ಬೆಂಗಳೂರು: ಮಾಜಿ ಸಚಿವೆ ಮೋಟಮ್ಮ ಅವರ ಆತ್ಮಕಥನ ʼಬಿದಿರು ನೀನ್ಯಾರಿಗಲ್ಲದವಳುʼ ಸಿದ್ಧವಾಗಿದ್ದು, ಸದ್ಯವೇ ಬಿಡುಗಡೆಯಾಗಲಿದೆ. ಈ ಕೃತಿಯನ್ನು ಡಾ. ವೀರಣ್ಣ ಕಮ್ಮಾರ ನಿರೂಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಮೋಟಮ್ಮ 1999ರಿಂದ 2004ರವರೆಗೆ ಎಸ್ ಎಂ ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದರು. ಮೂಡಿಗೆರೆ ತಾಲೂಕಿನ ಕೆಸವೊಳಲು ಎಂಬ ಚಿಕ್ಕ ಹಳ್ಳಿಯಿಂದ ಬಂದಿದ್ದ ಅವರು ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಲೇ ಬಂದಿದ್ದು, 2010ರಿಂದ 2012ರವರೆಗೆ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಿಂದ ರಾಜಕೀಯ ಆರಂಭಿಸಿ, ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಅವರ ರಾಜಕೀಯ ಹೋರಾಟ ಕುತೂಹಲಕಾರಿಯಾಗಿದ್ದು, ಅವುಗಳನ್ನು ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ.
ಈ ಕೃತಿಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಬೆನ್ನುಡಿ ಬರೆದಿದ್ದು, ಅದರಲ್ಲಿ ಅವರು ಕೃತಿಗೆ ಇಟ್ಟ ಹೆಸರಿನ ಬಗ್ಗೆ ಹೀಗೆ ದಾಖಲಿಸಿದ್ದಾರೆ:
ʼʼಬಿದಿರು ಒಂದು ದಿನ ಬ್ರಹ್ಮನಿಗೆ ಬೇಸರದಿಂದ ಕೇಳಿತಂತೆ, ಬೇಕಿತ್ತೇ ಈ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ? ಹೂವಿಲ್ಲ, ಹಣ್ಣಿಲ್ಲ, ದಣಿದು ಬಂದವರಿಗೆ ನೆರಳು ನೀಡಲೂ ಆಗುವುದಿಲ್ಲ.
ಆಗ ಬ್ರಹ್ಮ ನುಡಿದನಂತೆ: “ಏಕೆ ಸಾಧ್ಯವಿಲ್ಲ? ಮನಸ್ಸು ಮಾಡಿ ನೋಡುʼʼ. ಬಿದಿರು ಹಟ ಹಿಡಿದು ಬೆಳೆಯಿತಂತೆ. ಮುಂದೆ ಅದು ಕೃಷ್ಣನ ಕೈಯಲ್ಲಿ ಕೊಳಲಾಯಿತು, ಮಕ್ಕಳ ತೂಗುವ ತೊಟ್ಟಿಲಾಯಿತು, ಸುಮಂಗಲಿಯರ ಬಾಗಿನಕ್ಕೆ ಮೊರವಾಯಿತು, ಆರೋಗ್ಯಕ್ಕೆ ಔಷಧಿಯಾಯಿತು, ಮೋಕ್ಷದ ದಾರಿಯಲ್ಲಿ- ಅಂತಿಮ ಯಾತ್ರೆಯಲ್ಲಿ ನೆರವಾಯಿತು. ಬಿದಿರು ಎಲ್ಲರಿಗೂ ಬೇಕಾಯಿತು. ಮನಸ್ಸು ಮಾಡಿದರೆ ಯಾವ ಸಾಧನೆಯನ್ನೂ ಮಾಡಬಹುದು ಎಂದು ಲೋಕಕ್ಕೆ ಸಾರಿತು.
ಹಾಗೆಯೇ ಮೋಟಮ್ಮನವರು ಮಹಿಳೆಯರಿಗೆ ಸ್ಫೂರ್ತಿಯ ಚೆಲುಮೆ, ಭರವಸೆಯ ಬೆಳಕಾಗಿದ್ದಾರೆ, ಮಾರ್ಗದರ್ಶಿಯಾಗಿದ್ದಾರೆʼʼ
ಪುಸ್ತಕ ಓದುವುದರಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ಮೋಟಮ್ಮ ಇದೇ ಮೊದಲ ಬಾರಿಗೆ ಕೃತಿಯೊಂದಕ್ಕೆ ಲೇಖಕರಾಗಿದ್ದಾರೆ. ಹಾಡು ಹೇಳುವುದರಲ್ಲಿ ಮತ್ತು ಕ್ರೀಡಾಚಟುವಟಿಕೆಗಳಲ್ಲಿ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ.
ಇದನ್ನೂ ಓದಿ| ಮಕ್ಕಳ ಕಥೆ: ಮುಲಾನಾ ಎಂಬ ದಿಟ್ಟ ಹುಡುಗಿ