Site icon Vistara News

MP Renukacharya : ಬಿಜೆಪಿ ವಿರುದ್ಧ ಮತ್ತೆ ರೇಣುಕಾಚಾರ್ಯ ವಾಗ್ದಾಳಿ; ಇದು ಡಿಕೆಶಿ ಕೊಟ್ಟ ಟಾಸ್ಕಾ?

DK Shivakumar MP Renukacharya

ಬೆಂಗಳೂರು: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರು ಶನಿವಾರ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಪದೇಪದೇ ಈ ರೀತಿ ಮಾತನಾಡುತ್ತಿರುವುದು ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ನೀಡಿದ ಟಾಸ್ಕಾ ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಸ್ವತಃ ಎಂ.ಪಿ. ರೇಣುಕಾಚಾರ್ಯ ಅವರೇ ಉತ್ತರ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ ಅವರು, ʻʻನಿನ್ನೆ ಮಾಜಿ ಸಿಎಂ ಯಡಿಯೂರಪ್ಪ ಅವರ ಭೇಟಿ ಮಾಡಿದೆ. ಯಡಿಯೂರಪ್ಪ ಅವರ ಮುಖ ನೋಡಿದರೆ ಏನೋ ಸಮಾಧಾನʼʼ ಎಂದರು.

ʻʻಅವರು ತುಂಬ ದೊಡ್ಡ ನಾಯಕರು. ಬಿಜೆಪಿ ಇವತ್ತು ಈ ಮಟ್ಟಕ್ಕೆ ಬಂದಿದ್ದಕ್ಕೆ ಯಡಿಯೂರಪ್ಪ ಕಾರಣ. ಯಡಿಯೂರಪ್ಪ ವರ್ಗ ಸಂಘರ್ಷಕ್ಕೆ, ಧರ್ಮ ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ನಾನು ನಿನ್ನೆ ಅವರನ್ನು ಭೇಟಿ ಮಾಡಿದ ವಿಚಾರದಲ್ಲೂ ಕೆಲವರು ಅಪಪ್ರಚಾರ ಮಾಡಬಹುದುʼʼ ಎಂದು ಹೇಳಿದರು ರೇಣುಕಾಚಾರ್ಯ.

ವಿಜಯೇಂದ್ರಕ್ಕೆ ಸ್ವಂತ ಅಸ್ತಿತ್ವ ಇದೆ ಎಂದ ರೇಣುಕಾ

ʻʻಬಿ.ವೈ ವಿಜಯೇಂದ್ರ ಅವರು ವಿಜಯೇಂದ್ರ ಯೂತ್ ಐಕಾನ್. ಅವರು ಸ್ವಂತ ಶಕ್ತಿ ಮೇಲೆ ಬೆಳೆಯುತ್ತಿರುವ ನಾಯಕ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ರೆ ನಿಭಾಯಿಸ್ತಾರೆʼʼ ಎಂದು ಹೇಳಿದ ರೇಣುಕಾಚಾರ್ಯ ಮತ್ತೆ, ʻʻನಾನೀಗ ಅವರ ಪರವಾಗಿ ಮಾತನಾಡಿದರೆ ಟೀಕೆ ಮಾಡಬಹುದುʼʼ ಎಂದು ಅನುಮಾನಿಸಿದರು.

ʻʻನಿಜವಾಗಿ ಹೇಳುತ್ತೇನೆ, ಯಡಿಯೂರಪ್ಪಗೆ ಪುತ್ರ ವ್ಯಾಮೋಹ ಇಲ್ಲ. ಅವರು ಯಾವತ್ತೂ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಅಂತ ವರಿಷ್ಠರ ಬಳಿ ಕೇಳಿಲ್ಲ. ವಿಜಯೇಂದ್ರ ಅವರಿಗೂ ವೈಯಕ್ತಿಕ ಹಿತಾಸಕ್ತಿ ಇಲ್ಲ, ಕಾರ್ಯಕರ್ತರು ಅವರನ್ನು ಬಯಸುತ್ತಿದ್ದಾರೆʼʼ ಎಂದರು.

ಬಿಎಸ್‌ವೈ ಮಗ ಅಂತ ಅಧಿಕಾರ ಕೊಡಬೇಡಿ

ʻʻಪಕ್ಷ ಸಂಘಟನೆ ಗಟ್ಟಿ ಆಗಲು ವಿಜಯೇಂದ್ರ ಅಧ್ಯಕ್ಷ ಆಗಬೇಕು ಅಂತ ಜನರೂ ಮಾತನಾಡುತ್ತಿದ್ದಾರೆ. ಅವರಿಗೆ ಯಡಿಯೂರಪ್ಪ ಅವರ ಮಗ ಅಂತ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಡಿ. ಅವರ ಶಕ್ತಿ ನೋಡಿ ಹೊಣೆಗಾರಿಕೆ ಕೊಡಿʼʼ ಎಂದು ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ ಬಲವಾಗಿ ಬ್ಯಾಟ್‌ ಬೀಸಿದರು.

ʻʻರಾಜಕೀಯದಲ್ಲಿ ಗಾಡ್ ಫಾದರ್ ಬೇಕು. ಯಡಿಯೂರಪ್ಪ ಅವರಿಗೆ ಆ ಸಾಮರ್ಥ್ಯ ಇತ್ತು. ಯಡಿಯೂರಪ್ಪ ಅವರ ನಾಯಕತ್ವ ಪಕ್ಷ ಗಟ್ಟಿಗೊಳಿಸಿದೆʼʼ ಎಂದು ಹೇಳಿದ ಎಂ.ಪಿ. ರೇಣುಕಾಚಾರ್ಯ ಅವರು, ರಾಜ್ಯ ಬಿಜೆಪಿಯ ಈಗಿನ ಪರಿಸ್ಥಿತಿಗೆ ಈಗಾಗಲೇ ಕೆಲವರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅಭದ್ರತೆಯಿಂದ ಯಾರು ಬೇಕಾದರೂ ಪಕ್ಷ ಬಿಟ್ ಹೋಗಬಹುದಾದ ಸ್ಥಿತಿ ಇದೆ. ಪಕ್ಷ ಸೋತ ನಂತರ ಎಲ್ಲರನ್ನೂ ಕರೆದು ಮಾತಾಡಿಸಬೇಕು. ಯಡಿಯೂರಪ್ಪ ಹಿಂದೆಲ್ಲ ಆ ಕೆಲಸ ಮಾಡಿದ್ರುʼʼ ಎಂದು ನೆನಪಿಸಿದರು.

ʻʻನರೇಂದ್ರ ಮೋದಿಯವರು ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ. ಮಧ್ಯದಲ್ಲಿ ಇರೋರು ಕೆಲವರು ಯಡಿಯೂರಪ್ಪ ಅವರನ್ನು ಕಡೆಗಣಿಸ್ತಿದ್ದಾರೆʼʼ ಎಂದು ಹೇಳಿದರು.

ʻʻಕರ್ನಾಟಕ ಬಿಜೆಪಿಯಲ್ಲಿ ಕೆಲವರಿಗೆ ದುರಹಂಕಾರ ಬಂದಿದೆ. ಇದನ್ನು ನಾನು ಹೇಳುತ್ತಿಲ್ಲ. ಜನ ಹಾಗೆ ಹೇಳ್ತಿದ್ದಾರೆ. ಹಲವರು ಪಕ್ಷದಲ್ಲಿ ಮಾತಾಡಲು ಭಯಪಡುತ್ತಿದ್ದಾರೆ. ಬಿಜೆಪಿಗೆ ಮಧ್ಯದಲ್ಲಿ ಯಾರು ಬಂದಿದ್ದಾರೋ ಅವರ ಆಟವೇ ಜಾಸ್ತಿ ಆಗ್ತಿದೆʼʼ ಎಂದು ಕೆದಕಿದರು.

ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಡಿ.ಕೆ ಶಿವಕುಮಾರ್‌, ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪದ ಬಗ್ಗೆ ಕೇಳಿದಾಗ, ʻʻಆಪರೇಷನ್ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಕಾರ ಅವರದ್ದೇ ಇದೆ, ತನಿಖೆ ನಡೆಸಲಿʼʼ ಎಂದರು.

ಇದು ಡಿ.ಕೆ. ಶಿವಕುಮಾರ್‌ ಕೊಟ್ಟ ಟಾಸ್ಕಾ?

ಬಿಜೆಪಿಯಲ್ಲಿ ಇರುವಷ್ಟು ದಿನ ಬಿಜೆಪಿಯವರಿಗೆ ವಿರುದ್ಧ ಮಾತಾಡಿ ಬನ್ನಿ ಎಂದು ರೇಣುಕಾಚಾರ್ಯಗೆ ಡಿ.ಕೆ ಶಿವಕುಮಾರ್‌ ಟಾಸ್ಕ್ ಕೊಟ್ಟಿದ್ದಾರೆ ಎಂಬ ಆರೋಪಗಳ ಬಗ್ಗೆ ಕೇಳಿದಾಗ ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.

ʻʻನನಗೆ ಯಾರೂ ಟಾಸ್ಕ್ ಕೊಟ್ಟಿಲ್ಲ. ನಾನು ಚಾಕಲೇಟ್, ಪೆಪ್ಪರ್ ಮೆಂಟ್ ತಿನ್ಕೊಂಡು ಬಂದಿಲ್ಲ. ನನಗೂ ಪ್ರಬುದ್ಧತೆ ಇದೆ, ಜ್ಞಾನ ಇದೆ. ನಾನು ಬಿಜೆಪಿಗೆ ಬೈದಿಲ್ಲ. ನರೇಂದ್ರ ಮೋದಿ, ಯಡಿಯೂರಪ್ಪ ಅವರಿಗೆ ಬೈದಿಲ್ಲ, ನಮ್ಮನ್ನು ಕರೆದು ಮಾತಾಡ್ತಿಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ. ನಾನು ಇನ್ನೆಲ್ಲಿ ಮಾತಾಡಬೇಕುʼʼ ಎಂದು ಪ್ರಶ್ನಿಸಿದರು.

ʻʻನಾನು ಯಡಿಯೂರಪ್ಪ ಗರಡಿಯಲ್ಲಿ ಬೆಳೆದವನು. ಬಿಜೆಪಿ ಬಿಡ್ತೇನೆ ಅಂತ ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಸೇರ್ತೇನೆ ಅಂತ ಹೇಳಿಲ್ಲ. ಪಕ್ಷ ಕಟ್ಟೋಣ ಅಂತ ಯಡಿಯೂರಪ್ಪ ಹೇಳಿದ್ದಾರೆ. ನಾವು ಕಾದು ನೋಡ್ತೇವೆ. ಆದರೆ ಪಕ್ಷ ಬಿಡೋ ಬಗ್ಗೆ ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡ್ತಿದ್ದಾರೆʼʼ ಎಂದರು ರೇಣುಕಾಚಾರ್ಯ.

ʻʻಲೋಕಸಭೆ ಚುನಾವಣೆ ಬರ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮಾತ್ರ ಎಲ್ಲ ನಿಭಾಯಿಸ್ತಾರೆ. ಅವರಿಲ್ಲದಿದ್ದರೆ ಕಷ್ಟವಿದೆ. ಇಷ್ಟಾದರೂ ಪಕ್ಷ ಕಟ್ಟುವ ಜಾಣ್ಮೆಯೇ ಇಲ್ಲದ ಕೆಲವರು ಮಧ್ಯದಲ್ಲಿ ಆಟ ಆಡ್ತಿದ್ದಾರೆ. ಅವರು ಪಕ್ಷವನ್ನು ಹಿಡಿತಕ್ಕೆ ತಂದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆʼʼ ಎಂದೂ ರೇಣುಕಾಚಾರ್ಯ ಹೇಳಿದರು. ಬಿಜೆಪಿ-ಜೆಡಿಎಸ್‌ ಮೈತ್ರಿ ಹೈಕಮಾಂಡ್‌ ನಿರ್ಧಾರ. ಹಾಗಾಗಿ ಏನೂ ಹೇಳಲ್ಲ ಎಂದರು.

Exit mobile version