ಬೆಂಗಳೂರು: ವಿವಿಧ ಪಕ್ಷಗಳಲ್ಲಿ ವಿಧಾನಸಭಾ ಚುನಾವಣೆ ಟಿಕೆಟ್ (Karnataka Election) ಸಿಗದ ಅತೃಪ್ತರು ಪಕ್ಷಾಂತರಗೊಳ್ಳುತ್ತಿದ್ದಾರೆ. ಈ ನಡುವೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಚಿತ್ರದುರ್ಗದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಶಹಾಪುರದ ಮಾಜಿ ಶಾಸಕರಾದ ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಸೇರಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅನೇಕ ನಾಯಕರು ಶುಕ್ರವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೆಡಿಎಸ್ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ವೇಳೆ ಕಾರವಾರದ ಚೈತ್ರ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಪುತ್ತೂರಿನ ದಿವ್ಯಾ ಪುತ್ತೂರು, ದಿವ್ಯಪ್ರಭಾ ಗೌಡ, ಸಲಾಂ ವಿಟ್ಲ ಸೇರಿದಂತೆ ನೂರಾರು ಪ್ರಮುಖ ನಾಯಕರು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ | BJP Karnataka: ಬಿ.ಎಲ್. ಸಂತೋಷ್ ಬಗ್ಗೆ ಗೌರವವಿದೆ ಎಂದ ಲಕ್ಷ್ಮಣ ಸವದಿ: ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಜೆಪಿ ಭವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ದಿನದಂದು ದೊಡ್ಡ ಪ್ರಮಾಣದಲ್ಲಿ ನಾಯಕರು ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರಿಂದ ನಮ್ಮ ಪಕ್ಷದ ಶಕ್ತಿ ಏನು ಎಂಬುದು ಎಲ್ಲರಿಗೂ ಮನವರಿಕೆ ಆಗುತ್ತಿದೆ ಎಂದರು.
ವಿಧಾನಸಭಾ ಚುನಾವಣೆಗೆ ಈ ಪಕ್ಷ ಸೇರ್ಪಡೆ ಒಂದು ದಿಕ್ಸೂಚಿಯಾಗಿದೆ. ಕಲಬುರಗಿ, ಕಾರವಾರ, ಮಂಗಳೂರು, ಚಿತ್ರದುರ್ಗ ಜಿಲ್ಲೆಗಳ ನಾಯಕರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮಗೆ ಶಕ್ತಿ ಇಲ್ಲ ಎಂದು ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದರು. ಆ ಭಾಗದಲ್ಲಿ ಕನಿಷ್ಠ 25-30 ಸ್ಥಾನ ಅಲ್ಲಿ ಗೆಲ್ಲುತ್ತೇವೆ ಎಂದು ಹೇಳಲಾಗುತ್ತಿತ್ತು. ಈಗ ನೋಡಿದರೆ 40 ಸ್ಥಾನದ ಮೇಲೆ ಗೆದ್ದರೂ ಆಶ್ಚರ್ಯವಿಲ್ಲ. ಪಕ್ಷವನ್ನು ಸದೃಢ ಮಾಡಲು ಕಾರ್ಯಕರ್ತರು ಶ್ರಮ ಹಾಕಿದ್ದಾರೆ. ಇದರ ಮೂಲಕ ಫಲ ದೊರಕುತ್ತಿದೆ ಎಂದು ಹೇಳಿದರು.
ಇವತ್ತು ಸೇರ್ಪಡೆ ಆದವರನ್ನು ನಾನು ಕಾಂಗ್ರೆಸ್, ಬಿಜೆಪಿಯವರು ಎಂದು ಹೇಳಲ್ಲ. ಏಕೆಂದರೆ, ಅವರೆಲ್ಲಾ ಒಂದಲ್ಲ ಒಂದು ಕಡೆ ಜೆಡಿಎಸ್ ಪರಿವಾರಕ್ಕೆ ಸೇರಿದವರೇ. 2023ಕ್ಕೆ ಜನತಾ ದಳವನ್ನು ಜನ ಬೆಂಬಲಿಸಲಿದ್ದಾರೆ. 123 ಕ್ಷೇತ್ರಗಳ ಗುರಿ ಇಟ್ಟು ಹೊರಾಟ ಮಾಡುತ್ತಿದ್ದೇವೆ. ಇನ್ನೂ ಅನೇಕರು ಪಕ್ಷಕ್ಕೆ ಬರುವವರಿದ್ದಾರೆ ಎಂದವರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಾನು ಮೊದಲೇ ಹೇಳಿದ್ದೇ, ಬೇರೆ ಪಕ್ಷಗಳ ನಾಯಕರು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್ ಪಕ್ಷ ಸೇರುತ್ತರೆಂದು. ಈಗ ಆ ಮಾತು ಸತ್ಯವಾಗಿದೆ ಎಂದರು.
ಇದನ್ನೂ ಓದಿ | Karnataka Elections: ಕೈ ತೊರೆದು ತೆನೆ ಹೊತ್ತ ಚೈತ್ರಾ ಕೊಠಾರಕರ್; ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ
ಈ ಸಂದರ್ಭದಲ್ಲಿ ರಘು ಆಚಾರ್, ದೊಡ್ಡಪ್ಪ ಗೌಡ ಪಾಟೀಲ್, ದೊಡ್ಡಪ್ಪ ಗೌಡ ಪಾಟೀಲ್, ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಸೇರಿದಂತೆ ಪಕ್ಷಕ್ಕೆ ಸೇರಿದ ಎಲ್ಲ ಪ್ರಮುಖ ನಾಯಕರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಎಂಎಲ್‌ಸಿ ಚೌಡರೆಡ್ಡಿ ತೂಪಲ್ಲಿ ಸೇರಿ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆ
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಶುಕ್ರವಾರ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಟಿಕೆಟ್ ಸಿಗದಿದ್ದರಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವದಕ್ಕೆ ರಾಜೀನಾಮೆ ನೀಡಿದ್ದ ಅವರು, ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಹಾಗೂ ಸಿಎಂ ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.