Site icon Vistara News

Ramesh Jigajinagi: ಸಂಸದ ರಮೇಶ್ ಜಿಗಜಿಣಗಿಗೆ ದಿಢೀರ್‌ ಎದೆನೋವು; ಆಸ್ಪತ್ರೆಗೆ ದಾಖಲು

Mp Ramesh Jigajinagi

ಬಾಗಲಕೋಟೆ: ವಿಜಯಪುರ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ನಗರದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ನಗರಕ್ಕೆ ಭಾನುವಾರ ಆಗಮಿಸಿದ್ದ ವೇಳೆ ದಿಢೀರನೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ನವನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದೊಂದು ವಾರದಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಸಂಸದರು ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದ್ದರು. ಸದ್ಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಡಾ. ಸಮೀರ್ ಕುಲಕರ್ಣಿ ಅವರು ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Drought: ರೈತರಿಗೆ ಬರ ಪರಿಹಾರ ಕೊಡದ ಟೋಪಿ ಸಿದ್ದರಾಮಯ್ಯ; ನಾಳೆ ಕೋಲಾರದಲ್ಲಿ ಪ್ರತಿಭಟನೆ ಎಂದ ಅಶೋಕ್‌

ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಜೊತೆಗೂಡಿ ಇವತ್ತು ದೆಹಲಿಗೆ ಸಂಸದ ಜಿಗಜಿಣಗಿ ಅವರು ತೆರಳಬೇಕಿತ್ತು. ಆರೋಗ್ಯ ಸರಿಯಿಲ್ಲದ ಕಾರಣ ಎಲ್ಲಿಗೂ ತೆರಳಬೇಡಿ ಎಂದು ಕುಟುಂಬಸ್ಥರು ತಿಳಿಸಿದ್ದರು. ಆದರೆ, ಸಂಬಂಧಿಕರೊಬ್ಬರ ನಿಶ್ಚಿತಾರ್ಥ ಕಾರ್ಯಕ್ಕೆ ಬಾಗಲಕೋಟೆಗೆ ಬಂದಿದ್ದ ವೇಳೆ, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ; ಎಚ್‌.ಡಿ. ದೇವೇಗೌಡ ಸಂತಾಪ

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ (Gurumatakal) ಜೆಡಿಎಸ್‌ ಮಾಜಿ ಶಾಸಕ ನಾಗನಗೌಡ ಕಂದಕೂರು (79) ಅವರು (Naganagouda Kandkur) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಭಾನುವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಅವರನ್ನು ಯಾದಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಹೃದಯಾಘಾತ (Heart Attack) ಸಂಭವಿಸಿ ನಿಧನರಾಗಿದ್ದಾರೆ.

ಗುರುಮಠಕಲ್‌ನ ಹಾಲಿ ಶಾಸಕ ಶರಣಗೌಡ ಕಂದಕೂರು ಅವರ ತಂದೆಯಾದ ನಾಗನಗೌಡ ಕಂದಕೂರು ಅವರು 2018ರಲ್ಲಿ ಗುರುಮಠಕಲ್ ಕ್ಷೇತ್ರದಿಂದ ಜೆಡಿಎಸ್ (JDS) ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ನಿಧನ ಸುದ್ದಿ ತಿಳಿದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅಭಿಮಾನಿ ಬಳಗ ಆಸ್ಪತ್ರೆಗೆ ಧಾವಿಸಿದೆ.

ನಾಗನಗೌಡ ಕಂದಕೂರು ಅವರ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್‌ನಲ್ಲಿ ಯಾದಗಿರಿ (Yadgiri) ನಗರದ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ಪತಿಯ ಮೃತದೇಹವನ್ನು ಕಂಡು ಪತ್ನಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ತಾಯಿಯ ಸ್ಥಿತಿ ಕಂಡು ಶಾಸಕ ಶರಣಗೌಡ ಕಂದಕೂರು ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸಂತಾಪ

ಗುರುಮಠಕಲ್ ಕ್ಷೇತ್ರದ ಮಾಜಿ ಶಾಸಕ ನಾಗನಗೌಡ ಕಂದಕೂರು ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ. ಗುರುಮಠಕಲ್ ಕ್ಷೇತ್ರದ ಮಾಜಿ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ನಾಗನಗೌಡ ಕಂದಕೂರು ಅವರ ಅಗಲಿಕೆ ನನಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ನಾಗನಗೌಡರು, ದಶಕಗಳಿಂದ ವೈಯಕ್ತಿಕವಾಗಿ ನನಗೆ ಬಹಳ ಆತ್ಮೀಯರಾಗಿದ್ದವರು ಹಾಗೂ ನಮ್ಮ ಕುಟುಂಬದ ಜೊತೆ ಅತ್ಯಂತ ಅತ್ಮೀಯ ಒಡನಾಟವನ್ನು ಹೊಂದಿದ್ದರು. ಮೃತರ ಕುಟುಂಬದವರಷ್ಟೆ ನಾನು ಸಮಾನ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Nitish Kumar: ನಿತೀಶ್‌ ವಿದಾಯದಿಂದ ಇಂಡಿಯಾ ಒಕ್ಕೂಟದ ಮೇಲಾಗುವ ಪರಿಣಾಮಗಳೇನು?

Exit mobile version