ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಇತ್ತೀಚೆಗೆ ನನ್ನನ್ನು ಗುರಿಮಾಡಿಕೊಂಡಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯನವರದು ಕಳಂಕರಹಿತವಾದ ವ್ಯಕ್ತಿತ್ವ ಎಂಬ ಮಾತು ಅವರ ನಿದ್ದೆಗೆಡಿಸುತ್ತಿದೆ. ಹಾಗಾಗಿ ಅವರು ಇಲ್ಲಸಲ್ಲದ ಕಿತಾಪತಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ಕುಮಾರಸ್ವಾಮಿ ಸೇರಿ ವಿಪಕ್ಷಗಳ ಹಲವು ನಾಯಕರು, ಮುಖಂಡರು ಮುಡಾ ಸೈಟ್ (MUDA site scandal) ಪಡೆದಿದ್ದಾರೆ. ಕುಮಾರಸ್ವಾಮಿ ಕೈಗಾರಿಕೆ ನಿರ್ಮಿಸಲು ಸೈಟ್ ಪಡೆದಿದ್ದರು. ಆದರೆ, ಕೈಗಾರಿಕೆ ಆರಂಭಿಸದೆ ಸಂಪೂರ್ಣವಾಗಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಏಳೂವರೆ ಕೋಟಿ ಜನರಿಗೆ ಆಗಿರುವ ಅನ್ಯಾಯದ ಬಗ್ಗೆ ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಇವರು ಪ್ರಶ್ನೆ ಮಾಡಿಲ್ಲ. ಇಲ್ಲಿ ವಿಧಾನಸಭೆಯನ್ನು ಅವರ ರಾಜಕಾರಣಕ್ಕೆ ಬಳಸಿಕೊಂಡರು, ಈಗ ಪಾರ್ಲಿಮೆಂಟನ್ನೂ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮುಡಾದಿಂದ ಪಡೆದಿರುವ ಸೈಟ್‌ಗಳ ವಿವರ ಮತ್ತು ಹೆಸರನ್ನು ಓದಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್, ಸಾ.ರಾ.ಮಹೇಶ್, ಸಿ.ಎನ್.ಮಂಜೇಗೌಡ ಸೇರಿ ಹಲವು ವಿಪಕ್ಷ ನಾಯಕರು, ಮುಖಂಡರು ಸೈಟ್ ಪಡೆದಿರುವ ಪಟ್ಟಿಯನ್ನು ಸಿಎಂ ಬಿಡುಗಡೆ ಮಾಡಿದರು.
ಗೋಮಾಳ ಸೇರಿ 200 ಎಕರೆ ಗುಳುಂ
ನಾನು ಕುಮಾರಸ್ವಾಮಿ ಅವರ ಕುಟುಂಬದ ಆಸ್ತಿಪಾಸ್ತಿಗಳ ಬಗ್ಗೆ ಮಾತನಾಡಲ್ಲ. ನನಗೆ ಏನು ಇಲ್ಲಿರುವ ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಅವುಗಳ ಸಂಖ್ಯೆ ಎಷ್ಟೋ , ಆಳವೆಷ್ಟೋ, ಉದ್ದವೆಷ್ಟೋ ತಿಳಿಯದು ಎಂದ ಸಿಎಂ, ಹಿಟ್ಲರ್‌ವಾದಿಗಳ ಜತೆಗೆ ಫ್ಯೂಡಲ್‌ವಾದಿಗಳು ಸೇರಿಕೊಂಡಿದ್ದಾರೆ. ಇಬ್ಬರೂ ಸೇರಿ ಟಾರ್ಗೆಟ್ ಮಾಡಿಕೊಂಡು ಓಡಾಡುತ್ತಿದ್ದಾರೆ. ನನ್ನ ಜೀವಿತಾವಧಿಯಲ್ಲಿ ಇಂಥ ಹಲವಾರು ಪಿತೂರಿಗಳನ್ನು ಎದುರಿಸಿದ್ದೇನೆ ಎಂದು ತಿಳಿಸಿದರು.
ಬೆಂಗಳೂರಿಗೆ ಹೊಂದಿಕೊಂಡಂತೆ ಬಿಡದಿಯ ಬಳಿ ಇರುವ ಕೇತಗಾನಹಳ್ಳಿಯ ಸರ್ವೆ ನಂಬರ್ 7,8,9,10,16 ಮತ್ತು 17ರಲ್ಲಿ ಒಟ್ಟು 110.32 ಎಕರೆ ಸರ್ಕಾರಿ ಗೋಮಾಳ ಸೇರಿ 200 ಎಕರೆ ಜಮೀನನ್ನು ಎಚ್. ಡಿ ಕುಮಾರಸ್ವಾಮಿ ಮತ್ತವರ ಕುಟುಂಬದವರು ಹಾಗೂ ಮದ್ದೂರು ಶಾಸಕರಾದ ಡಿ.ಸಿ. ತಮ್ಮಣ್ಣ ಮತ್ತವರ ಕುಟುಂಬದವರು ನಿಯಮಗಳನ್ನು ಉಲ್ಲಂಘಿಸಿ ಭೂ ಕಬಳಿಸಿರುವುದಾಗಿ ಆರೋಪಿಸಿದ ಸಿಎಂ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ 200 ಎಕರೆ ಸರ್ಕಾರಿ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಕೋರಿ ದಿನಾಂಕ 20214ರ ಆ. 25ರಂದು ಜಿಲ್ಲಾಧಿಕಾರಿಗಳಿಗೆ ಅಂದಿನ ಎಸಿ ಸಿದ್ದಪ್ಪ ಪತ್ರ ಬರೆದಿದ್ದರು.
ಇದನ್ನೂ ಓದಿ | MUDA Scam: ಮುಡಾ ಜಮೀನಿನ ಸಂಪೂರ್ಣ ದಾಖಲೆಗಳನ್ನು ತೆರೆದಿಟ್ಟ ಸಿಎಂ ಸಿದ್ದರಾಮಯ್ಯ; ಇಲ್ಲಿದೆ ವಿವರ
ಇದಕ್ಕೂ ಮೊದಲು ಎಸಿ ಸಿದ್ದಪ್ಪ ಅವರು 2011ರಲ್ಲಿ ಜಿ. ಮಾದೇಗೌಡ ಅವರು ಲೋಕಾಯುಕ್ತದಲ್ಲಿ ದಾಖಲಿಸಿದ್ದ ದೂರು ಪ್ರಕರಣದಲ್ಲಿ ವಿಚಾರಣೆ ನಡೆಸಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದರು. ಅವರ ಪ್ರಕಾರ, ಈ 200 ಎಕರೆ ಭೂಮಿಯಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79 ಎ ಮತ್ತು ಬಿ ಹಾಗೂ 66, ಪಿಟಿಸಿಎಲ್ ಕಾಯ್ದೆ, ಮುದ್ರಾಂಕ ಪಾವತಿಸದೆ ಮೋಸ ಮಾಡಿರುವುದು, ಸರ್ಕಾರಿ ಜಮೀನುಗಳನ್ನು ಕಬಳಿಸಲಾಗಿದೆ ಹಾಗೂ ಕಂದಾಯ ಇಲಾಖೆಯ ಮಾಹಿತಿಗಳ ಪ್ರಕಾರ ಕೇತಗಾನಹಳ್ಳಿಯ ಸ. ನಂ 60 ಮತ್ತು 62 ರಲ್ಲಿ ವ್ಯಾಪಕವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ದ್ರೋಹ ಮಾಡಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದರು.
ಇನ್ನು 2011ರ ಮಾರ್ಚ್ 17ರಂದು ಮೈಸೂರು ಮುಡಾದಲ್ಲಿ 60000 ಅಡಿ ಭೂಮಿ ಹಂಚಿಕೆಯ ಕುರಿತು ವಿಧಾನಪರಿಷತ್‌ನಲ್ಲಿ ಯಡಿಯೂರಪ್ಪನವರು ದಾಖಲೆಗಳನ್ನು ಅಂದಿನ ಸಭಾಪತಿಗಳಿಗೆ ನೀಡಿರುವುದು ದಾಖಲಾಗಿದೆ. ಯಡಿಯೂರಪ್ಪನವರು ನೇರವಾಗಿ ಎಚ್.ಡಿ. ದೇವೇಗೌಡರು ನಿಯಮಗಳನ್ನು ಗಾಳಿಗೆ ತೂರಿ 48 ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ಹಂಚಿಕೆ ಮಾಡಿರುವ ದಾಖಲೆ ಒದಗಿಸಿದ್ದರು ಎಂದು ಸಿಎಂ ತಿಳಿಸಿದರು.
ಎಚ್. ಡಿ ಕುಮಾರಸ್ವಾಮಿಯವರಿಗೆ 1984 ನ.7ರಂದು 75*280 ಅಡಿ ಒಟ್ಟು 21,000 ಅಡಿಗಳ ಕೈಗಾರಿಕಾ ನಿವೇಶನ ಮೈಸೂರಿನ ಸಿಐಟಿಬಿಯಿಂದ ಮಂಜೂರಾಗಿದೆ. ಚದರ ಗಜಕ್ಕೆ 16 ರೂಪಾಯಿಯಂತೆ 37,334 ರೂಪಾಯಿಗಳಿಗೆ ಅಭಿವೃದ್ಧಿಪಡಿಸಿದ ಕೈಗಾರಿಕಾ ನಿವೇಶನವನ್ನು ಇಂಡಸ್ಟ್ರಿಯಲ್ ಸಬರ್ಬನ್ 3ನೇ ಹಂತದಲ್ಲಿ ಮಂಜೂರು ಮಾಡಿದ್ದರು. ಮಂಜೂರಾತಿ ಪತ್ರದಲ್ಲಿ ಎರಡು ವರ್ಷದೊಳಗೆ ಅಲ್ಲಿ ಕೈಗಾರಿಕೆ ಪ್ರಾರಂಭಿಸಬೇಕು ಎಂದು ಷರತ್ತು ವಿಧಿಸಿದ್ದರು. 1985 ರಲ್ಲಿ ಸ್ವಾಧೀನ ಪತ್ರ ಕೊಟ್ಟಿದ್ದಾರೆ. ಆದರೂ ಕುಮಾರಸ್ವಾಮಿ ಕೈಗಾರಿಕೆ ನಿರ್ಮಿಸಿಲ್ಲ. ಇಂಡಸ್ಟ್ರಿಯಲ್ ನಿವೇಶನ ಬೇರೆ ಯಾರಿಗಾದರೂ ಕೊಟ್ಟಿದ್ದರೆ ಅಲ್ಲಿ ಕೈಗಾರಿಕೆ ಸ್ಥಾಪನೆಯಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದವು. ಸರ್ಕಾರಕ್ಕೆ ಆದಾಯವೂ ಬರುತ್ತಿತ್ತು. ಕುಮಾರಸ್ವಾಮಿ ಅದನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆ.
ಇದನ್ನೂ ಓದಿ | BJP Protest: ಸಂಸತ್ ಬಳಿ ರಾಜ್ಯ ಬಿಜೆಪಿ ಸಂಸದರ ಪ್ರತಿಭಟನೆ; ವಾಲ್ಮೀಕಿ ನಿಗಮ ಅಕ್ರಮ, ಮುಡಾ ಹಗರಣ ಸಿಬಿಐ ತನಿಖೆಗೆ ನೀಡಲು ಆಗ್ರಹ
ದಿನಾಂಕ 18-2-2017 ರಲ್ಲಿ ಮುಡಾ ಆಯುಕ್ತರಿಗೆ ಬದಲಿ ನಿವೇಶನ ಕೊಡುವಂತೆ ಕುಮಾರಸ್ವಾಮಿ ಮನವಿ ಕೊಟ್ಟಿದ್ದಾರೆ. ಅವರಿಗೆ ಬದಲಿ ನಿವೇಶನ ಕೊಡಲು 7-1-2023 ರಂದು ಮುಡಾ ನಿರ್ಣಯ ಮಾಡಿದೆ. ಅದೇ ಜಾಗದಲ್ಲಿ ಅಕ್ರಮವಾಗಿದ್ದ ಇನ್ನೊಬ್ಬರು ವ್ಯಕ್ತಿ ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಇದು ನಿಂತಿದೆ. ಇಷ್ಟೆಲ್ಲ ಅಕ್ರಮ ಮಾಡಿ ಕುಮಾರಸ್ವಾಮಿ ವೇದಾಂತ ಮಾತಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.