ಬೆಂಗಳೂರು: ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಅವರು ಈ ಹಿಂದೆ ತಿಳಿಸಿದ್ದ ಅತ್ಯಂತ ಸಣ್ಣ ಹಾಗೂ ಪರಿಣಾಮಕಾರಿ ಉಪಾಯವೊಂದನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಹಾಲು ಉತ್ಪಾದಕ ಸಂಸ್ಥೆ ಮದರ್ ಡೇರಿ ಅಳವಡಿಸಿಕೊಂಡಿದೆ.
ಕೆಲ ವರ್ಷದ ಹಿಂದೆ ತೇಜಸ್ವಿನಿ ಅನಂತಕುಮಾರ್ ಅವರು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ವಿಡಿಯೋ ಹಾಗೂ ಫೋಟೊಗಳನ್ನು ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಗೃಹಿಣಿಯರು ಹಾಲಿನ ಪ್ಯಾಕೆಟ್‌ಗಳನ್ನು ಕತ್ತರಿಯಿಂದ ಸಂಪೂರ್ಣವಾಗಿ ಕತ್ತರಿಸುತ್ತಾರೆ. ಒಂದು ಮೂಲೆಯನ್ನು ಪೂರ್ಣ ಕತ್ತರಿಸುವುದರಿಂದ ಆ ಸಣ್ಣ ಚೂರು ಪ್ಲಾಸ್ಟಿಕ್ ಸಂಪೂರ್ಣ ಬೇರ್ಪಡುತ್ತದೆ. ಈ ರೀತಿ ಬೇರ್ಪಡುವ ಪ್ಲಾಸ್ಟಿಕ್ ಚೂರು, ಪ್ಲಾಸ್ಟಿಕ್ ಸಂಸ್ಕರಣೆಗೆ ಸಿಗುವುದಿಲ್ಲ. ಹೀಗೆ ಪ್ರತಿನಿತ್ಯ ಬೆಂಗಳೂರೊಂದರಲ್ಲೆ 50 ಲಕ್ಷ ಚೂರುಗಳು ಪರಿಸರಕ್ಕೆ ಹಾನಿಯಾಗುವಂತೆ ಭೂಮಿಯೊಳಗೆ ಸೇರುವ ಅಪಾಯವಿರುತ್ತದೆ ಎಂದು ತಿಳಿಸಿದ್ದರು.
ಈ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿದ್ದ ತೇಜಸ್ವಿನಿ ಅನಂತಕುಮಾರ್, ಹಾಲಿನ ಪ್ಯಾಕೆಟ್‌ನ ಮೂಲೆಯನ್ನು ಸಂಪೂರ್ಣ ಕತ್ತರಿಸದೆ ಶೇ. 60-70 ಕತ್ತರಿಸಿದರೆ ಹಾಲನ್ನು ಪಾತ್ರೆಯೊಳಗೆ ಸುಲಭವಾಗಿ ಹಾಕಬಹುದು ಹಾಗೂ ಕತ್ತರಿಸಿದ ಪ್ಲಾಸ್ಟಿಕ್ ಚೂರು ಪ್ಯಾಕೆಟ್ ಜತೆಗೇ ಇರುತ್ತದೆ. ಇದು ಸಂಸ್ಕರಣೆಗೆ ತೆರಳುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ ಎಂದಿದ್ದರು.
ಇದನ್ನೂ ಓದಿ | World Milk Day : ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ! ಹೇಗೆ ಗೊತ್ತೆ?
ಫೇಸ್‌ಬುಕ್ ಪೋಸ್ಟ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಪರಿಸರ ಸಂರಕ್ಷಣೆಗೆ ದೊಡ್ಡದೊಡ್ಡ ಮಾತನಾಡುವ ಬದಲಿಗೆ ಇಂತಹ ಸಣ್ಣ, ಸರಳ ಹಾಗೂ ಪರಿಣಾಮಕಾರಿ ಹೆಜ್ಜೆಗಳನ್ನು ಇಡಬೇಕು ಎಂದು ಸಾರ್ವಜನಿಕರು ಶ್ಲಾಘಿಸಿದ್ದರು.
ಮದರ್ ಡೇರಿಯಿಂದ ಅನುಷ್ಠಾನ
ತೇಜಸ್ವಿನಿ ಅನಂತಕುಮಾರ್ ಅವರ ಸಲಹೆಯನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಡೇರಿ ಡೆವಲಪ್‌ಮೆಂಟ್ ಬೋರ್ಡ್ ಅಧೀನದ ಮದರ್ ಡೇರಿ ಅಳವಡಿಸಿಕೊಂಡಿದೆ. ಹಾಲಿನ ಪ್ಯಾಕೆಟ್ ಅನ್ನು ಜನರು ಹೇಗೆ ಕತ್ತರಿಸಬೇಕು ಎಂದು ಗುರುತು ಮಾಡಲಾಗಿದೆ. ಆ ಗುರುತಿಗೆ ಸರಿಯಾಗಿ ಕತ್ತರಿಸಿದರೆ ಪ್ಲಾಸ್ಟಿಕ್ ತುಂಡು ಪ್ಯಾಕೆಟ್‌ನಿಂದ ಬೇರ್ಪಡುವುದಿಲ್ಲ.
ಈ ಸುದ್ದಿಯನ್ನು ತೇಜಸ್ವಿನಿ ಅನಂತಕುಮಾರ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಸರಳ ಪರಿಹಾರವನ್ನು ಮದರ್ ಡೇರಿ ಮುಂದಕ್ಕೆ ಒಯ್ದಿರುವುದು ಸಂತಸ ತಂದಿದೆ. ಹಾಲಿನ ಪ್ಯಾಕೆಟ್ ಕತ್ತರಿಸಲು ಇದು ಸರಿಯಾದ ವಿಧಾನ. ಈ ರೀತಿ ಮಾಡುವುದರಿಂದ ಪ್ಲಾಸ್ಟಿಕ್ ತುಂಡು ಭೂಮಿಯನ್ನು ಸೇರುವುದನ್ನು ತಡೆಯುವುದಷ್ಟೆ ಅಲ್ಲದೆ, ಪರಿಸರ ಸಂರಕ್ಷಣೆ ಕುರಿತ ಸಣ್ಣ ಸಣ್ಣ ವಿಚಾರಗಳನ್ನೂ ಚಿಂತನೆ ನಡೆಸಲು ಅವಕಾಶ ಮಾಡಿಕೊಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ | ವಿಸ್ತಾರ Explainer: ಅಮೆರಿಕಕ್ಕೆ ರಿಸೆಷನ್ ಭೀತಿ, ಭಾರತಕ್ಕೂ ಫಜೀತಿ?