ವಿಜಯಪುರ: ಬಟ್ಟೆ ತೊಳೆಯಲು ಹೋದಾಗ ನದಿಯಲ್ಲಿ ಬಿದ್ದು, ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ (drowned in river). ವಿಜಯಪುರ ಜಿಲ್ಲೆಯ (Vijayapura news) ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಶುಕ್ರವಾರ ಈ ದುರಂತ ಸಂಭವಿಸಿದೆ.
38 ವರ್ಷದ ಗೀತಾ ಹೊನ್ನೂರ, 12 ವರ್ಷದ ಶೋಭಿತಾ, 10 ವರ್ಷದ ವಾಸುದೇವ ಮೃತಪಟ್ಟಿರುವ ದುರ್ದೈವಿಗಳು. ತಾಯಿ ಗೀತಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಬಟ್ಟೆ ತೊಳೆಯಲೆಂದು ಭೀಮಾ ನದಿ ತೀರಕ್ಕೆ ಹೋಗಿದ್ದರು. ಅಮ್ಮ ಬಟ್ಟೆ ತೊಳೆಯುತ್ತಿದ್ದಾಗ ಮಕ್ಕಳಿಬ್ಬರೂ ಅಲ್ಲೇ ತೀರದಲ್ಲಿ ಆಟವಾಡುತ್ತಿದ್ದರು.
ಈ ನಡುವೆ, 10 ವರ್ಷದ ವಾಸುದೇವ ಆಟವಾಡುತ್ತಾ ನದಿಗೆ ಇಳಿದಿದ್ದಾನೆ. ಹಾಗೆ ಇಳಿದವನು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ನೋಡುತ್ತಿದ್ದ ಅಕ್ಕ ಶೋಭಿತಾ ತಮ್ಮನನ್ನು ನೀರಿನಿಂದ ಮೇಲೆ ಎಳೆಯಲು ಹೋಗಿದ್ದಾಳೆ. ಆಗ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
ತನ್ನ ಮಕ್ಕಳಿಬ್ಬರೂ ನೀರಿನಲ್ಲಿ ಮುಳುಗೇಳುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲೆಂದು ತಾಯಿ ಗೀತಾ ಅವರು ಕೂಡಾ ನೀರಿಗೆ ಧುಮುಕಿದ್ದಾರೆ. ಆದರೆ ಆಕೆಗೆ ಈಜು ಗೊತ್ತಿರಲಿಲ್ಲ. ನೀರಿನಲ್ಲಿ ಮುಳುಗೇಳುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಆಕೆ ಕೂಡಾ ಮುಳುಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಪ್ರದೇಶದ ನೂರಾರು ಮಂದಿ ಧಾವಿಸಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ಎಲ್ಲವೂ ಮುಗಿದು ಹೋಗಿತ್ತು. ಪುಟ್ಟ ಮಕ್ಕಳು ಮತ್ತು ತಾಯಿಯನ್ನು ಕಳೆದುಕೊಂಡ ಕುಟುಂಬ ಮತ್ತು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ ಸಾವು
ಬೆಂಗಳೂರು: ರಾಜಧಾನಿಯ ಜುವೆಲರಿ ಅಂಗಡಿಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ನಗರತ್ ಪೇಟೆ ಬೀದಿಯಲ್ಲಿ ಘಟನೆ ನಡೆದಿದ್ದು, ಮೃತಪಟ್ಟವರನ್ನು ವಿಷ್ಣು ಎಂದು ಗುರುತಿಸಲಾಗಿದೆ.
ವಿಷ್ಣು ಮತ್ತು ಅವರ ಪತ್ನಿ ಇಲ್ಲಿನ ಕಟ್ಟಡವೊಂದರ ನೆಲಮಹಡಿಯಲ್ಲಿದ್ದ ಜುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಾ ಜೀವನೋಪಾಯ ಕಂಡುಕೊಂಡಿದ್ದರು..
ಅಕ್ಕಸಾಲಿಗರ ಅಂಗಡಿಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಆಕ್ಸಿಜನ್ ಮತ್ತು ಎಲ್‌ಪಿಜಿ ಬಳಸಲಾಗುತ್ತದೆ. ಇಲ್ಲೂ ಆಕ್ಸಿಜನ್ ಬಳಕೆಯಾಗಿತ್ತು.
ಗುರುವಾರ ಮಧ್ಯಾಹ್ನ ವಿಷ್ಣು ಅವರಿಗೆ ಅವರ ಪತ್ನಿ ಊಟ ತಂದುಕೊಟ್ಟಿದ್ದರು. ಹೆಂಡತಿ ತಂದ ಊಟ ಉಣ್ಣಲು ಅವರು ಕೆಲಸ ಮಾಡುತ್ತಿದ್ದಲ್ಲಿಂದ ಎದ್ದು ಬಂದಿದ್ದರು. ಆದರೆ, ಹಾಗೆ ಏಳುವಾಗ ಆಕ್ಸಿಜನ್ ಆಫ್ ಮಾಡಿರಲಿಲ್ಲ ಎನ್ನಲಾಗಿದೆ. ಆ ಸಮಯದಲ್ಲಿ ಒತ್ತಡ ಒಮ್ಮಿಂದೊಮ್ಮೆಗೇ ಹೆಚ್ಚಾಗಿ ಅದು ಸ್ಫೋಟಗೊಂಡಿದೆ ಎನ್ನಲಾಗಿದೆ.
ಸ್ಫೋಟದಿಂದಾಗಿ ವಿಷ್ಣು ತೀವ್ರವಾಗಿ ಗಾಯಗೊಂಡಿದ್ದರು. ಅವರ ತಲೆಗೆ ತೀವ್ರಗಾಯವಾದ ಹಿನ್ನೆಲೆ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಅಂಗಡಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಆದರೆ, ಇದಕ್ಕೆ ಅನುಮತಿ ಇದೆಯಾ, ಗ್ಯಾಸ್ ಬಳಕೆಗೆ ಅವಕಾಶವಿದೆಯಾ ಎನ್ನು ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆಯ ವೇಳೆ ಮಾಲೀಕರು ಅಲ್ಲಿರಲಿಲ್ಲ. ಕೆಲಸದವರು ಮಾತ್ರ ಇದ್ದರು ಎನ್ನಲಾಗಿದೆ. ಅಂಗಡಿ ಮಾಲೀಕನಿಗಾಗಿಯೂ ಶೋಧ ನಡೆಯುತ್ತಿದೆ.
ಇದನ್ನೂ ಓದಿ: Drowned: ಮುಳುಗುತ್ತಿರುವ ಮೊಮ್ಮಗನನ್ನು ರಕ್ಷಿಸಲು ಹೋಗಿ ತಂದೆ- ತಾತ ನೀರುಪಾಲು