Site icon Vistara News

ಕೌಟುಂಬಿಕ ಕಲಹ: ಮೂರು ಮುದ್ದಾದ ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

mother suicide

ಕಲಬುರಗಿ: ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಯಾತನೆಗಳು ಎಷ್ಟರ ಮಟ್ಟಿಗೆ ಘಾಸಿಗೊಳಿಸಬಹುದು ಎನ್ನುವುದಕ್ಕೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿರುವ ಈ ಭಯಾನಕ ವಿದ್ಯಮಾನವೇ ಸಾಕ್ಷಿ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗ ಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳ ಜತೆಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರೂ ಜನ ಪುಟ್ಟ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಈ ತಾಯಿ ಬಾವಿಗೆ ಹಾರಲು ಕೌಟುಂಬಿಕ ಕಲಹ ಕಾರಣವೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಅಂಬಿಕಾ (೩೮) ಎಂಬ ಮಹಿಳೆ ತಮ್ಮ ಮೂರು ಮಕ್ಕಳನ್ನು ಹಿಡಿದುಕೊಂಡು ಬಾವಿಗೆ ಹಾರಿದವರು. ಗುರುವಾರ ಮುಂಜಾನೆ ಈ ಘಟನೆ ನಡೆದಿದೆ. ರಾತ್ರಿ ಹೊತ್ತು ಮನೆಯಲ್ಲಿ ಏನೋ ಮಾತುಕತೆಗಳು ನಡೆದು ಅಂತಿಮವಾಗಿ ಇಂಥ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾರೆಯೇ ಎಂಬ ಸಂಶಯವಿದೆ. ೮ ವರ್ಷದ ಮಗ ದಯಾನಂದ, ಆರು ವರ್ಷದ ಮಗಳು ಶಿವಲೀಲಾ ಮತ್ತು ಇನ್ನೊಬ್ಬ ಮಗಳು ಸೃಷ್ಟಿ ತಾಯಿಯ ಜತೆ ಬಾವಿಗೆ ಬಿದ್ದವರು.

ನಿಜವೆಂದರೆ, ಅಂಬಿಕಾ ಮತ್ತು ಮೂವರು ಮಕ್ಕಳು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್‌ ಗ್ರಾಮದ ತವರು ಮನೆಯಲ್ಲಿ ವಾಸವಾಗಿದ್ದರು. ಬುಧವಾರವಷ್ಟೇ ಅಳಂದ ತಾಲೂಕಿನ ಹಿಪ್ಪರಗಿ ಗ್ರಾಮಕ್ಕೆ ಬಂದಿದ್ದರು. ಆಸ್ತಿ ಮಾರಾಟದ ತಕರಾರು ಬಂದ ಹಿನ್ನೆಲೆಯಲ್ಲಿ ಮನೆಯಲ್ಲಿ ಜಗಳವಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಆಗಮಿಸಿ ಬಾವಿಯಿಂದ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಮಾದನಹಿಪ್ಪರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide case | ಜನ್ಮದಿನವೇ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ಉಪನ್ಯಾಸಕಿ

Exit mobile version