ಬೆಂಗಳೂರು: ಬಿಜೆಪಿ ಸರ್ಕಾರದ ಹೊಲು ರಾಜಕಾರಣವನ್ನು ನೋಡಿದ ನಂತರ, ರಾಜಕೀಯದ ಮೇಲಿನ ಆಸಕ್ತಿಯೇ ಇಲ್ಲವಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಸುರೇಶ್, ರಾಜಕಾರಣದ ಬಗ್ಗೆನೇ ನನಗೆ ಆಸಕ್ತಿ ಇಲ್ಲ. ಈ ಹೊಲಸು ಬಿಜೆಪಿ ಸರ್ಕಾರದ ಆಡಳಿತ ನೋಡಿದ ಮೇಲೆ ಭ್ರಮೆ ಬಂದಿದೆ. ಏನಪ್ಪ ಇದು ಇಂತಹ ಹೊಲಸು ವ್ಯವಸ್ಥೆ ಬಂದು ಬಿಟ್ಟಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಕಮಿಷನ್ ಕೊಟ್ಟು ಗ್ರ್ಯಾಂಟ್ ತರೋದು ನೋಡಿದ್ರೆ ಅಸಹ್ಯ ಅನಿಸುತ್ತೆ. ಕಾಂಗ್ರೆಸ್ – ದಳದವರು ವಿಪಕ್ಷದವರು ಹಾಗಾಗಿ ಅನುದಾನಕ್ಕೆ ಸರ್ಕಸ್ ಮಾಡ್ತಾರೆ. ಅಡಳಿತ ಪಕ್ಷದ ಶಾಸಕರೆ ಕಮಿಷನ್ ಕೊಟ್ಟು ತರುತ್ತಾರೆ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ರಾಜಕಾರಣ ಮಾಡಬೇಕು ಅನಿಸುತ್ತಾ, ಬೇಡ ಅನಿಸುತ್ತಾ ನೀವೆ ಹೇಳಿ ಎಂದು ಮರುಪ್ರಶ್ನೆ ಹಾಕಿದರು.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. ಜಾತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತದೆ. ಆ ಭಾಗದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಅಸ್ತಿತ್ವಕ್ಕಾಗಿ ಏನಾದರೂ ಹುಟ್ಟುಹಾಕಬೇಕಲ್ಲ? ಅಲ್ಲಿ ಎಲ್ಲೋ ರಾಮನ ಹುಟ್ಟು ಹಾಕಿದ್ರು, ಇನ್ನೊಂದು ಕಡೆ ಆಂಜನೇಯನ ಹುಟ್ಟು ಹಾಕಿದ್ರು. ಇನ್ನೆಲ್ಲೊ ಕೃಷ್ಣ ಬೆಟ್ಟ ಹುಟ್ಟು ಹಾಕಿದ್ರು, ಎಲ್ಲಾ ತಾಲೂಕಿನಲ್ಲೂ ರಾಮದೇವರ ಬೆಟ್ಟ ಇದೆ. ಎಲ್ಲಾ ಕಡೆನೂ ಪ್ರತಿಮೆ ಮಾಡ್ತಾರಾ? ಇದು ಚುನಾವಣಾ ಗಿಮಿಕ್ ಬಿಟ್ರೆ ಬೇರೆನೂ ಇಲ್ಲ ಎಂದು ಪರೋಕ್ಷವಾಗಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಅಶ್ವತ್ಥನಾರಾಯಣ ಅಸ್ವಸ್ಥರಾದಾಗ ಉರಿಗೌಡ, ನಂಜೇಗೌಡ ಸಿಕ್ಕಿರಬೇಕು: ಡಿ.ಕೆ. ಸುರೇಶ್ ವ್ಯಂಗ್ಯ