Site icon Vistara News

MP Renukacharya: ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ; ಇದು ನನ್ನ ಸ್ಪಷ್ಟ ನಿರ್ಧಾರ: ಎಂ.ಪಿ. ರೇಣುಕಾಚಾರ್ಯ

M P Renukacharya at honnali

M P Renukacharya at honnali

ದಾವಣಗೆರೆ: ಹೊನ್ನಾಳಿ ಕ್ಷೇತ್ರದಲ್ಲಿ (MP Renukacharya) ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಇದು ನನ್ನ ಸ್ಪಷ್ಟ ನಿರ್ಧಾರ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಕಾರಣ ಶನಿವಾರವೇ ರಾಜಕೀಯ ನಿವೃತ್ತಿ ಘೋಷಿಸಿದ್ದ ರೇಣುಕಾಚಾರ್ಯ ಅವರ ಮನವೊಲಿಕೆ ಪ್ರಯತ್ನ ನಡೆದಿತ್ತು. ಅಲ್ಲದೆ, ಅವರ ಬೆಂಬಲಿಗರೂ ಭೇಟಿ ಮಾಡಿ, ಯಾವುದೇ ಕಾರಣಕ್ಕೂ ನಿವೃತ್ತಿಯಾಗುವುದು ಬೇಡ ಎಂದು ಒತ್ತಾಯಿಸಿದ್ದರು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಯಾವುದೇ ಕಾರಣಕ್ಕೂ ನಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ನನ್ನ ನಿರ್ಧಾರ ಅಂತಿಮ ಎಂದು ತಿಳಿಸಿದ್ದಾರೆ.

ಬಿಜೆಪಿಯು‌ ಪಡಿತರ ಅಕ್ಕಿಯನ್ನು ಕಡಿತ ಮಾಡಿತ್ತು. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಮೂಲೆಗುಂಪು ಮಾಡಿದ್ದಲ್ಲದೆ, ಈಶ್ವರಪ್ಪಗೆ ಟಿಕೆಟ್ ನೀಡದೆ ನಿರ್ಲಕ್ಷ್ಯ ಮಾಡಿದೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಎನ್ನುವ ಸುಳ್ಳು ಭರವಸೆಗಳು ಸೇರಿ ಹತ್ತು ಹಲವು ಕಾರಣಗಳಿಂದ ಕ್ಷೇತ್ರದಲ್ಲಿ ನಾನು ಸೋತೆ. ಇನ್ನು ನಾನು‌ ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೆ. ಆದರೆ ಜನಾದೇಶ ಹೀಗೆ ಇರುವಾಗ ನಾನು ತಲೆಬಾಗಲೇಬೇಕು. ಮುಂದೆ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | MP Renukacharya: ಚುನಾವಣಾ ನಿವೃತ್ತಿ ಘೋಷಿಸಿದ ರೇಣುಕಾಚಾರ್ಯ; ಮನೆ ಮುಂದೆ ಅಭಿಮಾನಿಗಳ ಧರಣಿ

ಬೆಂಬಲಿಗರನ್ನು ನೋಡಿ ಕಣ್ಣೀರಿಟ್ಟ ಎಂ.ಪಿ. ರೇಣುಕಾಚಾರ್ಯ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ ಎಂ.ಪಿ. ರೇಣುಕಾಚಾರ್ಯ ಅವರ ಹೊನ್ನಾಳಿಯ ನಿವಾಸದ ಮುಂದೆ ಸಾವಿರಾರು ಬೆಂಬಲಿಗರು, ಕಾರ್ಯಕರ್ತರು ಜಮಾಯಿಸಿದ್ದರು. ಅವರನ್ನು ನೋಡಿ ರೇಣುಕಾಚಾರ್ಯ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಅವರಿಗೆ ಧೈರ್ಯ ತುಂಬಿದ್ದಾರೆ. ಹರಿಹರದ ಶಾಸಕ ಬಿ.ಪಿ. ಹರೀಶ್ ಕೂಡ ಸಮಾಧಾನ ಪಡಿಸಿದ್ದಾರೆ.

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ, ಕೋವಿಡ್‌ನಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದರೂ ಜನರು ಸೋಲಿಸಿದರು ಎಂದು ನೋವು ತೋಡಿಕೊಂಡ ರೇಣುಕಾಚಾರ್ಯ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಬರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Honnali Election Results 2023 : ಹೊನ್ನಾಳಿಯಲ್ಲಿ ಕಾಂಗ್ರೆಸ್‌ನ ಶಾಂತನಗೌಡ ಡಿ.ಜಿ ಗೆಲುವು, ರೇಣುಕಾಚಾರ್ಯ ಪರಾಭವ

ವಿಷದ ಬಾಟಲಿ ಹಿಡಿದು ಕಾರ್ಯಕರ್ತ ಬೆದರಿಕೆ

ಎಂ.ಪಿ‌. ರೇಣುಕಾಚಾರ್ಯ ಚುನಾವಣಾ ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ಅವರು ನಿರ್ಧಾರ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಬೆಂಬಲಿಗನೊಬ್ಬ ವಿಷದ ಬಾಟಲ್ ಹಿಡಿದು, ರೇಣುಕಾಚಾರ್ಯ ನಿವೃತ್ತಿ ನಿರ್ಧಾರ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಆತನನ್ನು ಕಾರ್ಯಕರ್ತರು ತಡೆದಿದ್ದಾರೆ. ಬಳಿಕ ಯಾವುದೇ ಕಾರಣಕ್ಕೂ ನಿವೃತ್ತಿ ಘೋಷಣೆ ಮಾಡದಂತೆ ಬೆಂಬಲಿಗರು, ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

Exit mobile version