Site icon Vistara News

Blast in Bangalore: ಯುವಕನ ಪ್ರಾಣ ಉಳಿಸಿದ ತಾಯಿಯ ಕರೆ; ರಾಮೇಶ್ವರಂ ಕೆಫೆ ಸ್ಫೋಟದ ಕರಾಳ ಅನುಭವ ಬಿಚ್ಚಿಟ್ಟ ಟೆಕ್ಕಿ

Alankrith

ಬೆಂಗಳೂರು: ನಗರದ ವೈಟ್‌ಫೀಲ್ಡ್‌ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟದಲ್ಲಿ (Blast in Bangalore) 9 ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಘಟನೆ ಸಂದರ್ಭದಲ್ಲಿ ಯುವಕನೊಬ್ಬ ತನ್ನ ತಾಯಿಯ ಮೊಬೈಲ್‌ ಕರೆಯಿಂದ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿರುವುದು ಕಂಡುಬಂದಿದೆ.

ಬಿಹಾರದ ಪಾಟ್ನಾ ಮೂಲದ 24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ ಕುಮಾರ್ ಅಲಂಕೃತ್ ಅಪಾಯದಿಂದ ಪಾರಾದ ಯುವಕ. ಈತ ಶುಕ್ರವಾರ ಮಧ್ಯಾಹ್ನ ಎಂದಿನಂತೆ ರಾಮೇಶ್ವರಂ ಕೆಫೆಗೆ ಊಟಕ್ಕೆ ಹೋಗಿದ್ದ. ಎಂದಿನಂತೆ ದೋಸೆ ತೆಗೆದುಕೊಂಡು ಇನ್ನೇನು ತಿನ್ನಲು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಆತನ ಮೊಬೈಲ್‌ಗೆ ತಾಯಿ ಕರೆ ಮಾಡಿದ್ದಾರೆ. ಹೀಗಾಗಿ ತಾಯಿಯೊಂದಿಗೆ ಮಾತನಾಡಲು ಯುವಕ, ಅಲ್ಲಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಪ್ರಶಾಂತವಾದ ಪ್ರದೇಶಕ್ಕೆ ಹೋಗಿದ್ದಾನೆ. ಅಷ್ಟರಲ್ಲೇ ಆತ ಕುಳಿತು ಊಟ ಮಾಡಬೇಕೆಂದುಕೊಂಡಿದ್ದ ಜಾಗದಲ್ಲೇ ಸ್ಫೋಟ ಸಂಭವಿಸಿದೆ. ಹೀಗಾಗಿ ಯುವಕ ಅಪಾಯದಿಂದ ಪಾರಾಗಿದ್ದಾನೆ.

ಈ ಬಗ್ಗೆ ಅಲಂಕೃತ್ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್‌ ಮಾಡಿದ್ದು, ತಮಗಾದ ಕರಾಳ ಅನುಭವವನ್ನು ಮತ್ತು ತನ್ನ ಜೀವ ಉಳಿಸಿದ ತಾಯಿ ಕರೆಯನ್ನು ನೆನಪಿಸಿಕೊಂಡಿದ್ದಾರೆ. ಟ್ವೀಟ್‌ನಲ್ಲಿ ಅಮ್ಮನೇ ದೇವರು ಎಂದು ಬರೆದುಕೊಂಡಿರುವ ಯುವಕ, ಆ ಒಂದು ಕರೆ ಬಾರದೇ ಹೋಗಿದ್ದರೆ ಇಂದು ಹೇಗೆ ಬದುಕುಳಿದೆ ಎಂದು ಸುದ್ದಿಯಾಗಿರುವ ಅಲಂಕೃತ್, ಬೇರೆಯೇ ರೀತಿಯಲ್ಲಿ ಸುದ್ದಿಯಾಗಿರುತ್ತಿದ್ದರು ಎಂದು ತಿಳಿಸಿದ್ದಾರೆ.

ಎಂದಿನಂತೆ ನನ್ನ ತಾಯಿ ನಾನು ಎಲ್ಲಿದ್ದೇನೆ ಮತ್ತು ಹೇಗಿದ್ದೇನೆ.. ಏನು ಮಾಡುತ್ತಿದ್ದೇನೆ ಎಂದು ಮಾತನಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ, ನಾನು ದೊಡ್ಡ ಶಬ್ದವನ್ನು ಕೇಳಿದೆ, ಅದು ದೊಡ್ಡ ಸ್ಫೋಟವಾಗಿತ್ತು. ಎಲ್ಲರೂ ಭಯಭೀತರಾಗಿ ಹೋಟೆಲ್‌ನಿಂದ ಹೊರಗೆ ಓಡಿಹೋದರು. ಕೆಲವರಿಗೆ ಸುಟ್ಟ ಗಾಯಗಳಾಗಿ, ಕೆಲವರ ಕಿವಿ ಮತ್ತು ತಲೆಯಿಂದ ರಕ್ತಸ್ರಾವವಾಗುತ್ತಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ | Blast in Bengaluru : ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಟೋಪಿವಾಲಾ 50 ಗಂಟೆ ಕಳೆದರೂ ಸಿಕ್ಕಿಲ್ಲ!

Exit mobile version