ಮಂಗಳೂರು: ಕರಾವಳಿಯ ಮುಸ್ಲಿಂ ಯುವತಿ (Muslim woman from Mangalore) ಶಮಾ ವಾಜಿದ್ (Shama Wajid) ಅವರು ಪ್ರತಿಷ್ಠಿತ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್ ಯೂನಿವರ್ಸ್ – 2023 (Global mrs india international universe 2023) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ (Mrs India) ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ಸ್ ಆಯೋಜಿಸಿರುವ ಸ್ಪರ್ಧೆಯಲ್ಲಿ ವಿಜಯಿಯಾಗಿರುವ ಅವರು ಇದೀಗ 2024ರ ಗ್ಲೋಬಲ್ ಮಿಸೆಸ್ ಯೂನಿವರ್ಸ್ (Global Mrs Universe) ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಮುಸ್ಲಿಂ ಸಮುದಾಯದವರು ಫ್ಯಾಷನ್ ಲೋಕಕ್ಕೆ ಕಾಲಿಡುವುದು ಅಪರೂಪ. ಅಂತಹದರಲ್ಲಿ ಶಮಾ ವಾಜಿದ್ ಮುಸ್ಲಿಂ ಸಮುದಾಯವರಾದರೂ ಕುಟುಂಬದವರ ಪ್ರೋತ್ಸಾಹದಿಂದ ಫ್ಯಾಷನ್ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಶಮಾ ವಾಜಿದ್ ಅವರು ಶ್ರೀನಿವಾಸ ಆರ್ಕಿಟೆಕ್ಟ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
22ಕ್ಕೂ ಅಧಿಕ ರಾಜ್ಯಗಳಲ್ಲಿ ನಡೆದಿತ್ತು ಆಡಿಷನ್, ಟಾಪ್ 40ರಲ್ಲಿ ಆಯ್ಕೆ
ದೇಶದ 22ಕ್ಕೂ ಅಧಿಕ ರಾಜ್ಯಗಳಲ್ಲಿ ಸ್ಪರ್ಧೆಯ ಆಡಿಷನ್ ನಡೆದಿದೆ. ಸಾವಿರಾರು ಮಹಿಳೆಯರಲ್ಲಿ ಶಮಾ ವಾಜಿದ್ ನವದೆಹಲಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಗೆ ತಲುಪಿದ ಟಾಪ್ 40ರಲ್ಲಿ ಒಬ್ಬರಾಗಿದ್ದರು. ಎಲ್ಲಾ ಫೈನಲಿಸ್ಟ್‌ಗಳು 5 ದಿನಗಳ ಕಾಲ ಮಾರ್ಗದರ್ಶಕರಿಂದ ಕ್ಯಾಟ್‌ವಾಕ್, ಗ್ರೂಮಿಂಗ್, ಕೊರಿಯೋಗ್ರಫಿ, ಇಮೇಜ್ ಕನ್ಸಲ್ಟಿಂಗ್, ಆತಂಕ ನಿರ್ವಹಣೆ, ದೈಹಿಕ ಫಿಟ್‌ನೆಸ್ ಇತ್ಯಾದಿಗಳ ಉತ್ತಮ ಅಂಶಗಳಲ್ಲಿ ಕಠಿಣ ತರಬೇತಿಯನ್ನು ಪಡೆದರು.
ಕರ್ನಾಟಕವನ್ನು ಪ್ರತಿನಿಧಿಸಿದ್ದರು ಶಮಾ ವಾಜಿದ್
ಕರ್ನಾಟಕವನ್ನು ಪ್ರತಿನಿಧಿಸಿದ ಶಮಾ ವಾಜಿದ್ ಫೂಲ್ ರೌಂಡ್, ಎಕ್ನಿಕ್ ರೌಂಡ್, ಟ್ಯಾಲೆಂಟ್ ರೌಂಡ್ ಮತ್ತು ಫಾರ್ಮಲ್ ಸುತ್ತುಗಳಂತಹ ವಿವಿಧ ಸುತ್ತುಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಅಗ್ರ 10 ಫೈನಲಿಸ್ಟ್ ಗಳಲ್ಲಿ ಸ್ಥಾನ ಪಡೆದರು. ಅಂತಿಮವಾಗಿ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಯೂನಿವರ್ಸ್ 2023ರ ಕಿರೀಟವನ್ನು ಬಾಲಿವುಡ್ ಸೆಲೆಬ್ರಿಟಿ ಮಲೈಕಾ ಅರೋರಾ ಅವರಿಂದ ಮುಡಿಗೇರಿಸಿದರು.
13 ತಿಂಗಳ ಪುಟ್ಟ ಮಗುವಿನ ತಾಯಿ
ಮಿಸ್ ಯುನಿವರ್ಸ್, ಮಿಸ್ ವರ್ಲ್ಡ್ ಮಾದರಿಯಲ್ಲೇ ನಡೆಯುವ ಈ ಮಿಸೆಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಮದುವೆಯಾದ ಮಹಿಳೆಯರಿಗೆ ಮಾತ್ರ ಅವಕಾಶವಿದೆ. ಶಮಾ ವಾಜಿದ್ ಅವರಿಗೆ 13 ತಿಂಗಳ ಗಂಡು ಮಗುವಿದೆ. ಅವರು ಪುಟ್ಟ ಮಗುವಿನ ಲಾಲನೆ ಪಾಲನೆ ಮಾಡುತ್ತಲೇ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದಲ್ಲದೆ, ಈಗ ವಿಜಯಿಯಾಗಿ ಹೊರಹೊಮ್ಮಿದ್ದಾರೆ.