ಚಿಕ್ಕಮಗಳೂರು: ಬಿಜೆಪಿ ತಾಲೂಕು ಅಧ್ಯಕ್ಷರ ನೇಮಕ ವಿಚಾರಕ್ಕೆ ಮಾರಾಮಾರಿ ನಡೆದಿರುವ ಘಟನೆ ಮೂಡಿಗೆರೆಯ ತಾಲೂಕು ಬಿಜೆಪಿ ಕಚೇರಿ ಬಳಿ ನಡೆದಿದೆ. ಬಟ್ಟೆ ಹರಿದುಕೊಂಡು ಬಿಜೆಪಿ ಮುಖಂಡರು ಪರಸ್ಪರ ಕಿತ್ತಾಡಿದ್ದು, ಈ ವೇಳೆ ನಡೆದ ತೀವ್ರ ಹಲ್ಲೆಯಿಂದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಾಯಗೊಂಡಿದ್ದಾರೆ.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರತನ್ ಮೇಲೆ ಹಲ್ಲೆ ನಡೆದಿದೆ. ಮೂಡಿಗೆರೆ ತಾಲೂಕಿನ ಬಿಜೆಪಿ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ನೇಮಕವಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಘೋಷಿಸಿದ್ದಾರೆ. ಈ ವೇಳೆ ನೂತನ ಅಧ್ಯಕ್ಷರ ನೇಮಕಕ್ಕೆ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್ ಹಸ್ತಕ್ಷೇಪದಿಂದ ಅಧ್ಯಕ್ಷ ಸ್ಥಾನ ಕೈತಪ್ಪಿದೆ ಎಂದು ಅವರ ಮೇಲೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಣ್ಣ ಹಾಗೂ ಮತ್ತೊಬ್ಬ ಆಕಾಂಕ್ಷಿ ಭರತ್ ಅಸಮಾಧಾನ ಹೊರಹಾಕಿ, ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಯಿಂದ ಗಾಯಗೊಂಡ ಕೆ.ಸಿ. ರತನ್ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Missing case : ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ನಾಪತ್ತೆ
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಜೇಂದ್ರ ಟೀಮ್ ಹಾಗೂ ಆಕಾಂಕ್ಷಿಗಳ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ಮೂಡಿಗೆರೆ ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ 12 ಆಕಾಂಕ್ಷಿಗಳು ಇದ್ದರು. ಆದರೆ, ತಾಲೂಕಿನ ವಿವಿಧ ಮಂಡಲ, ಮೋರ್ಚಾ ಅಧ್ಯಕ್ಷರ ನೇಮಕ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಜಮೀನು ಮಾರಾಟದಲ್ಲಿ ಕಿರಿಕ್; ಮಾರಣಾಂತಿಕ ಹಲ್ಲೆಗೆ ರಕ್ತಕಾರಿ ಸತ್ತ ಯುವಕ
ದೇವನಹಳ್ಳಿ: ಕಳೆದ ವಾರ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಪುಂಡರನ್ನು ಕರೆತಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ (Murder Case) ನಡೆಸಲಾಗಿತ್ತು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಸಂಜಯ್ (26) ಎಂಬಾತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಆ ಕುಟುಂಬ ತಮ್ಮ ಜಮೀನನ್ನು ಬೇರೆಯವರಿಗೆ ಅಗ್ರಿಮೆಂಟ್ ಮಾಡಿ ಕೊಟ್ಟ ಸ್ವಲ್ಪ ಹಣವನ್ನು ಪಡೆದಿದ್ದರು. ಆದರೆ ಅದೇ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಲು ಮುಂದಾಗಿದ್ದರು. ಇದರಿಂದ ಅಗ್ರಿಮೆಂಟ್ ಮಾಡಿಕೊಂಡಿದ್ದ ವ್ಯಕ್ತಿ ಗುಂಪು ಕಟ್ಟಿಕೊಂಡು ಜಮೀನಿನ ಮಾಲೀಕರ ನಡುವೆ ಮಾರಮಾರಿಯೇ ನಡೆದು ಹೋಗಿತ್ತು. ಜಮೀನಿನ ಗಲಾಟೆಯಲ್ಲಿ 9 ಮಂದಿ ಆಸ್ಪತ್ರೆ ಪಾಲಾಗಿದ್ದರು. ಅದರಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡಿದ ಸಂಜಯ್ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಹರಳೂರು ಗ್ರಾಮದ ಬಳಿ ರೈತ ನಾರಾಯಣಸ್ವಾಮಿ ಎಂಬುವವರಿಗೆ ಸೇರಿದ 2 ಎಕರೆ ಜಾಗವಿತ್ತು. ಈ ನಡುವೆ ಬಾಲೇಪುರದ ಶ್ರೀನಿವಾಸ್ ಎಂಬುವವರ ಬಳಿ ಮೂರು ಲಕ್ಷ ರೂ. ಹಣ ಪಡೆದಿದ್ದ ನಾರಾಯಣಸ್ವಾಮಿ, ಜಮೀನು ಕೊಡುವುದಾಗಿ ಒಡಂಬಡಿಕೆ ಮಾಡಿಕೊಂಡಿದ್ದರು. ಆದರೆ ಈ ನಡುವೆ ನಾರಾಯಣಸ್ವಾಮಿ ಕುಟುಂಬಸ್ಥರು ಶ್ರೀನಿವಾಸ್‌ಗೆ ಈ ಹಿಂದೆ ಪಡೆದಿದ್ದ ಮೂರು ಲಕ್ಷ ಹಣವನ್ನು ಹಿಂದಿರುಗಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಗ್ರಾಮದಲ್ಲಿ ಪಂಚಾಯ್ತಿ ನಡೆದು ಇಬ್ಬರ ನಡುವೆ ಗಲಾಟೆಯು ನಡೆದಿತ್ತು. ಆದರೆ ಅದೇ ಜಮೀನಲ್ಲಿ ನಾರಾಯಣಸ್ವಾಮಿ ಬೋರ್‌ವೆಲ್ ಕೊರೆಸಲು ಮುಂದಾಗಿದ್ದರು. ಅಗ್ರಿಮೆಂಟ್ ಮಾಡಿಕೊಂಡಿದ್ದ ಶ್ರೀನಿವಾಸ್‌ಗೆ ಈ ವಿಚಾರವು ಕೆರಳಿಸಿತ್ತು.
ಹೀಗಾಗಿ ಜಮೀನಿಗೆ ತೆರಳಿ ನಾರಾಯಣ ಸ್ವಾಮಿ ಜತೆಗೆ ಗಲಾಟೆ ಮಾಡಿದ್ದರು. ಒಂದಷ್ಟು ರೌಡಿಗಳನ್ನು ಕರೆದುಕೊಂಡು ಬಂದ ಶ್ರೀನಿವಾಸ್ ನನಗೆ ಅಗ್ರಿಮೆಂಟ್ ಹಾಕಿದ್ದ ಜಾಗದಲ್ಲೇ ಬೋರ್‌ವೇಲ್ ಹಾಕಿಸುತ್ತೀರಾ ಎಂದು ಮಾಲೀಕ ನಾರಾಯಣಸ್ವಾಮಿ ಕುಟುಂಬದ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ದೊಣ್ಣೆ, ಮಚ್ಚುಗಳಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದರು. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಇನ್ನೂ ಘಟನೆಯಲ್ಲಿ ಜಮೀನು ಮಾಲೀಕ ನಾರಾಯಣಸ್ವಾಮಿ ಹಾಗೂ ಪತ್ನಿ, ಮಗ ಸೇರಿದಂತೆ ಸಂಬಂಧಿಕರುಗಳಿಗೆ ಗಾಯಗಳಾಗಿತ್ತು. ಒಟ್ಟು ಗಾಯಗೊಂಡ 9 ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಆದರೆ ನಾರಾಯಣಸ್ವಾಮಿ ಮಗ ಸಂಜಯ್ ಗಂಭೀರ ಗಾಯಗೊಂಡಿದ್ದರಿಂದ ಫೆ.9ರಂದು ಅಸುನೀಗಿದ್ದಾನೆ.
ಇದನ್ನೂ ಓದಿ | Murder Case : ತಾಯಿಯಿಂದಲೇ ಮಗುವಿನ ಮರ್ಡರ್; ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಕೊಂದಳೇ?
ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಮೀನು ಅಗ್ರಿಮೆಂಟ್ ಮಾಡಿಕೊಂಡಿದ್ದ ಶ್ರೀನಿವಾಸ್ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಕೂತು ಬಗೆಹರಸಿಕೊಳ್ಳಬಹುದಾದ ವಿಚಾರವು ಕೊಲೆಯಲ್ಲಿ ಅಂತ್ಯವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ