ಬೆಂಗಳೂರು: ಎರಡು ಮಕ್ಕಳ ತಾಯಿಯೊಬ್ಬಳು ಯುವತಿಯಂತೆ ನಟಿಸಿ, ಫೋನ್ ಮೂಲಕ ಮರುಳು ಮಾಡಿ ಟೆಕ್ಕಿಯೊಬ್ಬನಿಗೆ ೪೦ ಲಕ್ಷ ರೂ. ವಂಚಿಸಿದ್ದಾಳೆ! ಹಣ ಕಳೆದುಕೊಂಡ ಯುವಕ ಈಗ ಪೂರ್ವ ಸೆನ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಈ ಮಹಿಳೆ ತಾನೊಬ್ಬಳು ಇನ್ನೂ ೧೮-೨೦ ವರ್ಷದ ಯುವತಿಯೆಂಬಂತೆ ಟೆಕ್ಕಿ ಜತೆ ನಟಿಸಿದ್ದಾಳೆ. ಕಳೆದ ಒಂದು ವರ್ಷದಿಂದ ಅವರಿಬ್ಬರು ಆತ್ಮೀಯವಾಗಿ ಹರಟಿಕೊಂಡಿದ್ದರು. ಯುವಕ ಕೂಡಾ ಆಕೆಯ ಧ್ಯಾನದಲ್ಲೇ ಮೈಮರೆತಿದ್ದ.
ಈ ನಡುವೆ, ಏನೇನೋ ಕರುಣಾಜನಕ ಕಥೆಗಳನ್ನು ಹೇಳಿ ತನಗೆ ಹಣದ ಅವಶ್ಯಕತೆ ಇದೆ ಎಂದು ಆತನ ತಲೆ ತುಂಬಿದ್ದಳು. ಯುವಕನೂ ಆಕೆಯ ಮಾತುಗಳನ್ನು ನಂಬಿ ಹಲವಾರು ಬಾರಿ ಹಣ ಕೊಟ್ಟಿದ್ದ. ಮೊದಲು ನೇರವಾಗಿ ಫೋನ್ ಪೇ ಮೂಲಕ ಹಣ ಪಾವತಿ ಮಾಡುತ್ತಿದ್ದ ಯುವಕ ಬಳಿಕ ಕ್ರೆಡಿಟ್ ಕಾರ್ಡ್‌ನಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದ.
ಈ ನಡುವೆ, ಕೊಟ್ಟ ಹಣ ಸುಮಾರು ೪೦ ಲಕ್ಷ ರೂ. ದಾಟಿದೆ. ಈ ಹಂತದಲ್ಲಿ ಆಕೆಯ ಆನ್‌ಲೈನ್ ಖಾತೆ, ಸಾಮಾಜಿಕ ಜಾಲತಾಣಗಳೆಲ್ಲ ಸ್ತಬ್ಧವಾದವು. ಈಗ ಯುವಕನಿಗೆ ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾಗಿದೆ. ಆಗ ಯುವಕ ಆಕೆಯನ್ನು ಸಂಪರ್ಕ ಮಾಡುವ ಪ್ರಯತ್ನ ನಡೆಸಿದ್ದಾನೆ. ಆದರೆ, ಆಕೆ ಎಲ್ಲೂ ಸಿಕ್ಕಿಲ್ಲ. ಕೊನೆಗೆ ಸೈಬರ್ ಅಪರಾಧಗಳ ತನಿಖಾ ಠಾಣೆಗೆ ದೂರು ನೀಡಿದ್ದಾನೆ.
ಎಲ್ಲಿದ್ದಾಳೆ ಈ ಮಹಿಳೆ?
ಸಾಮಾಜಿಕ ಜಾಲತಾಣದ ಮೂಲಕವೇ ಯುವಕನ ಜತೆ ಸಂಪರ್ಕ ಹೊಂದಿದ್ದ ಮಹಿಳೆ ನೇರ ಫೋನ್ ಸಂಪರ್ಕಕ್ಕೆ ಬಂದಿಲ್ಲ. ಹೀಗಾಗಿ ಆನ್‌ಲೈನ್ ಅಕೌಂಟ್‌ಗಳನ್ನೆಲ್ಲ ಬಂದ್ ಮಾಡಿದ್ದ ಆಕೆಯನ್ನು ಪತ್ತೆ ಹಚ್ಚುವ ಪ್ರಯತ್ನ ಸುಲಭವಾಗಿರಲಿಲ್ಲ. ಈ ನಡುವೆ ಆಕೆ ನೀಡಿದ ಒಂದು ಇ-ಮೇಲ್ ಐಡಿಯಿಂದ ಆಕೆಯ ಮಾಹಿತಿ ಪತ್ತೆಯಾಗಿದೆ. ಆಕೆ ಆಂಧ್ರದ ವಿಳಾಸದಲ್ಲಿರುವುದು ಬೆಳಕಿಗೆ ಬಂದಿದೆ. ಅವಳ ವಿಳಾಸವನ್ನು ಪತ್ತೆ ಹಚ್ಚಿದಾಗ ಆಕೆಗೆ ಎರಡು ಮಕ್ಕಳಿರುವುದು ಪತ್ತೆಯಾಗಿದೆ. ಈಗ ಆಕೆಯ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ| ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಿಎ ಎಂದು ಹೇಳಿಕೊಂಡು ವಂಚನೆ !