Site icon Vistara News

Student Murder | ಹದಲಿಯ ಅತಿಥಿ ಶಿಕ್ಷಕನ ಅಟ್ಟಹಾಸ: ಬಾಲಕನ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಸಾವು

hadali murder

ಗದಗ: ಅತಿಥಿ ಶಿಕ್ಷಕನೊಬ್ಬನ ಅಮಾನುಷ ಕ್ರೌರ್ಯಕ್ಕೆ ನರಗುಂದ ತಾಲೂಕಿನ ಹದಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿ (Student Murder) ಭರತ್‌ (೧೦) ಬಲಿಯಾದ ಬೆನ್ನಲ್ಲೇ, ಅಂದು ಅದೇ ಶಿಕ್ಷಕನಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ಆ ಹುಡುಗನ ತಾಯಿ, ಶಾಲೆಯ ಅತಿಥಿ ಶಿಕ್ಷಕಿ ಗೀತಾ ಬಾರಕೇರ್‌ ಕೂಡಾ ಕೊನೆಯುಸಿರೆಳೆದಿದ್ದಾರೆ. ಹೀಗೆ ಅತಿಥಿ ಶಿಕ್ಷಕನ ಮುತ್ತಪ್ಪ ಹಡಗಲಿಯ ಕಾಮಾಲೆ ಮನಸು ತಾಯಿ ಮತ್ತು ಮಗನನ್ನು ಬಲಿ ಪಡೆದಂತಾಗಿದೆ.

ಕಳೆದ ಡಿಸೆಂಬರ್‌ ೧೯ರಂದು ನರಗುಂದ ತಾಲೂಕಿನ ಹದಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಭರತ್‌ ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದ. ಭಯಗೊಂಡ ಬಾಲಕ ಪಕ್ಕದ ತರಗತಿಯಲ್ಲಿದ್ದ, ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಗೀತಾ ಬಾರಕೇರಿ ಬಳಿಗೆ ಓಡಿದ್ದ. ಗೀತಾ ಬಾರಕೇರಿ ಅವರು ಯಾಕೆ ಹೊಡೆಯುತ್ತಿದ್ದೀರಿ ಎಂದು ಕೇಳುತ್ತಿದ್ದಂತೆಯೇ ಮುತ್ತಪ್ಪ ಹಡಗಲಿ ಆಕೆಯ ತಲೆಗೂ ಸಲಾಕೆಯಿಂದ ಹೊಡೆದಿದ್ದ. ಮಾತ್ರವಲ್ಲ ಬಾಲಕನನ್ನು ಮತ್ತೆ ಎಳೆದುಕೊಂಡು ಬಂದು ಇನ್ನೊಂದು ಕಟ್ಟಡದ ಕೆಳ ಜಗಲಿಗೆ ಎತ್ತಿ ಎಸೆದಿದ್ದ. ಈ ವೇಳೆ ಬಾಲಕನ ತಲೆ ಕಲ್ಲಿಗೆ ಬಡಿದು ರಕ್ತ ಧಾರೆಯಾಗಿ ಹರಿದಿತ್ತು.

ಕೂಡಲೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟು ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ನಡುವೆ, ಮುತ್ತಪ್ಪ ಹಡಗಲಿ ಕಣ್ಮರೆಯಾಗಿದ್ದ. ಈ ನಡುವೆ ಗಾಯಗೊಂಡಿದ್ದ ಗೀತಾ ಬಾರಕೇರಿ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮುತ್ತಪ್ಪ ಹಡಗಲಿ ಇವರಿಬ್ಬರ ಜತೆಗೆ ಸಹ ಶಿಕ್ಷಕರಾಗಿರುವ ಸಂಗನಗೌಡ ಅವರ ಮೇಲೂ ಹಲ್ಲೆ ನಡೆಸಿದ್ದ. ಮುತ್ತಪ್ಪನನ್ನು ನರಗುಂದ ಪಕ್ಕದ ರೋಣ ಕ್ರಾಸಿನಲ್ಲಿ ಬಳಿಕ ಬಂಧಿಸಲಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು
ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೀತಾ ಬಾರಕೇರಿ ಅವರಿಗೆ ತಲೆಗೆ ತೀವ್ರ ಏಟು ಬಿದ್ದಿತ್ತು. ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಆಗಲೇ ಹೇಳಲಾಗುತ್ತಿತ್ತು. ಇದೀಗ ಮೂರು ದಿನಗಳ ಚಿಕಿತ್ಸೆಯ ನಂತರವೂ ಅವರು ಚೇತತಿಸಿಕೊಂಡಿಲ್ಲ. ಗುರುವಾರ ಅವರ ಉಸಿರು ನಿಂತಿದೆ ಎಂದು ಆಸ್ಪತ್ರೆ ಸಿಬ್ಬಂದಿ ಪ್ರಕಟಿಸಿದರು.

ಪೊಸೆಸಿವ್‌ನೆಸ್‌ನಿಂದಾಗಿ ಪ್ರಾಣವನ್ನೇ ತೆಗೆದ ಕ್ರೂರಿ
ಬಾಲಕನ ತಾಯಿ ಗೀತಾ ಬಾರಕೇರಿ ಮತ್ತು ಮುತ್ತಪ್ಪ ಹಡಗಲಿ ಜತೆಯಾಗಿ ಅತಿಥಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ್ದರು. ಗೀತಾ ಅವರಿಗೆ ಕೆಲಸ ಸಿಗಲು ಮುತ್ತಪ್ಪನೂ ನೆರವು ನೀಡಿದ್ದ ಎನ್ನಲಾಗಿದೆ. ಹಾಗಾಗಿ ಅವರಿಬ್ಬರ ನಡುವೆ ಸ್ನೇಹ, ಆತ್ಮೀಯತೆ ಇತ್ತು.

ಈ ನಡುವೆ, ಎರಡು ದಿನದ ಹಿಂದೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರವಾಸ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಹ ಶಿಕ್ಷಕ ಸಂಗನ ಗೌಡ ಮತ್ತು ಶಿಕ್ಷಕಿ ಗೀತಾ ಆತ್ಮೀಯತೆಯಿಂದ ಮಾತನಾಡಿದ್ದರು ಎಂಬುದನ್ನೇ ತಲೆಗೆ ಹಚ್ಚಿಕೊಂಡು, ಹೊಟ್ಟೆಕಿಚ್ಚುಪಟ್ಟುಕೊಂಡು ಆಕ್ರೋಶದಿಂದ ಕುದಿಯುತ್ತಿದ್ದ ಎನ್ನಲಾಗಿದೆ.

ತಾನು ಕೆಲಸ ಕೊಡಿಸಿದ್ದು, ತಾನು ಬೆಂಬಲವಾಗಿ ನಿಂತಿರುವುದು, ಹೀಗಿರುವಾಗ ಅವನ ಜತೆಗೆ ಏನು ಸಲುಗೆ ಎಂಬ ಪೊಸೆಸಿವ್‌ನೆಸ್‌ಗೆ ಒಳಗಾದ ಮುತ್ತಪ್ಪ ಇಬ್ಬರಿಗೂ ಬುದ್ಧಿ ಕಲಿಸಲು ಮುಂದಾಗಿದ್ದ. ಈ ಆಕ್ರೋಶದ ಫಲವೇ ಭರತ್‌ನಿಗೆ ಹೊಡೆದದ್ದು ಎನ್ನಲಾಗಿದೆ. ಆದರೆ, ಬುದ್ಧಿ ಸ್ಥಿಮಿತವನ್ನೇ ಕಳೆದುಕೊಂಡು ರಾಕ್ಷಸನೇ ಆದ ಆತ ಬಾಲಕನನ್ನು ಕೊಂದೇ ಬಿಟ್ಟಿದ್ದಾನೆ. ಪ್ರವಾಸದ ವೇಳೆ ಗೀತಾ ಮತ್ತು ಸಂಗನಗೌಡ ಆತ್ಮೀಯತೆಯಿಂದ ಇದ್ದರು, ಅದನ್ನು ನೋಡಲು ಆಗಲಿಲ್ಲ ಎಂದು ಮತ್ತಪ್ಪ ಬಾಯಿ ಬಿಟ್ಟಿದ್ದಾನೆ. ಈಗ ಈ ಕ್ರೂರಿ ತಾಯಿ ಮತ್ತು ಮಗ ಇಬ್ಬರ ಪ್ರಾಣವನ್ನೂ ತೆಗೆದಂತಾಗಿದೆ.

ಇದನ್ನೂ ಓದಿ | ದಶಮುಖ ಅಂಕಣ | ಮರೆಯಲಿ ಹ್ಯಾಂಗ- ಅಂದಿನ ಆ ಸೊಬಗ?

Exit mobile version