Site icon Vistara News

BN Bacchegowda : ನಿವೃತ್ತಿ ಘೋಷಣೆ ಮರುದಿನವೇ ಸಿದ್ದರಾಮಯ್ಯ ಭೇಟಿ ಮಾಡಿದ ಸಂಸದ ಬಚ್ಚೇಗೌಡ; ಮುಂದಿನ ನಡೆ ಏನು?

BN Bacchegowda meets CM Siddaramaiah

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ (Chikkaballapura BJP MP), ಅದಕ್ಕೂ ಮೊದಲು ಐದು ಬಾರಿ ಶಾಸಕರಾಗಿದ್ದ ಹಿರಿಯ ನಾಯಕ ಬಿ.ಎನ್‌ ಬಚ್ಚೇಗೌಡ (BN Bacchegowda) ಮಂಗಳವಾರ ರಾಜಕೀಯ ನಿವೃತ್ತಿ (Political retirement) ಘೋಷಿಸಿ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಹೊಗಳಿದ್ದ ಬೆನ್ನಲ್ಲೇ ಬುಧವಾರ (ಆಗಸ್ಟ್‌ 23) ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇವರ ಈ ಭೇಟಿ ರಾಜ್ಯ ರಾಜಕೀಯದಲ್ಲಿ (Karnataka Politics) ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಕೆಲವು ಕಾಲ ಚರ್ಚೆ ನಡೆಸಿದರು. ಮಂಗಳವಾರ ರಾಜಕೀಯ ನಿವೃತ್ತಿ ಘೋಷಣೆ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈಗ ಸಿಎಂ ಭೇಟಿ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಮಾತುಗಳು ಚಾಲ್ತಿಯಲ್ಲಿವೆ.

ಇದನ್ನೂ ಓದಿ: Cauvery water dispute : ಕರ್ನಾಟಕದ ಜಲ ಸಂಕಷ್ಟಕ್ಕೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಸಹಕಾರ ಕೋರಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ವಿರುದ್ಧ ಗುಡಿಗಿದ್ದ ಬಚ್ಚೇಗೌಡ; ಮೋದಿ ಹೆಸರೂ ಉಲ್ಲೇಖ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಕಾರ 75 ವರ್ಷಕ್ಕೆ ನಿವೃತ್ತಿ ಘೋಷಣೆ ಮಾಡಿಕೊಳ್ಳಬೇಕು. ಈಗ ನನಗೆ 81 ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ ಆಚರಣೆ ಮಾಡಿಕೊಂಡಿದ್ದೇನೆ. ಮೋದಿ ಅವರು ನನಗೆ ಪಕ್ಷದಲ್ಲಿ ಟಿಕೆಟ್ ಕೋಡೋದಿಲ್ಲ ಅಂತ ಹೇಳಿಬಿಟ್ಟಿದ್ದಾರೆ. ಟಿಕೆಟ್ ಕೊಡೋದಿಲ್ಲ ಅಂತ ಸೀರಿಯಸ್ಸಾಗಿ ಹೇಳಿಬಿಟ್ಟಿದ್ದಾರೆ. ಒನ್ ಫ್ಯಾಮಿಲಿ ಒನ್ ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ, ಮಗ, ಮಗಳು, ಮೊಮ್ಮಗ ರಾಜಕಾರಣಕ್ಕೆ ಬರುವಂತಿಲ್ಲ ಎಂದಿದ್ದಾರೆ. ಹೀಗಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆʼʼ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ.ಎನ್ ಬಚ್ಚೇಗೌಡ ಹೇಳಿದ್ದರು.

ತಮ್ಮನ್ನು ಬಳಸಿಕೊಂಡಿಲ್ಲ ಎಂದು ಅಸಮಾಧಾನ

ಬಿಜೆಪಿಯಲ್ಲಿ ನನ್ನನ್ನು ಯಾರೂ ಕ್ಯಾರೇ ಅನ್ನುತ್ತಿಲ್ಲ. ʻಈ ಹಿಂದೆ ಇದ್ದ ಎರಡೂ ಜಿಲ್ಲೆ ಉಸ್ತುವಾರಿ ಸಚಿವರು ನನ್ನನ್ನು ಕಡೆಗಣಿಸಿದ್ದರು. ಡಾ. ಕೆ. ಸುಧಾಕರ್‌ ಅವರು ಸುಧಾಕರ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿಯಾಗಿ ಬಂದರು. ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ ಉಸ್ತುವಾರಿಯಾಗಿ ಬಂದರು. ಇಬ್ಬರು ಉಸ್ತುವಾರಿ ಸಚಿವರು ನನ್ನ ಏನಕ್ಕೂ ಬಳಸಿಕೊಳ್ಳಲಿಲ್ಲ. ಯಾವುದೇ ಪತ್ರಿಕೆಯಲ್ಲಿ ನನ್ನ ಹೆಸರು ಇರುತ್ತಿರಲಿಲ್ಲ. ಸರ್ಕಾರದಿಂದ ಪ್ರೋಟೋಕಾಲ್ ಪ್ರಕಾರ ನನಗೆ ಆಹ್ವಾನ ಬರುತ್ತಾ ಇತ್ತು. ಅದು ಬಿಟ್ಟು ಪಕ್ಷದಿಂದ ಯಾರೂ ನನ್ನನ್ನು ಬಳಸಿಕೊಂಡಿಲ್ಲ. ಏನಪ್ಪಾ ಎಂದು ವಿಚಾರಿಸಿಲ್ಲ. ಮಾತನಾಡಿಲ್ಲʼʼ ಎಂದು ಬೇಸರ ತೋಡಿಕೊಂಡರು. ನಾನು ಲೋಕಸಭೆ ಸದನಕ್ಕೆ ಹೋಗುತ್ತಿದ್ದೆ, ಬರುತ್ತಿದ್ದೆ ಅಷ್ಟೆ ಎಂದು ಬಿ.ಎನ್ ಬಚ್ಚೇಗೌಡ ಬಿಜೆಪಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದರು.

ಬಿಜೆಪಿಗೆ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ

ಚುನಾವಣೆ ಕಳೆದು ಇಷ್ಟು ಸಮಯವಾಯಿತು. ಇನ್ನೂ ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಲು ಆಗಿಲ್ಲ. ಮೂರು ತಿಂಗಳು ಕಳೆದು ನಾಲ್ಕನೇ ತಿಂಗಳಾಗುತ್ತಾ ಇದೆ. ಪ್ರತಿ ಪಕ್ಷದ ನಾಯಕನನ್ನು ಮಾಡಲಿಕ್ಕೆ ಆಗಲಿಲ್ಲ. ಇದರಿಂದ ಬಿಜೆಪಿ ಭಾರಿ ಹಿನ್ನಡೆ ಆಗಿದೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಆಗ್ತಿಲ್ಲ. ಬಾಂಬೇ ಬಾಯ್ಸ್ ಬಿಜೆಪಿಯಲ್ಲಿ ಇರೋದು ಕಾರ್ಯಕರ್ತರಿಗೆ ಇಷ್ಟವಿಲ್ಲ. ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ವಿಷಯದಲ್ಲಿ ಇದೇ ಆಗಿದೆ. ಕಾರ್ಯಕರ್ತರೇ ವಿರುದ್ಧವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜೆಡಿಎಸ್‌, ಬಿಜೆಪಿಯವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಹೇಳಿದ್ದರು.

ದೇವೇಗೌಡರು ಇರೋವರೆಗೆ ಕುಮಾರಸ್ವಾಮಿ ಬಿಜೆಪಿಗೆ ಹೋಗೊಲ್ಲ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಹೋಗಲ್ಲ. ಅವರಪ್ಪ (ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ) ಇರುವವರೆಗೂ ಬಿಜೆಪಿ ಸೇರೋದಿಲ್ಲ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿವೆ, ಒಂದು ಪ್ರಾದೇಶಿಕ ಪಕ್ಷ ಇದೆ. ಜೆಡಿಎಸ್ ರಾಜ್ಯದಲ್ಲಿ ಉಳಿದುಕೊಳ್ಳುತ್ತದೆ. ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಆಗೋದು ಪಕ್ಕಾ. ದೇವೇಗೌಡರು ಇರುವವರೆಗೂ ಜೆಡಿಎಸ್‌ ಪಕ್ಷ ಉಳಿಯುತ್ತದೆ ಎಂದು ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡ ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ: Zameer Ahmed : ಆರ್ಥಿಕ ಸಂಕಷ್ಟದಲ್ಲಿದ್ದ ಅಂತಾರಾಷ್ಟ್ರೀಯ ಕರಾಟೆಪಟು; ಸಚಿವ ಜಮೀರ್‌ರಿಂದ ಬಾಲಕನಿಗೆ ಸ್ವಂತ ದುಡ್ಡಲ್ಲಿ ಏರ್‌ ಟಿಕೆಟ್‌!

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಬಚ್ಚೇಗೌಡ

ಈ ವೇಳೆ ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ, ʻಐದು ಗ್ಯಾರಂಟಿಗಳನ್ನು ಚಾಕಚಕ್ಯತೆಯಿಂದ ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಇದನ್ನೆಲ್ಲ ಜಾರಿಗೆ ತರುವಂಥ ಬುದ್ಧಿವಂತಿಕೆ ಇದೆ‌. ಸಿದ್ದರಾಮಯ್ಯ ಬಹಳ ಸಾರಿ ಚುನಾಯಿತರಾಗಿ ಬಂದಿದ್ದಾರೆ. ಅವರಿಗೆ ಬಹಳ ವರ್ಷ ವಿತ್ತ ಸಚಿವರಾಗಿರುವ ಅನುಭವ ಇದೆ. ಐದು ಗ್ಯಾರಂಟಿಗಳನ್ನು ಸಿದ್ದರಾಮಯ್ಯ ಜಾರಿ ಮಾಡುತ್ತಾರೆ ಎಂದು ಹಾಡಿಹೊಗಳಿದ್ದರು. ಈಗ ಅವರನ್ನು ಭೇಟಿಯಾಗಿರುವುದರ ಹಿಂದೆ ಕಾಂಗ್ರೆಸ್‌ ಸೇರ್ಪಡೆಯ ಗುಮಾನಿ ಹುಟ್ಟಿಕೊಂಡಿದೆ.

Exit mobile version