ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ಕ್ರೆಡಿಟ್ ವಾರ್ ತಾರಕಕ್ಕೇರಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಕೈ ನಾಯಕರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಹೆದ್ದಾರಿಯ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. ಕ್ರೆಡಿಟ್ ವಿಚಾರದಲ್ಲಿ ಸಿದ್ದರಾಮಯ್ಯ, ಡಾ. ಎಚ್.ಸಿ. ಮಹದೇವಪ್ಪ ಇಬ್ಬರಲ್ಲಿ ಯಾರಾದರೊಬ್ಬರು ಬಹಿರಂಗ ಚರ್ಚೆಗೆ ಬರಲಿ. ಮಹದೇವಪ್ಪ ಅವರು ಫ್ರೀಯಾಗಿ ಕುಳಿತಿದ್ದಾರೆ. ಅವರೇ ಚರ್ಚೆಗೆ ಬರಲಿ ಎಂದು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಬೋಟ್ ಮಾಡುವ ಕೆಲಸವನ್ನಷ್ಟೆ ಕಾಂಗ್ರೆಸ್ ಮಾಡಿದೆ. ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳನ್ನು ಸಹಜವಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಅದನ್ನಷ್ಟೇ ಕಾಂಗ್ರೆಸ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು 9500 ಕೋಟಿ ರೂ. ಅನುದಾನ ನೀಡಿದ್ದಾರೆ. ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ ಒಂಬತ್ತೂವರೆ ಪೈಸೆ ಕೊಟ್ಟಿದ್ದಾರಾ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ʻʻಸಿದ್ದರಾಮಯ್ಯ ಅವರಿಗೆ ಡಿಪಿಆರ್ ಮಾಡಲು ಬರುತ್ತಾ? ನ್ಯಾಷನಲ್ ವಿಂಗ್ ಸಿ ಕಾನ್ ಎಂಬ ಸಂಸ್ಥೆ ಮೂಲಕ ಡಿಪಿಆರ್ ಮಾಡಲಾಗುತ್ತದೆ. ಪ್ಯಾಸೆಂಜರ್ ಕಾರ್ ಯೂನಿಟ್ (ಪಿಸಿಯು) 10 ಸಾವಿರಕ್ಕಿಂತಲೂ ಹೆಚ್ಚಾಗಿರುವ ರಸ್ತೆಯನ್ನು ತನ್ನಷ್ಟಕ್ಕೆ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಅದಕ್ಕೆ ಸಿದ್ದರಾಮಯ್ಯ, ಡಾ.ಮಹದೇವಪ್ಪ ಅಗತ್ಯವೇ ಇಲ್ಲ. ಇದು ಬೆಂಗಳೂರು-ಮೈಸೂರು ಹೆದ್ದಾರಿ. ಮೈಸೂರು ತಲುಪುವ ಹೆದ್ದಾರಿ. ಮಧ್ಯದಲ್ಲಿ ಬರುವ ರಾಮನಗರ, ಮಂಡ್ಯ ಜಿಲ್ಲೆಯ ಶಾಸಕರು, ಸಂಸದರಿಗೂ ಶ್ರೇಯಸ್ಸು ಸಲ್ಲುವುದಿಲ್ಲʼʼ ಎಂದು ಹೇಳಿದರು.
ʻʻಮಳೆ ಬಂದು ನೀರು ನಿಂತಾಗ ಡಾಕ್ಟರ್ ಮಹದೇವಪ್ಪ ಬರಲಿಲ್ಲ. ಡಿ.ಕೆ.ಸುರೇಶ್ ಗಲಾಟೆ ಮಾಡಿದಾಗ ಮಹದೇವಪ್ಪ ವೈಜ್ಞಾನಿಕ ಎಂದು ಹೇಳಲಿಲ್ಲ. ಹೆದ್ದಾರಿ ಶ್ರೇಯಸ್ಸು ಯಾರಿಗೂ ಸಲ್ಲಬೇಕಿಲ್ಲ. ಮೋದಿ ಕಾರಣಕ್ಕೆ ನಾನು ಎಂಪಿ ಆಗಿದ್ದೇನೆ, ನಿತಿನ್ ಗಡ್ಕರಿ ಮಂತ್ರಿ ಆಗಿದ್ದಾರೆ. ಇಡೀ ಯೋಜನೆಯ ಶ್ರೇಯಸ್ಸು ಮೋದಿಗೆ ಸಲ್ಲಬೇಕುʼʼ ಎಂದು ಹೇಳಿದರು.
ಸುಮಲತಾ ಸೇರ್ಪಡೆಯಿಂದ ಬಿಜೆಪಿಗೆ ಬಲ ಬರಲಿದೆ
ಅಂಬರೀಶ್ ಅವರಿಗೆ ಅವಮಾನ ಮಾಡಿದರು ಎಂದು ಮಂಡ್ಯ ಜನ ಸುಮಲತಾ ಅವರನ್ನು ಗೆಲ್ಲಿಸಿದರು. ಸುಮಲತಾ ಅವರು ನಮ್ಮ ಪಕ್ಷ ಸೇರುವುದರಿಂದ ನಮ್ಮ ಪಕ್ಷಕ್ಕೆ ದೊಡ್ಡ ಲಾಭವಾಗುತ್ತದೆ. ಸುಮಲತಾ ಅವರ ಜತೆ ಅಂಬರೀಶ್ ಅವರ ಅಭಿಮಾನಿಗಳ ಬೆಂಬಲವೂ ನಮಗೆ ಸಿಗುತ್ತದೆ ಎಂದು ಹೇಳಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ಗಳಿಸಲಿದೆ. ಯಾರು ಏನೇ ಹೇಳಿದರೂ ಜನರು ಬಿಜೆಪಿಗೆ ಮತ ನೀಡಲಿದ್ದಾರೆ. ಹಾಗಾಗಿ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. ಮುಂದೊಂದು ದಿನ ಇಡೀ ಹಳೇ ಮೈಸೂರು ಭಾಗ ಬಿಜೆಪಿ ಮಯವಾಗಲಿದೆ. ಸುಮಲತಾ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | Sumalatha Ambareesh PC: ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನನ್ನ ಬೆಂಬಲ: ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಅಂಬರೀಶ್
ಚಾಲಕರ ನಿರ್ಲಕ್ಷ್ಯದಿಂದಲೇ ಅಪಘಾತಗಳ ಸಂಖ್ಯೆ ಹೆಚ್ಚಳ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಅವರು, ನಾವು ಶಾಲೆಯಲ್ಲಿ ಓದುವಾಗ ಪೌರ ಪ್ರಜ್ಞೆ ಅಂತ ಪಾಠ ಇತ್ತು. ಅದೇ ರೀತಿ ಚಾಲಕರಿಗೂ ಪೌರ ಪ್ರಜ್ಞೆ ಇರಬೇಕು. ಚಾಲಕರ ನಿರ್ಲಕ್ಷ್ಯದಿಂದಲೇ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ.
ʻʻಹೈವೇನಲ್ಲಿ ಎದುರು ಬದುರು ಅಪಘಾತ ಆಗುತ್ತಿಲ್ಲ. ಡಿವೈಡರ್‌ಗೆ ಡಿಕ್ಕಿ ಹೊಡೆಯುತ್ತಿವೆ, ಸೈಡ್ ವಾಲ್‌ಗೆ ಗುದ್ದಿಕೊಂಡು ಪಲ್ಟಿ ಆಗುತ್ತಿವೆ. ಹಳೇ ಸ್ವಿಫ್ಟ್, ಸ್ಯಾಂಟ್ರೋ ಕಾರಿನಲ್ಲಿ 150 ಕಿ.ಮೀ. ಸ್ಪೀಡಲ್ಲಿ ಯಾಕೆ ಹೋಗಬೇಕು? 80 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಇರುವವರು ಎಡಗಡೆಯ ಟ್ರ್ಯಾಕ್‌ನಲ್ಲಿ ಹೋಗಬೇಕು ಏನ್ನುವ ಕಾಮನ್‌ಸೆನ್ಸ್ ಬೇಡವೇ?
ಎಕ್ಸ್‌ಪ್ರೆಸ್ ಹೈವೇನಲ್ಲಿ ಬೈಕ್, ಸ್ಕೂಟರ್‌ಗೆ ಅವಕಾಶ ನೀಡಲು ಸಾಧ್ಯವೇ? ಚಾಲಕರು ಜೋಪಾನವಾಗಿ ಓಡಾಡಬೇಕುʼʼ ಎಂದು ತಿಳಿಸಿದ್ದಾರೆ.