ಕೊಪ್ಪಳ: ಅಡುಗೆ ಅನಿಲ ದರ ಹೆಚ್ಚಳ, ಮುಸ್ಲಿಂ ಜನಾಂಗದ ಶೇ.4 ರಷ್ಟು ಮೀಸಲಾತಿ ಹಿಂಪಡೆದಿರುವುದೇ ಚುನಾವಣೆಯಲ್ಲಿ (Karnataka Election) ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳು. ರಾಜ್ಯ ಸರ್ಕಾರ ಪರಿಶಿಷ್ಠರು ಹಾಗೂ ಲಿಂಗಾಯತ, ವಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿತು. ಆದರೆ, ಅದು ಅನುಷ್ಠಾನವಾಗದೆ ಇರುವುದು ಸಹ ಜನರು ಬಿಜೆಪಿಯನ್ನು ವಿರೋಧಿಸಲು ಕಾರಣ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯಿಂದ ಟಿಕೆಟ್ ಹಂಚಿಕೆಯಲ್ಲಿ ಗೊಂದಲವಾಗಿತ್ತು. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತಾಗಿತ್ತು. ಕಾಂಗ್ರೆಸ್ ಒಂದು ತಿಂಗಳ ಇರುವಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿತು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನಿಂದ ಜನ ವೋಟು ಹಾಕಿದ್ದಾರೆ. ಆದರೆ ರಾಜ್ಯದ ಬಜೆಟ್‌ಗಿಂತ ಅವರ ಯೋಜನೆ ಅವೈಜ್ಞಾನಿಕವಾಗಿವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸುಮಾರು 60 ಲಕ್ಷ ಕೋಟಿ ರೂಪಾಯಿ ಬೇಕು. ಆದರೆ ಕಾಂಗ್ರೆಸ್ ಸರ್ಕಾರ ಹೇಗೆ ಹೊಂದಾಣಿಕೆ ಮಾಡುತ್ತದೋ ನೋಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Karnataka CM: ಸಿದ್ದರಾಮಯ್ಯ ಸಿಎಂ ಆದ್ರೆ ರಾಜ್ಯದ ಸಮಗ್ರ ಅಭಿವೃದ್ಧಿ: ಬಸವರಾಜ ದೇವರು ಆಗ್ರಹ
ಕಾಂಗ್ರೆಸ್‌ನಲ್ಲಿ ಅಧಿಕ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ಬಿಟ್ಟಿರುವುದು ಸೋಲಿಗೆ ಕಾರಣವಾಗಿದೆ. ಕಾಂಗ್ರೆಸ್‌ನವರು 6 ತಿಂಗಳು ಮೊದಲೇ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದರು. ಬಿಜೆಪಿಯಲ್ಲಿ ಏನಾಗುತ್ತದೆ ಎಂಬುವುದು ಲೋಕಸಭಾ ಸದಸ್ಯರಿಗೆ ಗೊತ್ತಾಗುತ್ತಿಲ್ಲ. ವಿಧಾನಸಭಾ ಚುನಾವಣೆಗೆ ಸ್ಥಳೀಯರೇ ಪ್ರಚಾರಕ್ಕೆ ಹೆಚ್ಚು ಬಳಕೆಯಾಗಬೇಕಿತ್ತು. ಲೋಕಸಭಾ ಚುನಾವಣೆಗೆ ಜನ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡುತ್ತಾರೆ. ಮೋದಿ ಅಗ್ರಗಣ್ಯ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಬಸವರಾಜ ಬೊಮ್ಮಾಯಿ ಸೋಲಿನ ಪರಾಮರ್ಶೆಯನ್ನು ಮಾಡುತ್ತೇವೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಶಾಸಕ ವಿನಯ್ ಕುಲಕರ್ಣಿಗೆ ಡಿಸಿಎಂ ಹುದ್ದೆ ನೀಡಿ: ಧಾರವಾಡದ ಮುರುಘಾ ಶ್ರೀ
ಧಾರವಾಡ: ಶಾಸಕ ವಿನಯ್ ಕುಲಕರ್ಣಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಧಾರವಾಡದ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸರ್ವಧರ್ಮ ನಾಯಕನಾಗಿರುವ ವಿನಯ್ ಕುಲಕರ್ಣಿ, ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕ. ಅವರಿಗೆ ಡಿಸಿಎಂ ಸ್ಥಾನ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Karnataka CM: ವಿಗ್ರಹವಾದರೂ ಮಾಡಿ, ಚಪ್ಪಡಿಯಾದರೂ ಮಾಡಿ ಎಂದ ʼಬಂಡೆʼ: ಹೈಕಮಾಂಡ್ ವಿರುದ್ಧ ಡಿ.ಕೆ. ಶಿವಕುಮಾರ್ ಬೇಸರ?
ಇದು ನಮ್ಮ ಸ್ವಂತದ ವಿಚಾರ, ಅವರು ಡಿಸಿಎಂ ಆಗಬೇಕು. ಒಂದು ವೇಳೆ ವಿನಯ್ ಕುಲಕರ್ಣಿಗೆ ನೀಡದಿದ್ದರೂ ಬೇರೆ ಲಿಂಗಾಯತ ನಾಯಕರಿಗಾದರೂ ಡಿಸಿಎಂ ಹುದ್ದೆ ನೀಡಬೇಕು. ಆದ್ರೂ ಇವರಿಗೆ ನೀಡುವುದು ಮುಖ್ಯ. ವಿನಯ್ ಅವರ ಬಗ್ಗೆ ನಮಗೆ ವಿಶೇಷ ಒಲವು ಇದೆ. ಡಿಸಿಎಂ ಸ್ಥಾನಕ್ಕೆ ಸಮರ್ಥ ನಾಯಕ ವಿನಯ್ ಕುಲಕರ್ಣಿ, ಈ ಹಿಂದೆ ಮಂತ್ರಿ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆಪಾದನೆ ಇದ್ದೆ ಇರುತ್ತದೆ. ಅದರ ಬಗ್ಗೆ ಅಧಿಕೃತವಾಗಿ ಯಾವುದೇ ತೀರ್ಪು ಹೊರಬಂದಿಲ್ಲ. ನಮ್ಮ ಮಠದ ಚೇರ್ಮನ್ ಎಂಬ ಸ್ವಾರ್ಥ ಇದೆ, ಹೀಗಾಗಿ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.