ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಜೀವನ ಕಥೆ ಆಧರಿಸಿದ ʻಸ್ಕ್ಯಾಮ್ 2003: ದ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಂ ಲಾಲಾ ತೆಲಗಿʼ ವೆಬ್ ಸೀರಿಸ್ ಪ್ರಸಾರವನ್ನು ತಡೆಯಲು ಮುಂಬಯಿಯ ನ್ಯಾಯಾಲಯ ನಿರಾಕರಿಸಿದೆ.
ತೆಲಗಿ ಅವರ ಪುತ್ರಿ ಮತ್ತು ಅಳಿಯ ಸಲ್ಲಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಆರ್ ಕೆ ಕ್ಷೀರಸಾಗರ್ ಅವರು ಈ ಅಭಿಪ್ರಾಯ ಹೇಳಿದರು. ಹನ್ಸಾಲ್ ಮೆಹ್ತಾ ನಿರ್ದೇಶನದ ಈ ವೆಬ್ ಸೀರಿಸ್‌ನ್ನು ಸೋನಿ ಲೈವ್ ಪ್ರಸಾರ ಮಾಡಲು ಒಡಂಬಡಿಕೆ ಆಗಿದೆ.
ಸರಣಿ ನಿರ್ಮಿಸುವ ಮುನ್ನ ತಮ್ಮ ಒಪ್ಪಿಗೆ ಪಡೆದಿಲ್ಲ, ಇದು ಕುಟುಂಬ ಖಾಸಗಿತನ ಸ್ವಾಭಿಮಾನ ಹಾಗೂ ಘನತೆಗೆ ಧಕ್ಕೆ ತರುತ್ತದೆ. ಪತ್ರಕರ್ತರೊಬ್ಬರು ಬರೆದ ಕೃತಿಯನ್ನು ಇದು ಆಧರಿಸಿದ್ದರೂ ವಾಸ್ತವ ಸಂಗತಿಗಳಿಗಿಂತ ದೂರವಿದೆ. ತೆಲಗಿ ಅವರ ಪಾತ್ರದ ಚಿತ್ರಣ ಆಧಾರರಹಿತವಾಗಿದ್ದು ಅವಹೇಳನಕಾರಿ, ಆಕ್ರಮಣಕಾರಿ, ಅಹಿತಕರವಾಗಿದ್ದು, ಮಾನಹಾನಿಕರವಾಗಿದೆ ಎಂದು ವಿವರಿಸಲಾಗಿತ್ತು.
ನಿರ್ದೇಶಕ ಹನ್ಸಾಲ್ ಮೆಹ್ತಾ ಮತ್ತು ಅಪ್ಲಾಸ್ ಎಂಟರ್‌ಟೈನ್ಮೆಂಟ್, ಸೋನಿಲೈವ್ ಅಥವಾ ಇನ್ನಾವುದೇ ವಾಹಿನಿ ಇಲ್ಲವೇ ಇನ್ನಾವುದೇ ಆನ್‌ಲೈನ್ ಪ್ರಸಾರ ವೇದಿಕೆ ಚಿತ್ರವನ್ನು ಪ್ರದರ್ಶಿಸದಂತೆ ಪ್ರತಿಬಂಧಿಸಬೇಕು ಎಂದು ಕೋರಲಾಯಿತು. ಇತ್ತ ಸೋನಿಲೈವ್ ಪರ ವಾದಿಸಿದ ವಕೀಲರಾದ ರಶ್ಮೀನ್ ಖಾಂಡೇಕರ್, ತಮ್ಮ ವಾದವನ್ನು ಆಲಿಸಲು ಅವಕಾಶ ನೀಡದೆ ಯಾವುದೇ ಆದೇಶ ನೀಡದಂತೆ ಕೋರಿದರು. ಸರಣಿಯು ಇನ್ನೂ ತಯಾರಿಕೆಯ ಹಂತದಲ್ಲಿದ್ದು ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಂಭವವಿಲ್ಲ. ಅಲ್ಲದೆ, ಸರಣಿಯು ಸಾರ್ವಜನಿಕವಾಗಿ ಲಭ್ಯವಾಗಿರುವ ಮಾಹಿತಿಯನ್ನೇ ಆಧರಿಸಿದೆ ಎಂದು ವಾದಿಸಿದರು.
ಯಾರಿವನು ಅಬ್ದುಲ್ ಕರೀಂ ತೆಲಗಿ?
ನಕಲಿ ಛಾಪಾ ಕಾಗದ ತಯಾರಿಕೆ ಮತ್ತು ವಿತರಣೆ ಪ್ರಕರಣದಲ್ಲಿ ತೆಲಗಿ ಪ್ರಮುಖ ಆರೋಪಿ. ಬೆಂಗಳೂರಿನಲ್ಲಿ 2001 ರ ನವೆಂಬರ್ 22ರಂದು ತೆಲಗಿಯನ್ನು ಬಂಧಿಸಲಾಯಿತು. ಆತನ ವಿರುದ್ಧ 11 ರಾಜ್ಯಗಳಲ್ಲಿ 48 ಪ್ರಕರಣಗಳು ದಾಖಲಾಗಿದ್ದವು. ಪುಣೆಯ ಹೈ ಪ್ರೊಫೈಲ್ ಪ್ರಕರಣವೊಂದರಲ್ಲಿಯೇ ಪೊಲೀಸರು 500 ರೂ. ಕೋಟಿ ಮೌಲ್ಯದ ಸ್ಟ್ಯಾಂಪ್ ಪೇಪರ್ ಅನ್ನು ವಶಪಡಿಸಿಕೊಂಡಿದ್ದರು. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ (MCOCA) ಈ ಎಲ್ಲಾ ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸಲಾಯಿತು. ಅಂತಿಮವಾಗಿ ತೆಲಗಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗಲೇ 2017 ರಲ್ಲಿ ಮೃತಪಟ್ಟಿದ್ದ.
ಇದನ್ನೂ ಓದಿ | Murugha seer case | ಶ್ರೀಗಳ ವಿರುದ್ಧ ಸುಳ್ಳು ಕೇಸಿಗೆ ಪಿತೂರಿ ಆರೋಪ: ಎಸ್.ಕೆ. ಬಸವರಾಜನ್‌ಗೆ ಹೈಕೋರ್ಟ್ ಜಾಮೀನು