ್.ಮಾರುಕಟ್ಟೆ ಮುಂತಾದ ಮುಂಜಾನೆ ಬಿರುಸಿನ ವ್ಯವಹಾರ ನಡೆಯುವ ಜಾಗಗಳಲ್ಲಿ ಮಂಕಾದ ಕಳೆ ಕಂಡುಬಂತು. ಹಲವು ಕಡೆ ಬೆಳ್ಳಂಬೆಳಗ್ಗೆಯೇ ಟ್ರಾಫಿಕ್ ಜಾಮ್ ಸಂಭವಿಸಿತು.
ಇದನ್ನೂ ಓದಿ | Rain water safety | ಮಳೆನೀರಿಗೆ ಬೊಗಸೆಯೊಡ್ಡಿ ಕುಡಿಯುವ ಮೊದಲು, ಇನ್ನೊಮ್ಮೆ ಯೋಚಿಸಿ