Site icon Vistara News

ಮುಖ್ಯಮಂತ್ರಿ ಚಂದ್ರುಗೆ ಆಮ್‌ ಆದ್ಮಿ ಪಕ್ಷದ ರಾಜ್ಯಮಟ್ಟದ ಹೊಣೆಗಾರಿಕೆ

Mukhyamantri chandru aap

ಬೆಂಗಳೂರು: ಇತ್ತೀಚೆಗೆ ಕಾಂಗ್ರೆಸ್‌ ಪಕ್ಷವನ್ನು ತೊರೆದು ಆಮ್‌ ಆದ್ಮಿ ಪಕ್ಷವನ್ನು (ಆಪ್‌) ಸೇರ್ಪಡೆಯಾಗಿದ್ದ ಹಿರಿಯ ಕಲಾವಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರಿಗೆ ರಾಜ್ಯಮಟ್ಟದ ಹೊಣೆಗಾರಿಕೆ ನೀಡಲಾಗಿದೆ.

ಕರ್ನಾಟಕ ಆಮ್ ಆದ್ಮಿ ಪಕ್ಷದ ಜನಸಂಪರ್ಕ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ಅವರನ್ನು ರಾಜ್ಯ ಆಪ್‌ ಅಧ್ಯಕ್ಷ ಪೃಥ್ವಿ ರೆಡ್ಡಿ ಸೋಮವಾರ ನೇಮಿಸಿದ್ದಾರೆ. ಅರವಿಂದ ಕೇಜ್ರಿವಾಲ್‌ ಅವರ ಆದೇಶದ ಮೇರೆಗೆ ಮುಖ್ಯಮಂತ್ರಿ ಚಂದ್ರು ಅವರನ್ನು ನೇಮಕ ಮಾಡಲಾಗಿದೆ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ.

ಹೊಣೆ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಚಂದ್ರು “”ರಾಜ್ಯಾದ್ಯಂತ ಪ್ರವಾಸ ಮಾಡಿ, ಯಾವ ಕಾರಣಕ್ಕೆ ಆಪ್‌ ಪಕ್ಷ ಅಧಿಕಾರಕ್ಕೆ ಬರಬೇಕು? ನಿಮಗೆ ಇರುವ ಸಮಸ್ಯೆಗಳೇನು ಎಂಬುದನ್ನು ಜನರಿಂದ ತಿಳಿಯುತ್ತೇವೆ. ಮೂರೂ ಪಕ್ಷಗಳ ಆಡಳಿತ ವೈಖರಿ, ಲೋಪಗಳು ಹಾಗೂ ಬಿಜೆಪಿಯ ತಾರತಮ್ಯ ಧೋರಣೆಗಳನ್ನು ಪ್ರಸ್ತಾಪಿಸುತ್ತೇವೆ. ರಾಜ್ಯದ ಮೂಲೆಮೂಲೆ ತಿರುಗಿ ಕರ್ನಾಟಕಕ್ಕೆ ಆಪ್‌ ಅಗತ್ಯತೆಯನ್ನು ಸಾರಿ ಹೇಳುವೆʼʼ ಎಂದು ತಿಳಿಸಿದರು.

ರಾಮಕೃಷ್ಣ ಹೆಗಡೆ ಅವರ ಒತ್ತಾಯದ ಮೇರೆಗೆ ಗೌರಿಬಿದನೂರಿನಿಂದ ಒಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ಚಂದ್ರು ಮುಂದಿನ ದಿನಗಳಲ್ಲಿ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಮುಂದುವರಿದವರು. ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿದ್ದರು. ಬಿಜೆಪಿ ಅವಧಿಯಲ್ಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಲಾಗಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಅಧಿಕಾರಕ್ಕೆ ಬಂದು ಉಳಿದ ಅಕಾಡೆಮಿಗಳ ಅಧ್ಯಕ್ಷರು ಬದಲಾದರೂ ಮುಖ್ಯಮಂತ್ರಿ ಚಂದ್ರು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮುಂದುವರಿದಿದ್ದರು. ಹಾಗೆಯೇ ನಿಧಾನವಾಗಿ ಕಾಂಗ್ರೆಸ್‌ ಕಡೆ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ | ಕಾಂಗ್ರೆಸ್‌ಗೂ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಚಂದ್ರು: ರಾಜ್ಯಸಭೆ ಟಿಕೆಟ್‌ ಸಿಗದ್ದಕ್ಕೆ ಸಿಟ್ಟು

Exit mobile version