Site icon Vistara News

ಕಾರ ಹುಣ್ಣಿಮೆ ಕರಿ ದಿನವೇ ಕರಾಳ ದುರಂತ: 3 ಮಕ್ಕಳನ್ನು ಕೃಷಿ ಹೊಂಡಕ್ಕೆ ಎಸೆದು ತಾಯಿ ಆತ್ಮಹತ್ಯೆ

ತಾಯಿ ಆತ್ಮಹತ್ಯೆ

ವಿಜಯಪುರ: ಕಾರ ಹುಣ್ಣಿಮೆಯ ಮರುದಿನ ಇಡೀ ಊರು ಮಾಂಸದಡುಗೆಯ ಸಂಭ್ರಮದಲ್ಲಿದ್ದರೆ ಇಲ್ಲಿನ ತೊರವಿ ತಾಂಡಾ ೧ರ ತೋಟದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಬುಧವಾರ ಮಧ್ಯಾಹ್ನದ ಹೊತ್ತು ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ತೋಟದ ಕೃಷಿ ಹೊಂಡಕ್ಕೆ ತಳ್ಳಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡ ಕಾರ ಹುಣ್ಣಿಮೆಗೆ ಅಡುಗೆ ಮಾಡಲೆಂದು ಊರಿನ ಜತೆ ಮೊಲದ ಬೇಟೆಗೆ ಹೋಗಿದ್ದರೆ ಹೆಂಡತಿ ಮಕ್ಕಳೊಂದಿಗೆ ಇಹದ ಬದುಕನ್ನೇ ಬಿಟ್ಟು ಹೊರಟಿದ್ದಾಳೆ. ಕೌಟುಂಬಿಕ ಸಮಸ್ಯೆಗಳು, ಕಿರುಕುಳ, ಮನಸ್ತಾಪಗಳಿಂದ ಬೆಂದು ಬಸವಳಿದು ಈ ಹೆಣ್ಮಗಳು ಇಂಥ ಕೃತ್ಯಕ್ಕೆ ಮುಂದಾಗಿದ್ದಾಳೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ಅಷ್ಟಕ್ಕೂ ಆಗಿದ್ದೇನು?
ತೊರವಿ ಎಲ್.ಟಿ.1ರ ನಿವಾಯಾಗಿರುವ ಅನಿತಾ ಪಿಂಟು ರಾಠೋಡ (28) ಬುಧವಾರ ತನ್ನ ಮೂವರು ಮಕ್ಕಳಾದ ಆರು ವರ್ಷದ ಪ್ರವೀಣ, ನಾಲ್ಕು ವರ್ಷದ ಸುದೀಪ ಮತ್ತು ಮೂರು ವರ್ಷದ ಮಮದಿಕಾ ಅವರನ್ನು ಕರೆದುಕೊಂಡು ಕೃಷಿ ಹೊಂಡದ ಕಡೆಗೆ ಹೋಗಿದ್ದಾಳೆ. ಅಲ್ಲಿ ಮೂವರು ಮಕ್ಕಳನ್ನು ನೀರಿಗೆ ತಳ್ಳಿ, ಅವರೆಲ್ಲರೂ ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವ ನಡುವೆಯೇ ತಾನೂ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಇದು ಅವರ ಖಾಸಗಿ ತೋಟವಾಗಿರುವುದರಿಂದ ಮಕ್ಕಳ ಆಕ್ರಂದನ, ಚೀರಾಟಗಳು ಯಾರಿಗೂ ಕೇಳಿಸದೆ ಅವರೆಲ್ಲರೂ ನೀರಿನಲ್ಲೇ ಶವವಾಗಿದ್ದಾರೆ. ಅನಿತಾ ಮತ್ತು ಮಕ್ಕಳು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಹುಡುಕಿದಾಗ ಅವರೆಲ್ಲರೂ ನೀರಿನ ಹೊಂಡದಲ್ಲಿ ಹೆಣವಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ | ಹೊಲದಲ್ಲಿ ವಿಷ ಕುಡಿದು ನಾಲ್ವರಿಂದ ಆತ್ಮಹತ್ಯೆ ಯತ್ನ, ಶಾಸಕ ಓಲೆಕಾರ್ ಕುಟುಂಬದ ದಬ್ಬಾಳಿಕೆ ಕಾರಣವೆ?

ಸ್ಥಳಕ್ಕೆ ವಿಜಯಪುರ ಡಿವೈಎಸ್ಪಿ ನೇತೃತ್ವದಲ್ಲಿ ಎಸ್ಪಿ, ಎಎಸ್ಪಿ, ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಡನ ಮನೆಯವರ ಕಿರುಕುಳದಿಂದಲೇ ಬೇಸತ್ತು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯ ತವರು ಮನೆಯವರು ದೂರು ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ. ಆನಂದ್ ಕುಮಾರ್

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ. ಆನಂದ್ ಕುಮಾರ್, ತನಿಖೆ ನಡೆಸಲು ಈಗಾಗಲೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ಧಿ ಹಾಗೂ ವಿಜಯಪುರ ಉಪ ವಿಭಾಗ ಡಿವೈಎಸ್ಪಿ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದೇವೆ. ಆದಷ್ಟು ಬೇಗ ಘಟನೆಗೆ ಕಾರಣ ಕಂಡು ಹಿಡಿಯುವುದಾಗಿ ತಿಳಿಸಿದರು. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸಲಾಗುವುದು ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ |ಪತ್ನಿಯ ಬಾಳು ಹಾಳು ಮಾಡಿದೆ ಎಂದು ಮನನೊಂದ ವೈದ್ಯ ಆತ್ಮಹತ್ಯೆ

ಅತ್ತೆ-ಮಾವನ ಕಿರುಕುಳ

ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಪ್ರಾಥಮಿಕ ತನಿಖೆಯಂತೆ ಮನೆಯಲ್ಲಿ ಅತ್ತೆ ಶಾಣಾಬಾಯಿ ಜಾಧವ್‌ ಮತ್ತು ಮಾವ ಧರ್ಮು ಜಾಧವ್‌ ಕಿರುಕುಳ ನೀಡುತ್ತಿದ್ದರು ಎಂಬುದು ತಿಳಿದುಬಂದಿದೆ. ಆದರೆ, ಕಿರುಕುಳದ ಹಿಂದಿನ ನಿಜವಾದ ಕಾರಣ ತಿಳಿದುಬಂದಿಲ್ಲ. ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಅತ್ತೆ ಹಾಗೂ ಮಾವನನ್ನು ವಿಚಾರಣೆ ನಡೆಸುತ್ತಿದ್ದಾರೆ.

ನಿತ್ಯವೂ ಕಿರಿಕಿರಿಯ ಬದುಕು
ಅನಿತಾ ಮತ್ತು ಪಿಂಟು ಜಾಧವ್‌ ಮದುವೆ ಎಂಟು ವರ್ಷದ ಹಿಂದೆ ನಡೆದಿತ್ತು. ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳ ಸಂಸಾರವೂ ಚೆನ್ನಾಗಿತ್ತು. ಆದರೆ, ಮನೆಯಲ್ಲಿ ಕೆಲಸ ಮಾಡುವ ವಿಚಾರದಲ್ಲಿ ನಿರಂತರ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕುಟುಂಬಕ್ಕೆ ತೊರವಿ ತಾಂಡಾದಲ್ಲಿ ನಾಲ್ಕು ಎಕರೆ ಜಾಗವಿದೆ. ಪಿಂಟು ಜಾಧವ್‌ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಈ ಹಂತದಲ್ಲಿ ಮನೆಯಲ್ಲಿ ಮತ್ತು ತೋಟದಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಅನಿತಾ ಮತ್ತು ಕುಟುಂಬದವರ ನಡುವೆ ಮನಸ್ತಾಪವಿತ್ತು ಎಂದು ಹೇಳಲಾಗಿದೆ. ಬುಧವಾರ ಬೆಳಗ್ಗೆಯೂ ಗಂಡ-ಹೆಂಡತಿ ನಡುವೆ ಈ ವಿಚಾರದಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ತೀವ್ರವಾಗಿ ಮನ ನೊಂದ ಅನಿತಾ ಅವರು ಗಂಡ ಮೊಲ ಬೇಟೆಗೆ ಹೋದಾಗ ಸಾವಿನ ಮನೆ ಪ್ರವೇಶಿಸುವ ನಿರ್ಧಾರ ಮಾಡಿದ್ದಾಳೆ. ಜತೆಗೆ ತನ್ನ ಮುದ್ದು ಮಕ್ಕಳನ್ನೂ ಕರೆದುಕೊಂಡು ಹೋಗಿದ್ದಾಳೆ.

Exit mobile version