Site icon Vistara News

ಬೆಳಗಾವಿ: ಚಿರತೆ ದಾಳಿ ಮಾಡಿದರೂ ಬದುಕಿದ ಮಗ, ಆಕ್ರಮಣದ ಸುದ್ದಿ ಕೇಳಿಯೇ ತಾಯಿ ಮೃತ್ಯು

ಬೆಳಗಾವಿ: ಇಲ್ಲಿನ ಜಾಧವ್‌ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಕಟ್ಟಡ ಕಾರ್ಮಿಕರೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್‌ ಅವರು ಜೀವಾಪಾಯದಿಂದ ಪಾರಾಗಿದ್ದಾರೆ. ಆದರೆ, ಈ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಯಾಕೆಂದರೆ, ಮಗನ ಮೇಲೆ ಚಿರತೆ ದಾಳಿ ನಡೆಸಿದೆ ಎಂಬ ಸುದ್ದಿಯನ್ನು ಕೇಳಿಯೇ ಅವರ ತಾಯಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಬೆಳಗಾವಿ ನಗರದ ಜಾಧವ್‌ ನಗರದಲ್ಲಿ ಮಧ್ಯಾಹ್ನ 12.25ರ ಸುಮಾರಿಗೆ ಕಟ್ಟಡವೊಂದರ ಕಾಂಪೌಂಡ್‌ನಿಂದ ಹಾರಿ ಬಂದ ಚಿರತೆ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದ ಖನಗಾವಿ ಕೆ.ಎಚ್‌. ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಾಜಕರ್ (೩೮) ಅವರ ಮೇಲೆ ದಾಳಿ ಮಾಡಿತ್ತು. ಸಿದರಾಯಿ ಭುಜಕ್ಕೆ ಪರಚಿ ಮತ್ತೊಬ್ಬ ಕಾರ್ಮಿಕನ ಬೆನ್ನಟ್ಟಿದೆ. ಆತ ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಪೊದೆಯಲ್ಲಿ ಅವಿತುಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಮಿರಾಜಕರ್‌ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಮಿರಾಜಕರ್‌ ಅವರ ಕತ್ತಿನ ಭಾಗಕ್ಕೆ ಚಿರತೆ ಗಾಯ ಮಾಡಿದ್ದು, ಅವರು ಜೀವಾಪಾಯದಿಂದ ಪಾರಾಗಿದ್ದಾರೆ.

ಈ ನಡುವೆ, ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಚಿರತೆಯನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಜಾಧವ್‌ ನಗರದ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

ಇದೆಲ್ಲದರ ನಡುವೆ ಇತ್ತ ಚಿರತೆ ದಾಳಿಯ ವಿಷಯ ಬೆಳಗಾವಿ ತಾಲೂಕಿನ ಖನಗಾವಿ ಗ್ರಾಮದಲ್ಲಿರುವ ಮಿರಾಜ್‌ ಕರ್‌ ಅವರ ತಾಯಿ ಶಾಂತಾ ಮಿರಾಜ್ಕರ್‌ ಅವರಿಗೆ ಗೊತ್ತಾಗಿದೆ. ಮಿರಾಜ್‌ಕರ್‌ ಅವರೇ ಈ ವಿಷಯವನ್ನು ತಾಯಿಗೆ ಹೇಳಿದ್ದರು. ಅವರು ಮಗನ ಮೇಲಿನ ದಾಳಿಯಿಂದ ದಿಗಿಲುಗೊಂಡಿದ್ದರು. ಆ ಹೊತ್ತಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಖನಗಾವಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ| ಬೆಳಗಾವಿ ನಗರಕ್ಕೇ ಲಗ್ಗೆ ಇಟ್ಟ ಚಿರತೆ, ಕಾರ್ಮಿಕನ ಮೇಲೆ ದಾಳಿ, ರಸ್ತೆಗಳನ್ನು ಬಂದ್‌ ಮಾಡಿ ಶೋಧ

Exit mobile version