Site icon Vistara News

MP Renukacharya : BSYಗೆ ವಯಸ್ಸಾಯ್ತು ಅಂತ ಕಿತ್ತಾಕಿದ್ರಲ್ವಾ, ಈಗ ರಾಜ್ಯ ಸುತ್ತಲು ಬೇಕಾ; ಮತ್ತೆ ರೇಣುಕಾ ಗುಡುಗು

MP Renukacharya meets BSY

ಬೆಂಗಳೂರು: ʻʻಯಡಿಯೂರಪ್ಪನವರಿಗೆ (BS Yediyurappa) ವಯಸ್ಸಾಯಿತು ಅಂತಾ ಮುಖ್ಯಮಂತ್ರಿ (Chief Minister) ಹುದ್ದೆಯಿಂದ ಕೆಳಗಿಳಿಸಿದ್ರಲ್ವಾ,? ಹಾಗಾದರೆ ಈಗ ರಾಜ್ಯ ಸುತ್ತಲು ಯಡಿಯೂರಪ್ಪ ಬೇಕಾ?ʼʼ- ಹೀಗೆ ನೇರವಾಗಿ ಪ್ರಶ್ನೆ ಕೇಳಿದ್ದಾರೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya).

ಬೆಂಗಳೂರಿನಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ರೇಣುಕಾಚಾರ್ಯ ಮಾತನಾಡಿದರು. ಎಂ.ಪಿ. ರೇಣುಕಾಚಾರ್ಯ ಅವರು ಕಳೆದ ನಾಲ್ಕೈದು ದಿನಗಳಿಂದ ಬಿಜೆಪಿ ನಾಯಕರ ವಿರುದ್ಧ ಅತ್ಯುಗ್ರವಾಗಿ ಮಾತನಾಡುತ್ತಿದ್ದಾರೆ. ಒಬ್ಬೊಬ್ಬ ನಾಯಕರನ್ನೂ ತರಾಟೆಗೆ ತೆಗೆದುಕೊಳ್ಳುವ ಮೂಲಕ ರಾಜ್ಯ ನಾಯಕತ್ವಕ್ಕೆ ಪ್ರಬಲ ಸವಾಲು ಹಾಕಿದ್ದರು. ಈ ನಡುವೆ ಅವರ ಆಕ್ರೋಶಿತ ಮಾತುಗಳಿಂದ ಸಿಟ್ಟಿಗೆದ್ದ ರಾಜ್ಯ ಬಿಜೆಪಿಯ ಶಿಸ್ತು ಸಮಿತಿ ಅವರಿಗೆ ನೋಟಿಸ್‌ ಜಾರಿಗೊಳಿಸಿದೆ. ಜೂನ್‌ 29ರಂದು ನೋಟಿಸ್‌ ನೀಡಲಾಗಿದ್ದು, ಒಂದು ವಾರದ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಈ ನಡುವೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಶನಿವಾರ ಬೆಂಗಳೂರಿನ ತಮ್ಮ ಮನೆಗೆ ರೇಣುಕಾಚಾರ್ಯ ಅವರನ್ನು ಕರೆಸಿಕೊಂಡು ಬುದ್ಧಿಮಾತು ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೊರಗೆ ಬಂದ ಬಳಿಕವೂ ರೇಣುಕಾಚಾರ್ಯ ಅವರ ಆಕ್ರೋಶ ತಗ್ಗಿಲ್ಲ. ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದರಿಂದಲೇ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮತ್ತೆ ಹೇಳಿದ್ದಾರೆ. ಜತೆಗೆ ಇನ್ನೂ ಹಲವು ನಾಯಕರ ಬಗ್ಗೆ ಮಾತನಾಡಿದ್ದಾರೆ.

ಬಿಎಸ್‌ವೈಯನ್ನು ಕೆಳಗಿಳಿಸಿದರೆ ಹೀನಾಯ ಸ್ಥಿತಿ

ʻʻಯಡಿಯೂರಪ್ಪ ಅವರನ್ನು ಎರಡು ಬಾರಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅವರನ್ನು ಕೆಳಗಿಳಿಸಿದ ಎರಡು ಬಾರಿಯೂ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆʼʼ ಎಂದು ನೆನಪಿಸಿರುವ ರೇಣುಕಾಚಾರ್ಯ ಅವರು, ʻʻಯಡಿಯೂರಪ್ಪ ವಿರುದ್ಧ ಮಾತಾಡಿದರೆ ಅವರಿಗೆ ರಾಜ ಮರ್ಯಾದೆ ಸಿಗುತ್ತದೆ. ಯಡಿಯೂರಪ್ಪ ವಿರುದ್ಧ ಮಾತಾಡಿದರೆ ಶಿಸ್ತು ಕ್ರಮ ಇಲ್ಲʼʼ ಎಂದು ಛೇಡಿಸಿದರು.

ʻʻಯಡಿಯೂರಪ್ಪ ಅವರು ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಯಡಿಯೂರಪ್ಪನವರಿಗೆ ಸಂಘ ಪರಿವಾರದ ಹಿನ್ನೆಲೆ ಇದೆʼʼ ಎಂದು ಹೇಳಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ನಿಲ್ಲಿಸಿದ್ದು ಬಿಜೆಪಿ. ಈಗ ನಾಯಕರೆಂದು ಹೇಳಿಕೊಳ್ಳುತ್ತಿರುವ ಯಾರೂ ಪಕ್ಷ ಕಟ್ಟಿದವರಲ್ಲʼʼ ಎಂದು ಹೇಳಿದರು.

ಹೊಂದಾಣಿಕೆ ಪ್ರತಾಪ್‌ ಸಿಂಹ ಮಾಡಿಕೊಂಡಿಲ್ವಾ?

ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ಹೇಳಿದ ಹೊಂದಾಣಿಕೆ ರಾಜಕೀಯವನ್ನೂ ಪ್ರಸ್ತಾಪಿಸಿರುವ ರೇಣುಕಾಚಾರ್ಯ ಅವರು, ʻʻಮೈಸೂರು ಲೋಕಸಭಾ ಸದಸ್ಯರು 2019ರ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ವಾ? ಇದು ಯಾರಿಗೂ ಗೊತ್ತಿಲ್ವಾ?ʼʼ ಎಂದು ಪ್ರಶ್ನಿಸಿದ್ದಾರೆ.

ʻʻನಾನು ಯಾವತ್ತಿದ್ದರೂ ಬಿಜೆಪಿಯೇ. ನಾನು ಎಂದೂ ಮೋದಿ ವಿರುದ್ಧವಾಗಿ ಮಾತಾಡಿಲ್ಲ. ಪಕ್ಷ ಕಟ್ಟಿ ಬೆಳೆಸಿದ ಮಹಾನ್ ನಾಯಕ ಯಡಿಯೂರಪ್ಪ ಅವರನ್ನು ಅಪಮಾನ ಮಾಡಿರುವುದನ್ನು ಪ್ರಶ್ನೆ ಮಾಡಿದ್ದೇನೆʼʼ ಎಂದು ಹೇಳಿದರು.

ನನಗೆ ಕೊಟ್ಟ ನೋಟಿಸ್‌ ಮಾತ್ರ ಯಾಕೆ ಬಹಿರಂಗ?

ಮೂರು ದಿನಗಳ ಹಿಂದೆ ರೇಣುಕಾಚಾರ್ಯ ಅವರು ಅತ್ಯುಗ್ರವಾಗಿ ಮಾತನಾಡಿದ ದಿನವೇ ಸಂಜೆ ಬಿಜೆಪಿಯ ಶಿಸ್ತು ಸಮಿತಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು. ಅವರಿಗೆ ಉತ್ತರ ನೀಡಲು ಒಂದು ವಾರ ಕಾಲಾವಕಾಶ ನೀಡಲಾಗಿತ್ತು. ಈ ನಡುವೆ ಎರಡು ದಿನಗಳ ಹಿಂದೆ ಸಂಸದ ಪ್ರತಾಪಸಿಂಹ ಸೇರಿದಂತೆ ಹಲವರು ಬಿಜೆಪಿ ಪಕ್ಷದ ಕಚೇರಿಯಲ್ಲಿ ವಿಚಾರಣೆ ಎದುರಿಸಿದರು. ಆದರೆ, ಅವರಿಗೆಲ್ಲ ನೋಟಿಸ್‌ ನೀಡಿದ ವಿಚಾರ ಬಹಿರಂಗವಾಗಿರಲಿಲ್ಲ. ಅದನ್ನೂ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.

ʻʻರೇಣುಕಾಚಾರ್ಯಗೆ ನೋಟಿಸ್ ಕೊಟ್ಟಿದ್ದನ್ನು ವ್ಯವಸ್ಥಿತವಾಗಿ ಬಿಡುಗಡೆ ಮಾಡುತ್ತೀರಿ. ರಾಜ್ಯಾಧ್ಯಕ್ಷರು 10 ಜನರಿಗೆ ನೋಟೀಸ್ ಕೊಟ್ಟಿದ್ದೇವೆ ಅಂದಿದ್ದಾರೆ. ಹಾಗಾದರೆ 10 ಜನರ ನೋಟೀಸ್ ಎಲ್ಲಿ?” ಎಂದು ಅವರು ಪ್ರಶ್ನಿಸಿದರು.

ದೆಹಲಿ ನಾಯಕರಿಗೇ ಪತ್ರ ಬರೆಯುತ್ತೇನೆ

ʻʻರಾಜ್ಯದ ಬಿಜೆಪಿಯ ಸ್ಥಿತಿಗತಿ ಬಗ್ಗೆ ದೆಹಲಿ ನಾಯಕರಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಬಿಜೆಪಿ ಸೋಲಿಗೆ ಕಾರಣ ಏನು ಅಂತ ಹೇಳುತ್ತೇನೆʼʼ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಯಡಿಯೂರಪ್ಪನವರಿಗೇ ಹೇಳಿಬಂದಿದ್ದೇನೆ

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು ಒಳಗೆ ಏನಾಯಿತು ಎಂಬ ಬಗ್ಗೆ ಸುಳಿವು ನೀಡಿದ್ದಾರೆ. ʻʻನಿ‌ನ್ನೆ ಯಡಿಯೂರಪ್ಪನವರು ಕರೆ ಮಾಡಿದ್ದರು. ಅದಕ್ಕೆ ಬಂದು ಭೇಟಿ ಮಾಡಿದ್ದೇನೆ. ನಿಮಗೆ ಅಪಮಾನ ಮಾಡಿದರೆ ಸುಮ್ಮನಿರಲಾಗಲ್ಲ ಎಂದು ಈಗ ಕೂಡಾ ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ ಎಂದರು.

ʻʻನರೇಂದ್ರ ಮೋದಿ, ಯಡಿಯೂರಪ್ಪ ಮುಖ ತೋರಿಸಿ ವೋಟ್ ಕೇಳುತ್ತಾರೆ ಅಂದರೆ ಸಂಘಟನೆಗೆ ಇವರ ಕೊಡುಗೆ ಏನು? ಯಡಿಯೂರಪ್ಪನವರಿಗೆ ವಯಸ್ಸಾಯಿತು ಅಂತಾ ಕೆಳಗಿಳಿಸಿದ್ರಲ್ವಾ, ಹಾಗಾದರೆ ರಾಜ್ಯ ಸುತ್ತಲು ಯಡಿಯೂರಪ್ಪ ಬೇಕಾ?ʼʼ ಎಂದು ಪ್ರಶ್ನಿಸಿದ ಅವರು ಜುಲೈ ನಾಲ್ಕರಿಂದ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಉಲ್ಲೇಖಿಸಿದರು.

ʻʻಯಡಿಯೂರಪ್ಪ ಮಾತಿಗೆ ಗೌರವ ಕೊಡುತ್ತೇನೆ. ಆದರೆ, ನನ್ನ ಹೋರಾಟದಲ್ಲಿ, ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು ಮುಂದೆ ಮಾಧ್ಯಮದಲ್ಲಿ ಎಲ್ಲವನ್ನೂ ಬಹಿರಂಗವಾಗಿ ಮಾತಾಡುವುದಿಲ್ಲʼʼ ಎಂದರು. ಹಾಗಂತ, ʻʻನನ್ನನ್ನು ಏನೂ ಬಲಿ ಪಶು ಮಾಡಲು ಆಗಲ್ಲ. ನನ್ನ ಟಾರ್ಗೆಟ್ ಮಾಡಲು ಯಾರಿಂದಲೂ ಆಗಲ್ಲ. ನನ್ನ ಜೊತೆ ಬಿಜೆಪಿ, ಮತದಾರರ ಆಶೀರ್ವಾದ ಇದೆʼʼ ಎಂದು ಹೇಳಿದರು.

ರೇಣುಕಾಚಾರ್ಯ ಕಾಂಗ್ರೆಸ್‌ಗೆ ಹೋಗ್ತಾರೆ ಅಂತಾ ಎಲ್ಲಿ ಸೃಷ್ಟಿ ಮಾಡಿದ್ರೋ ಗೊತ್ತಿಲ್ಲ. ನಾನು ಬಿಜೆಪಿ ಬಿಡಲ್ಲʼʼ ಎಂದರು ರೇಣುಕಾಚಾರ್ಯ.

ಇದನ್ನೂ ಓದಿ: BJP Karnataka: ನೋಟಿಸ್‌ಗೆ ಡೋಂಟ್‌ ಕೇರ್‌, ಆಫೀಸಿಂದಲೂ ದೂರ: ಮತ್ತೆ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ

Exit mobile version