Site icon Vistara News

MP Muniswamy : ಸಚಿವ ಬೈರತಿ, ಶಾಸಕ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಸಂಸದ ಮುನಿಸ್ವಾಮಿ

Kolara MP Muniswamy complaint to governor of Karnataka

ಬೆಂಗಳೂರು: ಕೋಲಾರ ಶಾಸಕ ನಾರಾಯಣಸ್ವಾಮಿ (Kolar MLA Narayanaswamy) ಈಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಜತೆಗೆ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ (Kolar Incharge Minister Byrathi Suresh), ಕೋಲಾರ ಎಸ್‌ಪಿ ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಕೋಲಾರ ಸಂಸದ ಮುನಿಸ್ವಾಮಿ (Kolar MP Muniswamy) ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಹಲ್ಲೆ ಆರೋಪ ಪ್ರಕರಣ ಈಗ ರಾಜ್ಯಪಾಲರ ಅಂಗಳ ತಲುಪಿದೆ. ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧವೂ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ (MLC Chalavadi Narayanaswamy), ಕೇಶವ್ ಪ್ರಸಾದ್ ಸೇರಿದಂತೆ 30 ಮಂದಿ ನಿಯೋಗ ತೆರಳಿ ದೂರು ನೀಡಿದೆ.

ಜನಪ್ರತಿನಿಧಿ ಮೇಲೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.

ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ: ಕೋಲಾರ ಸಂಸದ ಮುನಿಸ್ವಾಮಿ

ಸಂವಿಧಾನದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಅಧಿಕಾರ ಇದೆಯೋ, ವಿಪಕ್ಷಗಳಿಗೂ ಅಷ್ಟೇ ಹಕ್ಕು ಇದೆ. ಇಡೀ ಕೋಲಾರ ಜಿಲ್ಲೆಯಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಅಂತ ಹೇಳಿದ್ದರು. ರೈತರ ಜಮೀನನ್ನು ಕಬಳಿಸುವ ಕೆಲಸ ಮಾಡಿದ್ದಾರೆ. ರೈತರ ವಿರುದ್ಧ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಿದ್ದೀರಿ. ರಾಜಕೀಯ ವೇದಿಕೆ ಮೇಲೂ ಭೂ ಕಳ್ಳರಿದ್ದಾರೆ ಎಂದು ನಾನು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದ್ದಾರೆ

ಎಸ್‌ಎನ್‌ ಸಿಟಿ ಅಂತ ಲೇಔಟ್ ಮಾಡಿದ್ದಾರೆ. ನನ್ನನ್ನೂ ಸೇರಿದಂತೆ, ಎಲ್ಲರ ವಿರುದ್ಧ ತನಿಖೆ ಆಗಲಿ ಅಂತ ಹೇಳಿದೆ. ಆಗ ಕೋಲಾರ ಶಾಸಕ ನಾರಾಯಣಸ್ವಾಮಿ ಹಾಗೂ ಉಸ್ತುವಾರಿ ಸಚಿವರು ನನ್ನನ್ನು ಹೊರಗೆ ದಬ್ಬಿಸುವ ಕೆಲಸ ಮಾಡಿದರು. ಹಾಗಾಗಿ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ವಿರುದ್ಧ ದೂರು ನೀಡಿದ್ದೇನೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

ರೈತರ ಪರವಾಗಿ ಹೋರಾಟ ಮುಂದುವರಿಯಲಿದೆ

ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವಂತೆ ಮನವಿ ಮಾಡಲಿದ್ದೇವೆ. ದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡುತ್ತೇನೆ. ಎಷ್ಟೇ ಗದಾ ಪ್ರಹಾರ ಮಾಡಿದರೂ ನಮ್ಮ ರೈತರ ಪರವಾಗಿ ನನ್ನ ಹೋರಾಟ ನಡೆಯಲಿದೆ ಎಂದು ಸಂಸದ ಮುನಿಸ್ವಾಮಿ ಇದೇ ವೇಳೆ ಹೇಳಿದರು.

Exit mobile version