ಬೆಂಗಳೂರು: ಮುಡಾ ನಿವೇಶನ ಹಗರಣಕ್ಕೆ (Muda Scam) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಖಾಸಗಿ ದೂರಿನ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸದಂತೆ ಕೋರಿ ಆಲಂ ಪಾಷಾ ಎಂಬುವವರು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸದಂತೆ ಆಲಂ ಪಾಷಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ ನೀಡಿದ್ದ ಅರ್ಜಿಯ ವಿಚಾರಣೆ ಪರಿಗಣನೆ ಸಂಬಂಧ ಈಗಾಗಲೇ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಹೀಗಾಗಿ ಅರ್ಜಿ ಸ್ವೀಕರಿಸದಂತೆ ಆಲಂ ಪಾಷಾ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾದಿಂದ 14 ನಿವೇಶನಗಳನ್ನು ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ಸಿಬಿಐ ಅಥವಾ ಬೇರಾವುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು 82ನೇ ಸಿಸಿಎಚ್ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆ.8ರಂದು ಖಾಸಗಿ ದೂರು ಸಲ್ಲಿಸಿದ್ದರು.
ಸಿಎಂ ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸ್ವಜನಪಕ್ಷಪಾತ ತೋರಿ, ಮುಡಾ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಪತ್ನಿ ಹೆಸರಿಗೆ, ದೇವರಾಜು ಎನ್ನುವವರ ಹೆಸರಿಗೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಈ ಹಿಂದೆ ರಾಜ್ಯಪಾಲರು, ಕೆಲವು ಅಧಿಕಾರಿಗಳಿಗೆ ದೂರು ಅರ್ಜಿ ನೀಡಿದ್ದೆ, ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 15 ಪುಟಗಳ ದೂರು, 300ಕ್ಕೂ ಹೆಚ್ಚು ದಾಖಲಾತಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದೇನೆ. ಸಿದ್ದರಾಮಯ್ಯನವರನ್ನು ಮೊದಲನೇ ಆರೋಪಿ, ಅವರ ಪತ್ನಿ ಎರಡನೇ ಆರೋಪಿ, ಸಂಬಂಧಿಕ ಮಲ್ಲಿಕಾರ್ಜುನ 3ನೇ ಮತ್ತು ದೇವರಾಜ್ ಎಂಬುವವರನ್ನು 4ನೇ ಆರೋಪಿಯನ್ನಾಗಿ ಮಾಡಲು ದೂರು ನೀಡಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದರು.
ಇಂದು ಕೋರ್ಟ್ ತೀರ್ಮಾನ
ಮುಡಾ ಹಗರಣ (MUDA Scam) ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ದಾಖಲಾದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಮಾನಿಸಲಿದೆ.
ಇದನ್ನೂ ಓದಿ | Chamundi Hill: ಚಾಮುಂಡಿ ಬೆಟ್ಟದಲ್ಲಿ ಮೈಸೂರು ಅರಸರ ಅಧಿಕಾರ ಮೊಟಕು ಮಾಡಲು ಮುಂದಾದ ಕಾಯಿದೆಗೆ ಹೈಕೋರ್ಟ್ ಮಧ್ಯಂತರ ತಡೆ
ಕೋರ್ಟ್‌ನ ಈ ಆದೇಶವನ್ನು ಆಧರಿಸಿ ಸಿಎಂ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸಲಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ಕೋರ್ಟ್ ನೀಡುವ ಆದೇಶವನ್ನು ನೋಡಿಕೊಂಡು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ನೀಡಿರುವ ದೂರನ್ನು ಪರಿಗಣಿಸಿ ಅಭಿಯೋಜನೆಗೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯಪಾಲರು ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಟಿಜೆ ಅಬ್ರಹಾಂ ಮತ್ತೊಂದು ಖಾಸಗಿ ದೂರು ಸಲ್ಲಿಸಿದ್ದಾರೆ. ಈಗಾಗಲೇ ಸ್ನೇಹಮಯಿ ಕೃಷ್ಣ ಎನ್ನುವವರು ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದಾರೆ. ನಾಳೆ ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಸಂಬಂಧ ನ್ಯಾಯಾಲಯವು ಆದೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Part Time Lecturers: ಅರೆಕಾಲಿಕ ಉಪನ್ಯಾಸಕರಿಗೆ ಗುಡ್ ನ್ಯೂಸ್; ಗೌರವಧನದಲ್ಲಿ ಭಾರಿ ಹೆಚ್ಚಳ
ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣ ಒಂದು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಅಲ್ಲದೆ ಇತ್ತೀಚಿಗೆ ಬಿಜೆಪಿ ಮತ್ತು ಜೆಡಿಎಸ್ ಈ ಒಂದು ಹಗರಣವನ್ನು ಖಂಡಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬೆಂಗಳೂರಿನಿಂದ ಮೈಸೂರಿನವರೆಗೆ ಮೈಸೂರು ಚಲೋ ಪಾದಯಾತ್ರೆ ಕೂಡ ಮಾಡಿತ್ತು. ಇದಕ್ಕೆ ಕೌಂಟರ್ ಕೊಡಲು ಕಾಂಗ್ರೆಸ್ ಸಹ ಜನಾಂದೋಲನ ಸಭೆಯನ್ನು ಸಹ ಮಾಡಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಟಿಜೆ ಅಬ್ರಹಾಂ ಮತ್ತೊಂದು ಖಾಸಗಿ ದೂರು ಸಲ್ಲಿಸಿದ್ದಾರೆ.